ವಿಕಸಿತ ಕೇರಳವೇ ನಮ್ಮ ಗುರಿ; ಕಾರ್ಪೋರೇಷನ್ ಗೆಲುವಿನ ಬಳಿಕ ತಿರುವನಂತಪುರಂ ಜನರಿಗೆ ಪ್ರಧಾನಿ ಮೋದಿ ಧನ್ಯವಾದ

ಕೇರಳದ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯ 101 ವಾರ್ಡ್‌ಗಳಲ್ಲಿ 50 ವಾರ್ಡ್‌ಗಳನ್ನು ಗೆಲ್ಲುವ ಮೂಲಕ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಹೊಸ ಇತಿಹಾಸ ಬರೆದಿದೆ. ಇದು ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್) ಗೆ ಭಾರಿ ಹೊಡೆತ ನೀಡಿದೆ. ತಿರುವನಂತಪುರಂನಲ್ಲಿ ಬಿಜೆಪಿಯ ಬಲಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.

ವಿಕಸಿತ ಕೇರಳವೇ ನಮ್ಮ ಗುರಿ; ಕಾರ್ಪೋರೇಷನ್ ಗೆಲುವಿನ ಬಳಿಕ ತಿರುವನಂತಪುರಂ ಜನರಿಗೆ ಪ್ರಧಾನಿ ಮೋದಿ ಧನ್ಯವಾದ
Pm Modi

Updated on: Dec 13, 2025 | 6:19 PM

ನವದೆಹಲಿ, ಡಿಸೆಂಬರ್ 13: ಕೇರಳದ ತಿರುವನಂತಪುರಂನಲ್ಲಿ (Thiruvananthapuram) 45 ವರ್ಷಗಳ ಕಾಲ ಎಡಪಕ್ಷಗಳು ಅಧಿಕಾರ ಹಿಡಿದಿದ್ದವು. ಆ ದಾಖಲೆಯನ್ನು ಮುರಿದಿರುವ ಬಿಜೆಪಿ ನೇತೃತ್ವದ ಎನ್​ಡಿಎ ಭರ್ಜರಿ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಿರುವನಂತಪುರಂ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ. ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಬಿಜೆಪಿ-ಎನ್‌ಡಿಎ ಪಡೆದ ಜನಾದೇಶವು ಕೇರಳದ ರಾಜಕೀಯದಲ್ಲಿ ನಿರ್ಣಾಯಕ ಕ್ಷಣ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್ ಪೋಸ್ಟ್‌ ಮಾಡಿರುವ ಪ್ರಧಾನಿ ಮೋದಿ, “ಧನ್ಯವಾದ, ತಿರುವನಂತಪುರಂ! ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಬಿಜೆಪಿ-ಎನ್‌ಡಿಎ ಪಡೆದ ಜನಾದೇಶವು ಕೇರಳದ ರಾಜಕೀಯದಲ್ಲಿ ಬಹಳ ನಿರ್ಣಾಯಕ ಕ್ಷಣವಾಗಿದೆ. ರಾಜ್ಯದ ಅಭಿವೃದ್ಧಿ ಆಕಾಂಕ್ಷೆಗಳನ್ನು ನಮ್ಮ ಪಕ್ಷ ಮಾತ್ರ ಪರಿಹರಿಸಬಹುದು ಎಂದು ಜನರಿಗೆ ಖಚಿತವಾಗಿದೆ. ನಮ್ಮ ಪಕ್ಷವು ಖಂಡಿತವಾಗಿಯೂ ನಿಮ್ಮ ನಗರದ ಬೆಳವಣಿಗೆಗೆ ಶ್ರಮಿಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ತಿರುವನಂತಪುರಂ ಕಾರ್ಪೊರೇಷನ್​​​ನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು; 45 ವರ್ಷಗಳ ಎಡಪಕ್ಷಗಳ ಆಡಳಿತ ಅಂತ್ಯ

“ತಿರುವನಂತಪುರಂ ಕಾರ್ಪೊರೇಷನ್‌ನಲ್ಲಿ ಅದ್ಭುತ ಫಲಿತಾಂಶವನ್ನು ನೀಡಿದ ಜನರ ನಡುವೆ ಕೆಲಸ ಮಾಡಿದ ಎಲ್ಲಾ ಶ್ರಮಶೀಲ ಬಿಜೆಪಿ ಕಾರ್ಯಕರ್ತರಿಗೆ ನನ್ನ ಕೃತಜ್ಞತೆಗಳು. ಇಂದಿನ ಫಲಿತಾಂಶವನ್ನು ತರಲು ಸಹಾಯ ಮಾಡಿದ ಎಲ್ಲ ತಲೆಮಾರಿನ ಕೇರಳದ ಕಾರ್ಯಕರ್ತರ ಕೆಲಸ ಮತ್ತು ಹೋರಾಟಗಳನ್ನು ನೆನಪಿಸಿಕೊಳ್ಳುವ ದಿನ ಇಂದು. ನಮ್ಮ ಕಾರ್ಯಕರ್ತರೇ ನಮ್ಮ ಶಕ್ತಿ. ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ!” ಎಂದು ಮೋದಿ ಬಿಜೆಪಿ ಕಾರ್ಯಕರ್ತರಿಗೂ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಸುಂಕದ ಉದ್ವಿಗ್ನತೆ ನಡುವೆ ಟ್ರಂಪ್ ಜೊತೆ ಪ್ರಧಾನಿ ಮೋದಿ ಮಾತುಕತೆ; ವ್ಯಾಪಾರ, ತಂತ್ರಜ್ಞಾನ ಸಹಕಾರದ ಬಗ್ಗೆ ಚರ್ಚೆ

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಕೇರಳ ಯುಡಿಎಫ್ ಮತ್ತು ಎಲ್‌ಡಿಎಫ್‌ನಿಂದ ಬೇಸತ್ತಿದೆ. ಜನರು ಉತ್ತಮ ಆಡಳಿತ ನೀಡಲು ಮತ್ತು ವಿಕಸಿತ ಕೇರಳವನ್ನು ನಿರ್ಮಿಸಲು ಎನ್‌ಡಿಎಯನ್ನು ಏಕೈಕ ಆಯ್ಕೆಯಾಗಿ ನೋಡುತ್ತಿದ್ದಾರೆ ಎಂದು ಹೇಳಿದರು. “ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳಿಗೆ ಮತ ಹಾಕಿದ ಕೇರಳದಾದ್ಯಂತ ಜನರಿಗೆ ನನ್ನ ಕೃತಜ್ಞತೆಗಳು. ಯುಡಿಎಫ್ ಮತ್ತು ಎಲ್‌ಡಿಎಫ್‌ನಿಂದ ಕೇರಳ ಬೇಸತ್ತಿದೆ. ಉತ್ತಮ ಆಡಳಿತವನ್ನು ನೀಡುವ, ವಿಕಸಿತ ಕೇರಳವನ್ನು ನಿರ್ಮಿಸುವ ಏಕೈಕ ಆಯ್ಕೆಯಾಗಿ ಅವರು NDA ಅನ್ನು ನೋಡುತ್ತಿದ್ದಾರೆ ಎಂಬುದು ನಮಗೂ ಗೊತ್ತಾಗಿದೆ” ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ