‘ಕರ್ನಾಟಕದಲ್ಲಿ ಖರ್ಗೆ ಕುಟುಂಬದಿಂದ 100 ಕೋಟಿ ಮೌಲ್ಯದ ಸರ್ಕಾರಿ ಭೂಮಿ ಲೂಟಿ’; ಬಿಜೆಪಿಯಿಂದ ಗಂಭೀರ ಆರೋಪ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಮಗನಾದ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಇಂದು ಅತ್ಯಂತ ಗಂಭೀರವಾದ ಭ್ರಷ್ಟಾಚಾರ ಮತ್ತು ಭೂ ಅಕ್ರಮದ ಆರೋಪಗಳನ್ನು ಹೊರಿಸಿದೆ. ಖರ್ಗೆ ಕುಟುಂಬದ ಒಡೆತನದ 'ಸಿದ್ದಾರ್ಥ ವಿಹಾರ್ ಟ್ರಸ್ಟ್' ಮೂಲಕ ಕರ್ನಾಟಕದಲ್ಲಿ ಬಡವರಿಗೆ ಮತ್ತು ಸರ್ಕಾರಕ್ಕೆ ಸೇರಿದ ಸುಮಾರು 100 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಪ್ರಮುಖ ಜಮೀನುಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಮುಖ್ಯಾಂಶಗಳು
- ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಗಂಭೀರ ಆರೋಪ
- ಸಿದ್ಧಾರ್ಥ ವಿಹಾರ್ ಟ್ರಸ್ಟ್ ಮೂಲಕ ಸರ್ಕಾರದ 100 ಕೋಟಿ ಬೆಲೆಯ ಭೂ ಕಬಳಿಕೆ ಆರೋಪ
- ಖರ್ಗೆ ಕುಟುಂಬದ ವಿರುದ್ಧ 3 ಪ್ರಮುಖ ಹಗರಣದ ಆರೋಪ
ನವದೆಹಲಿ, ಜೂನ್ 24: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಅವರ ಕುಟುಂಬದ ಒಡೆತನದ ಸಿದ್ಧಾರ್ಥ ವಿಹಾರ್ ಟ್ರಸ್ಟ್‌ಗೆ (Siddharth Vihar Trust) ಕರ್ನಾಟಕದಲ್ಲಿ ನಿಯಮ ಬಾಹಿರವಾಗಿ ಭೂಮಿ ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ಭ್ರಷ್ಟಾಚಾರದ ಆರೋಪ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬಸ್ಥರು ಮುನ್ನಡೆಸುತ್ತಿರುವ ಖಾಸಗಿ ಟ್ರಸ್ಟ್‌ಗೆ ಕರ್ನಾಟಕದಲ್ಲಿ 100 ಕೋಟಿ ರೂ. ಮೌಲ್ಯದ ಪ್ರಮುಖ ಸರ್ಕಾರಿ ಜಮೀನನ್ನು ನಿಯಮ ಉಲ್ಲಂಘಿಸಿ ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರು ಖರ್ಗೆ ಕುಟುಂಬದ ವಿರುದ್ಧ ಅಧಿಕಾರ ದುರುಪಯೋಗ ಮತ್ತು ಭೂ ಅಕ್ರಮದ ಆರೋಪಗಳನ್ನು ಹೊರಿಸಿದ್ದಾರೆ.
ನವದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಅವರು ಖರ್ಗೆ ಕುಟುಂಬದ ವಿರುದ್ಧದ ಮೂರು ಪ್ರಮುಖ ಭೂ ಹಗರಣಗಳ ವಿವರಗಳನ್ನು ಬಿಡುಗಡೆ ಮಾಡಿದ್ದಾರೆ. ಪ್ರದೀಪ್ ಭಂಡಾರಿ ಅವರ ಪ್ರಕಾರ, ‘ಸಿದ್ದಾರ್ಥ ವಿಹಾರ್ ಟ್ರಸ್ಟ್’ನಲ್ಲಿ ಕೇವಲ ಖರ್ಗೆ ಕುಟುಂಬದ ಸದಸ್ಯರು ಮಾತ್ರ ಇದ್ದಾರೆ. “ಸಿದ್ದಾರ್ಥ ವಿಹಾರ್ ಟ್ರಸ್ಟ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಅವರ ಪುತ್ರ ಪ್ರಿಯಾಂಕ್ ಖರ್ಗೆ, ಖರ್ಗೆ ಅವರ ಅಳಿಯ ಮತ್ತು ಅವರ ಧರ್ಮಪತ್ನಿ ಸದಸ್ಯರಾಗಿದ್ದಾರೆ. ಇಡೀ ಕುಟುಂಬವೇ ಸೇರಿಕೊಂಡು ತಮ್ಮ ರಾಜಕೀಯ ಪ್ರಭಾವ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕರ್ನಾಟಕದ ವಿವಿಧೆಡೆ ಬಡವರ ಭೂಮಿಯನ್ನು ಲೂಟಿ ಮಾಡಿದೆ” ಎಂದು ಪ್ರದೀಪ್ ಭಂಡಾರಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ: ರಾಜ್ಯ ನಾಯಕರಿಗೆ ಮಹತ್ವದ ಸೂಚನೆ ನೀಡಿದ ಬಿಜೆಪಿ ಹೈಕಮಾಂಡ್
ಬಿಜೆಪಿ ಆರೋಪಿಸಿದ 3 ಪ್ರಮುಖ ಭೂ ಹಗರಣಗಳು:
ಏರೋಸ್ಪೇಸ್ ಪಾರ್ಕ್‌ನಲ್ಲಿ 5 ಎಕರೆ ಜಮೀನು ಹಂಚಿಕೆ:
“ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ 2024ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ವತಿಯಿಂದ ‘ಏರೋಸ್ಪೇಸ್ ಮತ್ತು ಡಿಫೆನ್ಸ್ ಸಂಶೋಧನೆ ಮತ್ತು ಅಭಿವೃದ್ಧಿ’ ಹೆಸರಿನಲ್ಲಿ ಸಿದ್ದಾರ್ಥ ವಿಹಾರ್ ಟ್ರಸ್ಟ್‌ಗೆ ಭಾರಿ ಮೌಲ್ಯದ 5 ಎಕರೆ ಜಮೀನನ್ನು ಹಂಚಿಕೆ ಮಾಡಲಾಗಿದೆ. ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಬೇಕಿದ್ದ ಈ ಜಮೀನನ್ನು ಖರ್ಗೆ ಅವರ ಖಾಸಗಿ ಟ್ರಸ್ಟ್‌ಗೆ ನೀಡಲಾಗಿದ್ದು, ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 100 ಕೋಟಿ ರೂ.” ಎಂದು ಬಿಜೆಪಿ ಹೇಳಿದೆ.
#WATCH | Delhi | BJP leader Pradeep Bhandari says, “We allege that Congress President Mallikarjun Kharge and his son (Priyank Kharge) are looting land through a trust called Siddharth Vihar Trust… I will present several cases of corruption in which Mallikarjun Kharge, through… pic.twitter.com/VS1JK3acl3
— ANI (@ANI) June 24, 2026
ಕಲ್ಬುರ್ಗಿಯಲ್ಲಿ 19 ಎಕರೆ ಸರ್ಕಾರಿ ಭೂಮಿ ಸ್ವಾಧೀನ:
“ಕರ್ನಾಟಕ ಸರ್ಕಾರವು ಕಲ್ಬುರ್ಗಿಯಲ್ಲಿ ಬರೋಬ್ಬರಿ 19 ಎಕರೆ ಸರ್ಕಾರಿ ಜಮೀನನ್ನು ಖರ್ಗೆ ಅವರ ಖಾಸಗಿ ಟ್ರಸ್ಟ್‌ಗೆ ಪರಭಾರೆ ಮಾಡಿದೆ. ಸರ್ಕಾರದ ಆಸ್ತಿಯಾಗಿದ್ದ 19 ಎಕರೆ ಭೂಮಿ ರಾತ್ರೋರಾತ್ರಿ ಖರ್ಗೆ ಕುಟುಂಬದ ಖಾಸಗಿ ಸ್ವತ್ತಾಗಿ ಬದಲಾಗಿದೆ. ಮಲ್ಲಿಕಾರ್ಜುನ ಖರ್ಗೆ ತಮ್ಮ ಅಧಿಕಾರ ಬಳಸಿ ಈ ಭೂಮಿಯನ್ನು ಹೇಗೆ ಕಬಳಿಸಿದರು ಎಂಬುದಕ್ಕೆ ಕಾಂಗ್ರೆಸ್ ಉತ್ತರ ನೀಡಬೇಕು” ಎಂದು ಪ್ರದೀಪ್ ಭಂಡಾರಿ ಆಗ್ರಹಿಸಿದ್ದಾರೆ.
Delhi: BJP National Spokesperson Pradeep Bhandari says, “The first case of land loot I want to present before you is about the Siddharth Viyara Trust. In 2024, the Karnataka Industrial Area Development Board (KIADB) allotted five acres of land to this trust when the Congress… pic.twitter.com/SsjyUCNokf
— IANS (@ians_india) June 24, 2026
ನಕಲಿ ಮಾರಾಟಗಾರನ ಮೂಲಕ ಭೂಮಿ ವರ್ಗಾವಣೆ:
“ಕಲ್ಬುರ್ಗಿಯಲ್ಲಿ ಜಮೀನೊಂದನ್ನು ಖರ್ಗೆ ಅವರ ಟ್ರಸ್ಟ್‌ಗೆ ಖಾಯಂ ಆಗಿ ವರ್ಗಾಯಿಸಿಕೊಳ್ಳಲು ನಕಲಿ ಮಾರಾಟಗಾರನನ್ನು ಸೃಷ್ಟಿಸಲಾಗಿತ್ತು. ಆ ಜಮೀನನ್ನು ಮಾರಾಟ ಮಾಡಿದ ಅಸಲಿ ವ್ಯಕ್ತಿ ಯಾರು ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ. ಈ ರೀತಿಯಾಗಿ ಮೂರನೇ ವಿಧದ ಭ್ರಷ್ಟಾಚಾರದ ಮೂಲಕ ಭೂಮಿಯನ್ನು ಟ್ರಸ್ಟ್ ಹೆಸರಿಗೆ ಬರೆಸಿಕೊಳ್ಳಲಾಗಿದೆ” ಎಂದು ಬಿಜೆಪಿ ವಕ್ತಾರರು ಗಂಭೀರ ಆರೋಪ ಮಾಡಿದ್ದಾರೆ.
#WATCH | Delhi | BJP leader Pradeep Bhandari says, “The first case of land grabbing I want to present to you is the Siddhartha Vihar Trust, which was granted by the KIAD (Karnataka Industrial Area Development Board) in 2024, when the Congress government was in power in… https://t.co/YP1T2J97Ha pic.twitter.com/P2JhoVL3uv
— ANI (@ANI) June 24, 2026
ಇದನ್ನೂ ಓದಿ: ಕಾಂಗ್ರೆಸ್ ನಾಯಕರ ಮೇಲೆನೇ ಆಗೋದು ಇಡಿ ದಾಳಿ: ನನ್ನ ಮೇಲೂ ಆಗಬಹುದು ಎಂದ ಗೃಹ ಸಚಿವ ಪ್ರಿಯಾಂಕ್ ಖರ್ಗೆ
ಇದೇ ವೇಳೆ, ಗಾಂಧಿ ಕುಟುಂಬದ ವಿರುದ್ಧ ಇರುವ ಭೂ ಹಗರಣಗಳನ್ನು ಪ್ರಸ್ತಾಪಿಸಿದ ಪ್ರದೀಪ್ ಭಂಡಾರಿ, “ರಾಹುಲ್ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರು ದೇಶದಲ್ಲಿ ಯಾವ ರೀತಿಯಾಗಿ ಭೂ ಲೂಟಿ ಮಾಡಿದ್ದಾರೋ, ಅದೇ ಮಾದರಿಯನ್ನು ಈಗ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದಲ್ಲಿ ಸಿದ್ದಾರ್ಥ ವಿಹಾರ್ ಟ್ರಸ್ಟ್ ಮೂಲಕ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ರಾಬರ್ಟ್ ವಾದ್ರಾ ಅವರಿಗೆ ಎಲ್ಲಿ ಜಮೀನು ಕಂಡರೂ ಕಣ್ಣು ಬೀಳುವಂತೆ ಕರ್ನಾಟಕದಲ್ಲಿ ಎಲ್ಲಿ ಪ್ರಮುಖ ಜಾಗಗಳಲ್ಲಿ ಜಮೀನುಗಳಿದ್ದರೂ ಮಲ್ಲಿಕಾರ್ಜುನ ಖರ್ಗೆ ತಮ್ಮ ಪ್ರಭಾವ ಬಳಸಿ ಅದನ್ನು ಕಬಳಿಸುತ್ತಿದ್ದಾರೆ. ಇದಕ್ಕೆ ಅವರು ಉತ್ತರ ನೀಡಲೇಬೇಕು” ಎಂದು ಪ್ರದೀಪ್ ಭಂಡಾರಿ ವಾಗ್ದಾಳಿ ನಡೆಸಿದ್ದಾರೆ.
“ಮಲ್ಲಿಕಾರ್ಜುನ ಖರ್ಗೆ ಅವರು ಈ ಟ್ರಸ್ಟ್ ಮೂಲಕ ಬೇರೆ ಬೇರೆ ಕಡೆಗಳಲ್ಲಿ ಹೇಗೆ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸರಣಿ ಭ್ರಷ್ಟಾಚಾರದ ಪ್ರಕರಣಗಳನ್ನು ನಾನು ಶೀಘ್ರದಲ್ಲೇ ಸಾರ್ವಜನಿಕವಾಗಿ ಪ್ರಸ್ತುತಪಡಿಸಲಿದ್ದೇನೆ” ಎಂದು ಬಿಜೆಪಿ ನಾಯಕ ಪ್ರದೀಪ್ ಭಂಡಾರಿ ಎಚ್ಚರಿಕೆ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




