PM Narendra Modi: ಜ.21ರಂದು ಗುಜರಾತ್ ಸೋಮನಾಥ ದೇಗುಲ ಸಮೀಪದ ಸರ್ಕೀಟ್ ಹೌಸ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ
ದೇಗುಲದ ಸಮೀಪದಲ್ಲೇ 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸದ್ಯ ಇಲ್ಲಿಗೆ ಭಕ್ತರು ಉಳಿದುಕೊಳ್ಳಲು ಸರ್ಕಾರದಿಂದ ಮಾಡಲಾದ ವಸತಿ ವ್ಯವಸ್ಥೆಗಳೆಲ್ಲ ದೇಗುಲದಿಂದ ದೂರದಲ್ಲಿವೆ. ಹೀಗಾಗಿ ಹೊಸ ಸರ್ಕೀಟ್ ಹೌಸ್ ನಿರ್ಮಾಣವಾಗಿದೆ.
ಗುಜರಾತ್ನ ಸೋಮನಾಥ ದೇವಾಲಯದ ಸಮೀಪ ಒಂದು ಸರ್ಕೀಟ್ ಹೌಸ್ನ್ನು ಜನವರಿ 21ರಂದು ಬೆಳಗ್ಗೆ 11ಗಂಟೆಗೆ ಉದ್ಘಾಟನೆ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ. ಸೋಮನಾಥ ದೇವಾಲಯ ದೇಶದ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿದ್ದು, ಇಲ್ಲಿಗೆ ಪ್ರತಿವರ್ಷವೂ ಲಕ್ಷಾಂತರ ಭಕ್ತರು ಭೇಟಿ ನೀಡಿ, ದೇವರ ದರ್ಶನ ಪಡೆಯುತ್ತಾರೆ. ಕೇವಲ ಭಾರತದ ಭಕ್ತರಷ್ಟೇ ಅಲ್ಲ, ವಿದೇಶಗಳಿಂದಲೂ ಜನರು ಇಲ್ಲಿಗೆ ಆಗಮಿಸುತ್ತಾರೆ.
ಗುಜರಾತ್ನ ಜುನಾಗಢ್ ಜಿಲ್ಲೆಯ ಪ್ರಭಾಸ ಎಂಬಲ್ಲಿರುವ ಸೋಮನಾಥ ದೇಗುಲದಲ್ಲಿ ಜ್ಯೋತಿರ್ಲಿಂಗ ಪೂಜೆ ನಡೆಯುತ್ತದೆ. ಸರ್ದಾರ್ ವಲ್ಲಭಭಾಯಿ ಪಟೇಲ್ರು ಇದನ್ನು ಕಟ್ಟಿಸಿದ್ದು, ಪ್ರಧಾನಿ ಮೋದಿಯವರು ಕೂಡ ಹಲವು ನವೀಕರಣ ಕೆಲಸಗಳನ್ನು ಇಲ್ಲಿ ಮಾಡಿಸಿದ್ದಾರೆ. ಹೀಗೆ ದೇಶ-ವಿದೇಶಗಳಿಂದ ಅನೇಕ ಭಕ್ತರು ಇಲ್ಲಿಗೆ ಬರುತ್ತಿರುವುದರಿಂದ ಒಂದು ಸರ್ಕೀಟ್ ಹೌಸ್ ಅಗತ್ಯವಿತ್ತು ಎಂಬುದನ್ನು ಗಮನಿಸಿ, ದೇಗುಲದ ಸಮೀಪದಲ್ಲೇ 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸದ್ಯ ಇಲ್ಲಿಗೆ ಭಕ್ತರು ಉಳಿದುಕೊಳ್ಳಲು ಸರ್ಕಾರದಿಂದ ಮಾಡಲಾದ ವಸತಿ ವ್ಯವಸ್ಥೆಗಳೆಲ್ಲ ದೇಗುಲದಿಂದ ದೂರದಲ್ಲಿವೆ. ಹಾಗಾಗಿ ಭಕ್ತರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ದೇವಾಲಯದ ಬಳಿಯೇ ಸರ್ಕೀಟ್ ಹೌಸ್ ಕಟ್ಟಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.
ಜನವರಿ 21ರಂದು ಬೆಳಗ್ಗೆ 11ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ಕೀಟ್ ಹೌಸ್ ಉದ್ಘಾಟನೆ ಮಾಡಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಇದೀಗ ಹೊಸದಾಗಿ ನಿರ್ಮಾಣವಾದ ಸರ್ಕೀಟ್ ಹೌಸ್ನಲ್ಲಿ ಐಷಾರಾಮಿ ವ್ಯವಸ್ಥೆಗಳಿವೆ. ವಿಐಪಿ ಕೊಠಡಿಗಳನ್ನು ಹೊಂದಿದೆ. ಕಾನ್ಫರೆನ್ಸ್ ಕೊಠಡಿಗಳಿವೆ, ಅಡಿಟೋರಿಯಂ ಹಾಲ್ ಇದೆ ಎಂದೂ ಪಿಎಂಒ ತಿಳಿಸಿದೆ.