ಇಂದು ಗೋರಖ್​ಪುರಕ್ಕೆ ಪ್ರಧಾನಿ ಮೋದಿ ಭೇಟಿ; ಯೋಗಿ ಕನಸಿನ ರಸಗೊಬ್ಬರ ಘಟಕ ಸೇರಿ 3 ಬೃಹತ್​​ ಯೋಜನೆಗಳ ಲೋಕಾರ್ಪಣೆ

| Updated By: Lakshmi Hegde

Updated on: Dec 07, 2021 | 8:44 AM

ಯೋಗಿ ಆದಿತ್ಯನಾಥ್​ ಅವರು ಸೋಮವಾರ ಸಂಜೆ ಗೋರಖ್​ಪುರಕ್ಕೆ ಭೇಟಿ ನೀಡಿ, ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಹಾಗೇ, ರಸಗೊಬ್ಬರ ಘಟಕ ಮತ್ತು ಏಮ್ಸ್​ ಉದ್ಘಾಟನೆ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇಂದು ಗೋರಖ್​ಪುರಕ್ಕೆ ಪ್ರಧಾನಿ ಮೋದಿ ಭೇಟಿ; ಯೋಗಿ ಕನಸಿನ ರಸಗೊಬ್ಬರ ಘಟಕ ಸೇರಿ 3 ಬೃಹತ್​​ ಯೋಜನೆಗಳ ಲೋಕಾರ್ಪಣೆ
ಯೋಗಿ ಆದಿತ್ಯನಾಥ್​ ಮತ್ತು ಪ್ರಧಾನಿ ಮೋದಿ
Follow us on

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಉತ್ತರಪ್ರದೇಶದ ಗೋರಖ್​ಪುರಕ್ಕೆ ಭೇಟಿ ನೀಡಲಿದ್ದು, ಅಲ್ಲಿ 9600 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಅದರಲ್ಲೂ ಬಹುಮುಖ್ಯವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಕನಸಿನ ಯೋಜನೆಯೆಂದೇ ಕರೆಸಿಕೊಂಡ ಗೋರಖ್​ಪುರ ರಸಗೊಬ್ಬರ ಘಟಕವನ್ನು ಇಂದು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡುವರು. ಇನ್ನು ಗೋರಖ್​ಪುರ ಯೋಗಿ ಆದಿತ್ಯನಾಥ್​​ರ ತವರು ಕ್ಷೇತ್ರವಾಗಿದ್ದು, ಅಲ್ಲೊಂದು ರಸಗೊಬ್ಬರ ಘಟಕ ನಿರ್ಮಾಣ ಅವರ ಕನಸಾಗಿತ್ತು. ಅದಕ್ಕಾಗಿ 19ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದರು. 

ಇಂದು ಗೋರಖ್​ಪುರದಲ್ಲಿ ಒಟ್ಟು ಮೂರು ಬೃಹತ್​ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಅದರಲ್ಲಿ ಮುಖ್ಯವಾಗಿ ಹಿಂದೂಸ್ತಾನ ಊರ್ವಾರಕ್​ ರಾಸಾಯನ ಲಿಮಿಟೆಡ್​ (ರಸಗೊಬ್ಬರ ಘಟಕ), ಎರಡನೇಯದ್ದು 300 ಬೆಡ್​​ ಮತ್ತು 14 ಆಪರೇಶನ್​ ಥಿಯೇಟರ್​​, 9 ಲ್ಯಾಬೋರೇಟರಿಗಳನ್ನೊಳಗೊಂಡ, ಅತ್ಯಾಧುನಿಕ ವ್ಯವಸ್ಥೆಯಿರುವ ಏಮ್ಸ್​​ ಆಸ್ಪತ್ರೆ ಮತ್ತು ಮೂರನೇಯ ಯೋಜನೆಯಾಗಿ ಬಾಬಾ ರಾಘವದಾಸ್​ ಮೆಡಿಕಲ್​ ಕಾಲೇಜಿನ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ (RMRC)ದಲ್ಲಿ ಒಂದು ಹೈಟೆಕ್​ ಲ್ಯಾಬ್​​ನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಮೂರು ಯೋಜನೆಗಳ ಉದ್ಘಾಟನೆ ಮಾಡುವ ಮೂಲಕ ಪ್ರಧಾನಿ ಮೋದಿ ಕನಸಿನ ಯೋಜನೆಗಳಿಗೆ ಸಾಕಾರ ನೀಡಲಿದ್ದಾರೆ ಎಂದು ಯೋಗಿ ಹೇಳಿದ್ದಾರೆ.

ಯೋಗಿ ಆದಿತ್ಯನಾಥ್​ ಅವರು ಸೋಮವಾರ ಸಂಜೆ ಗೋರಖ್​ಪುರಕ್ಕೆ ಭೇಟಿ ನೀಡಿ, ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಹಾಗೇ, ರಸಗೊಬ್ಬರ ಘಟಕ ಮತ್ತು ಏಮ್ಸ್​ ಉದ್ಘಾಟನೆ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ. ಉತ್ತರ ಪ್ರದೇಶ ಅಭಿವೃದ್ಧಿಯಲ್ಲಿ ಪ್ರಧಾನಿ ಮೋದಿ ಆಡಳಿತ ಐತಿಹಾಸಿಕವೆನಿಸಲಿದೆ ಎಂದು ಹೇಳಿದ್ದಾರೆ.  ಇದರಲ್ಲಿ ರಸಗೊಬ್ಬರ ಘಟಕ ಸುಮಾರು 8603 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ವರ್ಷಕ್ಕೆ 12.7 ಲಕ್ಷ ಮೆಟ್ರಿಕ್​ ಟನ್​ಗಳಷ್ಟು ಬೇವು ಲೇಪಿತ ಯೂರಿಯಾ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಈ ಗೊಬ್ಬರ ತಯಾರಿಕಾ ಕಾರ್ಖಾನೆ ಕೇವಲ ರೈತರಿಗಷ್ಟೇ ಅನುಕೂಲ ಮಾಡಿಕೊಡುವುದಿಲ್ಲ. ಬದಲಿಗೆ ಸುಮಾರು 20 ಸಾವಿರಗಳಷ್ಟು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತದೆ. ಇದರಿಂದ ಯುವಜನರಿಗೆ ಅನುಕೂಲವಾಗಲಿದೆ.

ಗೋರಖ್​ಪುರದಲ್ಲಿದ್ದ ಭಾರತದ ರಸಗೊಬ್ಬರ ಸಹಕಾರ ಕಾರ್ಖಾನೆ 1990ರಲ್ಲಿ ಬಂದ್​ ಆಯಿತು. ಅದಾದ ಬಳಿಕ ಯೋಗಿ ಆದಿತ್ಯನಾಥ್​ ಇಲ್ಲಿ ಮತ್ತೊಂದು ಹೊಸ ಕಾರ್ಖಾನೆ ಸ್ಥಾಪಿಸಲು ಸುಮಾರು 19 ವರ್ಷ ಹೋರಾಟ ಮಾಡಿದರು. 1998ರಿಂದ 2017ರ ಮಾರ್ಚ್​ವರೆಗೆ ಸಂಸದರಾಗಿದ್ದ ಅವರು ಪದೇಪದೆ ಈ ವಿಚಾರವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಎದುರು ಪ್ರಸ್ತಾಪ ಮಾಡುತ್ತಿದ್ದರು.  ಅದಾದ ನಂತರ ಕೇಂದ್ರದಲ್ಲಿ 2014ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಅವರ ಕನಸಿಗೆ ರೂಪ ಸಿಕ್ಕಿತ್ತು. 2016ರ ಜುಲೈನಲ್ಲಿ ಈ ರಸಗೊಬ್ಬರ ಕಾರ್ಖಾನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದ್ದರು . ಇಂದು ಅವರೇ ಬಂದು ಉದ್ಘಾಟನೆ ಮಾಡುತ್ತಿದ್ದಾರೆ.

ಇನ್ನು ಗೋರಖ್​ಪುರದಲ್ಲಿ ಏಮ್ಸ್​ ಆಸ್ಪತ್ರೆ ಸುಮಾರು 1,011 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಕೇವಲ ಇಲ್ಲಿನ ಜನರಿಗಷ್ಟೇ ಅಲ್ಲದೆ, ಪೂರ್ವ ಉತ್ತರ ಪ್ರದೇಶದ ಜನರು, ಬಿಹಾರ, ಜಾರ್ಖಂಡ, ನೇಪಾಳದ ಜನರೂ ಅನುಕೂಲ ಪಡೆಯಬಹುದು. ವಿಶ್ವದರ್ಜೆಯ ವ್ಯವಸ್ಥೆಗಳು ಇರುವುದರಿಂದ ಉತ್ತಮ ಆರೋಗ್ಯ ಸೇವೆಯ ನಿರೀಕ್ಷೆಯಿದೆ. ಇನ್ನು ಬಿಆರ್​ಡಿ ಮೆಡಿಕಲ್ ಕಾಲೇಜಿನ ರಿಸರ್ಚ್​ ಸೆಂಟರ್​​​ನಲ್ಲಿ ನಿರ್ಮಾಣವಾಗಿರುವ ಹೈಟೆಕ್​ ಲ್ಯಾಬ್​ ಮೌಲ್ಯ 36 ಕೋಟಿ ರೂಪಾಯಿ. ವೈರಸ್​ಗಳಿಂದ ಹರಡುವ ರೋಗಗಳ ಪರೀಕ್ಷೆ ಮತ್ತು ಸಂಶೋಧನೆ ಇಲ್ಲಿ ನಡೆಯಲು ಎಲ್ಲ ರೀತಿಯ ಸೌಲಭ್ಯಗಳೂ ಇವೆ.  ಇನ್ನು ಇಂದಿನಿಂದ ಗೋರಖ್​ಪುರ ಜಿಲ್ಲೆಯಲ್ಲಿ ಎಲೆಕ್ಟ್ರಿಕ್​ ಬಸ್​ಗಳೂ ಕೂಡ ಸಂಚಾರ ಮಾಡಲಿವೆ. ಲಖನೌನಲ್ಲಿ ಅಕ್ಟೋಬರ್​ 15ರಂದು ಯೋಗಿ ಆದಿತ್ಯನಾಥ್​ ಒಟ್ಟು 15 ಎಲೆಕ್ಟ್ರಿಕ್​ ಬಸ್​ಗಳಿಗೆ ಹಸಿರುನಿಶಾನೆ ತೋರಿಸಿದ್ದರು.

ಇದನ್ನೂ ಓದಿ: ಮಾವನ ಪಿಎಫ್​​ ಮೇಲೆ ಅಳಿಯನ ಕಣ್ಣು; ಧನದಾಹಕ್ಕೆ ಪತ್ನಿಯನ್ನೇ ಕೊಂದ ಕಿರಾತಕ ಪತಿ