ದೆಹಲಿ: ಸ್ವಕ್ಷೇತ್ರ, ಉತ್ತರ ಪ್ರದೇಶದ ವಾರಣಾಸಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ನ.30) ಭೇಟಿ ನೀಡಲಿದ್ದು, ವಾರಣಾಸಿ-ಪ್ರಯಾಗ್ರಾಜ್ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಗಂಗಾ ನದಿಯ ತಟದಲ್ಲಿ ನಡೆಯಲಿರುವ ದೀಪೋತ್ಸವದಲ್ಲಿಯೂ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿ ಭೇಟಿಗೆ ನಗರವು ಸಜ್ಜಾಗಿದೆ. ಶ್ವಾನದಳದೊಂದಿಗೆ ಬೀದಿಬೀದಿಗಳಲ್ಲಿ ಸಂಚರಿಸುತ್ತಿರುವ ಭದ್ರತಾ ಸಿಬ್ಬಂದಿ ದಡದಲ್ಲಿ ನಿಂತಿರುವ ದೋಣಿಗಳ ತಪಾಸಣೆ ನಡೆಸುತ್ತಿದ್ದಾರೆ. ರಾಜಘಾಟ್ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತಿ ಇಂಚನ್ನೂ ಜಾಲಾಡುತ್ತಿದ್ದಾರೆ.
ವಾರಣಾಸಿ ಭೇಟಿ ಸಂದರ್ಭ ಪ್ರಧಾನಿ ಹಾಂದಿಯಾ (ಪ್ರಯಾಗ್ರಾಜ್) – ರಾಜ್ತಲಾಬ್ (ವಾರಣಾಸಿ) ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು 6 ಲೇನ್ಗೆ ವಿಸ್ತರಿಸುವ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ₹ 2447 ಕೋಟಿ ಅಂದಾಜು ವೆಚ್ಚದ ಈ ಕಾಮಗಾರಿ ಪೂರ್ಣಗೊಂಡ ನಂತರ, 73 ಕಿ.ಮೀ. ಅಂತರದದ ಪ್ರಯಾಗ್ರಾಜ್ ಮತ್ತು ವಾರಣಾಸಿ ನಡುವಣ ಪ್ರಯಾಣದ ಅವಧಿ ಸುಮಾರು 1 ಗಂಟೆಯಷ್ಟು ಕಡಿಮೆಯಾಗಲಿದೆ ಎಂದು ಪ್ರಧಾನಿ ಕಚೇರಿ ಹೇಳಿಕೆ ತಿಳಿಸಿದೆ.
ಇಂದು ಕಾರ್ತೀಕ ಮಾಸದ ಹುಣ್ಣಿಮೆಯ ಪ್ರಯುಕ್ತ ವಾರಣಾಸಿಯಲ್ಲಿ ಸಂಪ್ರದಾಯದಂತೆ ದೇವ ದೀಪಾವಳಿ ಉತ್ಸವ ನಡೆಯಲಿದೆ. ಉತ್ಸವದಲ್ಲಿ ಪಾಲ್ಗೊಳ್ಳುವ ಪ್ರಧಾನಿ, ರಾಜ್ಘಾಟ್ನಲ್ಲಿ ಹಣತೆಯೊಂದನ್ನು ಹಚ್ಚಲಿದ್ದಾರೆ. ನಂತರ ಗಂಗೆಯ ಎರಡೂ ತಟಗಳಲ್ಲಿ 11 ಲಕ್ಷ ಹಣತೆಗಳನ್ನು ಬೆಳಗಲಾಗುತ್ತದೆ.
ಪ್ರವಾಸದ ವೇಳೆ ಕಾಶಿ ವಿಶ್ವನಾಥ ದೇಗುಲ ಪಥ ಕಾಮಗಾರಿಯ ಸ್ಥಳಪರಿಶೀಲಿಸಲಿದ್ದಾರೆ. ಪುರಾತನ ಸ್ಮಾರಕ ಸಾರನಾಥದಲ್ಲಿ ನಡೆಯಲಿರುವ ಧ್ವನಿ-ಬೆಳಕು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: 100 ವರ್ಷಗಳ ಹಿಂದೆ ಕಳುವಾಗಿದ್ದ ಅನ್ನಪೂರ್ಣಾ ವಿಗ್ರಹ ಮರಳಿ ಭಾರತಕ್ಕೆ: ಮನ್ ಕಿ ಬಾತ್ನಲ್ಲಿ ಮೋದಿ ಖುಷಿ