
ನವದೆಹಲಿ, ಜುಲೈ 17: ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ (West Bengal Government) ತೀವ್ರ ಆಕ್ರೋಶ ಹೊರಹಾಕಿದೆ. ಬಂಗಾಳಿ ವಲಸಿಗ ಕಾರ್ಮಿಕರನ್ನು ಬಿಜೆಪಿ ಸರ್ಕಾರ ಕೇವಲವಾಗಿ ಕಾಣುತ್ತಿದೆ ಎಂದು ಆರೋಪಿಸಿ ಸಿಎಂ ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸಿದ್ದರು. ಇದರ ನಡುವೆ ಇದೇ ಶುಕ್ರವಾರ (ಜುಲೈ 18) ಪ್ರಧಾನಿ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. “ಪ್ರಧಾನಿ ಮೋದಿ ಬಿಹಾರದಿಂದ ಬಂಗಾಳದ ದುರ್ಗಾಪುರಕ್ಕೆ ಆಗಮಿಸಲಿದ್ದಾರೆ. ಮೊದಲು ಅವರು ವಿವಿಧ ಯೋಜನೆಗಳನ್ನು ಉದ್ಘಾಟಿಸುವ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ಪಕ್ಷದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ” ಎಂದು ರಾಜ್ಯ ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಬಂಗಾಳಕ್ಕೆ ಹೊಸ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಸಮಿಕ್ ಭಟ್ಟಾಚಾರ್ಯ ಅವರನ್ನು ನೇಮಿಸಿದ ನಂತರ ಪ್ರಧಾನಿ ಮೋದಿ ಪಶ್ಚಿಮ ಬಂಗಾಳಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಜುಲೈ 21ರಂದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಹುತಾತ್ಮರ ದಿನಾಚರಣೆಯ ರ್ಯಾಲಿ ಹಮ್ಮಿಕೊಂಡಿದೆ. ಈ ವೇದಿಕೆಯನ್ನು ಮಮತಾ ಬ್ಯಾನರ್ಜಿ ತಮ್ಮ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿ ಬಿಜೆಪಿಗೆ ಸ್ಪಷ್ಟ ರಾಜಕೀಯ ಸಂದೇಶವನ್ನು ನೀಡಲು ಬಳಸುವ ಸಾಧ್ಯತೆಯಿದೆ. ಮತದಾರರನ್ನು ಸೆಳೆಯಲು ಅವರು ಹೊಸ ಯೋಜನೆಗಳನ್ನು ಘೋಷಿಸುವ ನಿರೀಕ್ಷೆಯಿದೆ. ಅದರ ನಡುವೆ ಮೋದಿ ಭೇಟಿ ನೀಡುತ್ತಿರುವುದು ರಾಜಕೀಯವಾಗಿ ಮಹತ್ವ ಪಡೆದಿದೆ.
ಇದನ್ನೂ ಓದಿ: ‘ಶುಭಾಂಶು ಶುಕ್ಲಾ ನೂರು ಕೋಟಿ ಕನಸುಗಳಿಗೆ ಸ್ಫೂರ್ತಿ’; ಆಕ್ಸಿಯಮ್ ಮಿಷನ್ ಯಶಸ್ಸಿಗೆ ಪ್ರಧಾನಿ ಮೋದಿ ಶ್ಲಾಘನೆ
ಬಿಜೆಪಿ ಆಡಳಿತವಿರುವ ಹಲವಾರು ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಜನರ ಮೇಲೆ ನಡೆಯುತ್ತಿರುವ ಕಿರುಕುಳ ಮತ್ತು ಚಿತ್ರಹಿಂಸೆಯ ವಿರುದ್ಧ ಬುಧವಾರ ಬ್ಯಾನರ್ಜಿ ಕೊಲ್ಕತ್ತಾದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ನಾಳೆ ಪಶ್ಚಿಮ ಬಂಗಾಳದಲ್ಲಿ ಮೋದಿ 5000 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಪ್ರಧಾನಮಂತ್ರಿ ಮೋದಿ ಹಲವಾರು ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ, ನಂತರ ಹತ್ತಿರದ ಮತ್ತೊಂದು ವೇದಿಕೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಭೆಯ ನಂತರ ಪ್ರಧಾನಿ ಮೋದಿ ದೆಹಲಿಗೆ ತೆರಳಲಿದ್ದಾರೆ.
ಇದಕ್ಕೂ ಮುನ್ನ ಮೋದಿ ಪಶ್ಚಿಮ ಬಂಗಾಳದ ಬಂಕುರಾ ಮತ್ತು ಪುರುಲಿಯಾ ಜಿಲ್ಲೆಗಳಲ್ಲಿ ಸುಮಾರು 1,950 ಕೋಟಿ ರೂ. ಮೌಲ್ಯದ ಭಾರತ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (ಬಿಪಿಸಿಎಲ್) ನಗರ ಅನಿಲ ವಿತರಣಾ (ಸಿಜಿಡಿ) ಯೋಜನೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಇದು ಮನೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಕೈಗಾರಿಕಾ ಗ್ರಾಹಕರಿಗೆ ಪಿಎನ್‌ಜಿ ಸಂಪರ್ಕಗಳನ್ನು ಒದಗಿಸುತ್ತದೆ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಸಿಎನ್‌ಜಿಯನ್ನು ಒದಗಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಇದನ್ನೂ ಓದಿ: Narendra Modi: ಪ್ರಧಾನಿ ಮೋದಿ ಆಗಸ್ಟ್ನಲ್ಲಿ ಚೀನಾಗೆ ಭೇಟಿ ನೀಡುವ ಸಾಧ್ಯತೆ
ಜಗದೀಶ್‌ಪುರ-ಹಾಲ್ಡಿಯಾ ನೈಸರ್ಗಿಕ ಅನಿಲ ಪೈಪ್‌ಲೈನ್‌ನ ದುರ್ಗಾಪುರದಿಂದ ಕೋಲ್ಕತ್ತಾ ವಿಭಾಗವನ್ನು (132 ಕಿ.ಮೀ.) ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದನ್ನು ಪ್ರಧಾನಮಂತ್ರಿ ಉರ್ಜಾ ಗಂಗಾ (ಪಿಎಂಯುಜಿ) ಯೋಜನೆಯ ಭಾಗವಾಗಿ ಹಾಕಲಾಗಿದೆ.
ಹಾಗೇ, ಪ್ರಧಾನ ಮಂತ್ರಿ ಮೋದಿ ಪುರುಲಿಯಾದಲ್ಲಿ 390 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಪುರುಲಿಯಾ – ಕೋಟ್ಶಿಲಾ ರೈಲು ಮಾರ್ಗದ (36 ಕಿಮೀ) ದ್ವಿಗುಣಗೊಳಿಸುವಿಕೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದು ಜಮ್ಶೆಡ್‌ಪುರ, ಬೊಕಾರೊ ಮತ್ತು ಧನ್‌ಬಾದ್‌ನಿಂದ ರಾಂಚಿ ಮತ್ತು ಕೋಲ್ಕತ್ತಾದೊಂದಿಗೆ ಕೈಗಾರಿಕೆಗಳ ನಡುವಿನ ರೈಲು ಸಂಪರ್ಕವನ್ನು ಸುಧಾರಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ