ಇಂದು ಲಖನೌಗೆ ಪ್ರಧಾನಿ ಮೋದಿ ಭೇಟಿ; ವಿವಿಧ ನಗರಾಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ
Azadi@75: ಈ ಎಕ್ಸ್ಪೋದಲ್ಲಿ ಒಟ್ಟು ಮೂರು ವಸ್ತುಪ್ರದರ್ಶನ ಏರ್ಪಡಿಸಲಾಗಿದ್ದು, ಅದನ್ನು ಪ್ರಧಾನಿ ಮೋದಿ ವೀಕ್ಷಿಸುವರು. ಹಾಗೇ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ.
ಲಖನೌ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಲಖನೌಗೆ ಭೇಟಿ ನೀಡಲಿದ್ದಾರೆ. ಅಲ್ಲಿನ ಇಂದಿರಾ ಗಾಂಧಿ ಪ್ರತಿಷ್ಠಾನದಲ್ಲಿ ಆಯೋಜಿಸಲಾಗಿರುವ ‘ಆಜಾದಿ@75: ನವ ನಗರ ಭಾರತ: ನಗರ ಒಳಪ್ರದೇಶ ಪರಿವರ್ತನೆ’ ಎಂಬ ಸಮ್ಮೇಳನ ಮತ್ತು ಎಕ್ಸ್ಪೋವನ್ನು ಉದ್ಘಾಟಿಸಲಿದ್ದಾರೆ. ಇಂದು ಅವರು ಒಟ್ಟು 4,737 ಕೋಟಿ ರೂಪಾಯಿ ವೆಚ್ಚದ 75 ನಗರಾಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಸ್ಮಾರ್ಟ್ ಸಿಟಿ ಮಿಷನ್ ಮತ್ತು ಅಮೃತ್ (AMRUT) ನಡಿ 75 ನಗರಾಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಜತೆ, FAME-II ಸ್ಕೀಮ್ನಡಿ (ವಿದ್ಯುತ್ಚ್ಚಾಲಿತ ವಾಹನಗಳಿಗೆ ಉತ್ತೇಜನ ನೀಡುವ ಯೋಜನೆ) ಲಖನೌ, ಕಾನ್ಪುರ, ವಾರಾಣಸಿ, ಪ್ರಯಾಗ್ರಾಜ್, ಗೋರಖ್ಪುರ, ಝಾನ್ಸಿ ಮತ್ತು ಘಾಜಿಯಾಬಾದ್ಗಳಿಗೆ 75 ಎಲಕ್ಟ್ರಿಕ್ ಬಸ್ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಅಷ್ಟೇ ಅಲ್ಲದೆ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ 75 ಯೋಜನೆಗಳನ್ನು ವಿವರಿಸಲಾದ ಕಾಫಿ ಟೇಬಲ್ ಪುಸ್ತಕವನ್ನೂ ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ. ಹಾಗೇ, ಪ್ರಧಾನಮಂತ್ರಿ ಆವಾಸ್ ಯೋಜನೆ ನಗರದಲ್ಲಿ ನಿರ್ಮಾಣವಾದ ಮನೆಗಳ ಕೀಲಿಗಳನ್ನು ಇಂದು 75,000 ಫಲಾನುಭವಿಗಳಿಗೆ ಡಿಜಿಟಲ್ ವಿಧಾನದಲ್ಲಿ ವಿತರಿಸಲಿದ್ದಾರೆ.
ಈ ಎಕ್ಸ್ಪೋದಲ್ಲಿ ಒಟ್ಟು ಮೂರು ವಸ್ತುಪ್ರದರ್ಶನ ಏರ್ಪಡಿಸಲಾಗಿದ್ದು, ಅದನ್ನು ಪ್ರಧಾನಿ ಮೋದಿ ವೀಕ್ಷಿಸುವರು. ಹಾಗೇ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರ ಜತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲರಾದ ಆನಂದಿ ಬೆನ್ ಇರುವರು.
ಚುನಾವಣೆ ಟಾರ್ಗೆಟ್ ಉತ್ತರಪ್ರದೇಶದಲ್ಲಿ ಬರುವ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಕಳೆದ ಐದು ವರ್ಷ ಆಡಳಿತ ನಡೆಸಿದ ಬಿಜೆಪಿಗೆ ಈ ಬಾರಿಯೂ ಅಧಿಕಾರಕ್ಕೆ ಬರುವುದು ಅತ್ಯಗತ್ಯವಾಗಿದೆ. ಆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಈಗ ಅಲ್ಲಿಗೆ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ.
Published On - 9:53 am, Tue, 5 October 21