
ನವದೆಹಲಿ, ಮೇ 13: ಮಧ್ಯಪ್ರಾಚ್ಯ ಯುದ್ಧ ಹಾಗೂ ಅಂತರರಾಷ್ಟ್ರೀಯ ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ ಒಂದು ವರ್ಷ ಚಿನ್ನ ಖರೀದಿ ಮಾಡದಂತೆ ಹಾಗೂ ಇಂಧನ ಮಿತ ಬಳಕೆಗೆ ದೇಶದ ಜನತೆಗೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಇದೀಗ ತಾವೇ ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಖುದ್ದು ತಮ್ಮದೇ ಎಸ್‌ಪಿಜಿ ಭದ್ರತಾ ಪಡೆಗೆ ನಿಯೋಜನೆಗೊಳ್ಳುವ ವಾಹನಗಳ ಸಂಖ್ಯೆಯಲ್ಲಿ ಕಡಿತ ಹಾಗೂ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರಧಾನಿ ಕಚೇರಿ ಸೂಚನೆ ನೀಡಿದೆ.
ಭಾರತವು ಕಚ್ಚಾ ತೈಲ, ಚಿನ್ನ ಮತ್ತು ಅಡುಗೆ ಎಣ್ಣೆಯಂತಹ ಅನೇಕ ಉತ್ಪನ್ನಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದರಿಂದ ದೇಶದ ಆರ್ಥಿಕತೆಯ ಮೇಲೆ ಅವುಗಳ ಖರೀದಿಯು ಬೀರುವ ಪರಿಣಾಮಗಳ ಬಗ್ಗೆ ಮೋದಿ ಇತ್ತೀಚೆಗೆ ನೀಡಿದ ಸಂದೇಶದಲ್ಲಿ ಪ್ರಸ್ತಾಪಿಸಿದ್ದರು. ವಿದೇಶಿ ವಿನಿಮಯವನ್ನು ಉಳಿಸಲು, ಈ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವಂತೆ ಅವರು ಕರೆ ನೀಡಿದ್ದರು. ಈಗ ತಮ್ಮದೇ ಭದ್ರತಾ ಪಡೆಯಲ್ಲಿ ಬದಲಾವಣೆಗಳನ್ನು ತರುವ ಮೂಲಕ, ಅವರು ಆ ಮಾತುಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.
ಪ್ರಧಾನಿ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಶೇ 50ರಷ್ಟು ಕಡಿತಗೊಳಿಸುವಂತೆ ಪಿಎಂಒ ಆದೇಶಿಸಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದು ಮಿತವ್ಯಯದ ಕ್ರಮಗಳ ಭಾಗವಾಗಿದ್ದು, ಸರ್ಕಾರದ ವೆಚ್ಚಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಇಂಧನ ಉಳಿತಾಯದ ಜೊತೆಗೆ, ಎಲೆಕ್ಟ್ರಿಕ್ ವಾಹನಗಳ ಬಳಕೆಯು ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅಲ್ಲದೆ, ಬೆಂಗಾವಲು ಪಡೆಯ ಗಾತ್ರ ಚಿಕ್ಕದಾಗುವುದರಿಂದ ರಸ್ತೆಗಳಲ್ಲಿ ಸಂಚಾರದ ವೇಳೆ ಉಂಟಾಗುವ ಅಡಚಣೆಗಳನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ.
ಈ ಕ್ರಮಗಳು ಕೇವಲ ಪ್ರಧಾನಿ ಕಚೇರಿಗೆ ಸೀಮಿತವಾಗಿಲ್ಲ. ಕೇಂದ್ರ ಸಚಿವರು ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಇದೇ ರೀತಿಯ ಸೂಚನೆಯನ್ನು ಪ್ರಧಾನಿ ನೀಡಿದ್ದಾರೆ. ಇಂಧನ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡುವಂತೆ ಮತ್ತು ಬೆಂಗಾವಲು ಪಡೆಯನ್ನು ಆದಷ್ಟು ಕಡಿಮೆ ಮಾಡುವಂತೆ ಅವರು ಕರೆ ನೀಡಿದ್ದಾರೆ. ಇದು ಇಂಧನ ಉಳಿತಾಯಕ್ಕೆ ರಾಷ್ಟ್ರವ್ಯಾಪಿ ಚಳುವಳಿಗೆ ನಾಂದಿ ಹಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ವರ್ಕ್ ಫ್ರಂ ಹೋಂ, ಆನ್ಲೈನ್ ಕ್ಲಾಸ್, ಚಿನ್ನ ಬೇಡ, ಇಂಧನದ ಮಿತ ಬಳಕೆ; ಮತ್ತೊಮ್ಮೆ ಪ್ರಧಾನಿ ಮೋದಿ ಮನವಿ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:18 am, Wed, 13 May 26