ಭಾರತ-ನ್ಯೂಜಿಲೆಂಡ್ ಹೊಸ ಪಯಣಕ್ಕೆ ಸಿದ್ಧವಾಗಿದೆ; ಆಕ್ಲೆಂಡ್‌ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಪ್ರಧಾನಿ ಮೋದಿ ಐತಿಹಾಸಿಕ ಭಾಷಣ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಕಿಕ್ಕಿರಿದು ತುಂಬಿದ್ದ ಬೃಹತ್ ಭಾರತೀಯ ಸಮುದಾಯದ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಬಾಂಧವ್ಯವು ಕೇವಲ ರಾಜತಾಂತ್ರಿಕತೆಯಲ್ಲ. ಅದು ಸುದೀರ್ಘ ಸ್ನೇಹ, ಹಂಚಿಕೆಯ ಮೌಲ್ಯಗಳು ಮತ್ತು ಬಲಿಷ್ಠ ಭವಿಷ್ಯದ ಬದ್ಧತೆಯ ಮೇಲೆ ನಿರ್ಮಾಣವಾಗಿದೆ ಎಂದು ಅವರು ಹೇಳಿದರು. ಪ್ರಧಾನಿ ಮೋದಿ ವೇದಿಕೆಗೆ ಬಂದ ಕೂಡಲೇ ಎಲ್ಲರಿಗೂ ನಮಸ್ತೆ ಎಂದು ನಮಸ್ಕರಿಸಿದರು. ನಂತರ ಅವರು "ಕಿಯಾ ಓರಾ" ಎಂಬ ಪದಗಳನ್ನು ಉಚ್ಚರಿಸಿದರು. ಆಗ ಇಡೀ ಸಭಾಂಗಣವೇ ಜೋರಾದ ಚಪ್ಪಾಳೆ ತಟ್ಟುವ ಮೂಲಕ ಸಂತಸ ವ್ಯಕ್ತಪಡಿಸಿತು. 40 ವರ್ಷಗಳ ನಂತರ, ಭಾರತೀಯ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ಭೇಟಿ ನೀಡಿದ್ದಾರೆ. ಇದು ಒಂದು ಐತಿಹಾಸಿಕ ಸಂದರ್ಭವಾಗಿದೆ ಎಂದು ಮೋದಿ ಹೇಳಿದರು.

ಭಾರತ-ನ್ಯೂಜಿಲೆಂಡ್ ಹೊಸ ಪಯಣಕ್ಕೆ ಸಿದ್ಧವಾಗಿದೆ; ಆಕ್ಲೆಂಡ್‌ನಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಪ್ರಧಾನಿ ಮೋದಿ ಐತಿಹಾಸಿಕ ಭಾಷಣ
Pm Modi In New Zealand
Image Credit source: PTI

Updated on: Jul 11, 2026 | 3:37 PM

ಮುಖ್ಯಾಂಶಗಳು

  • ನ್ಯೂಜಿಲೆಂಡ್​​ನಲ್ಲಿ ಪ್ರಧಾನಿ ಮೋದಿ ಭಾಷಣ
  • ಮೋದಿಗೆ ಭಾರತೀಯ ಸಮುದಾಯದಿಂದ ಅದ್ದೂರಿ ಸ್ವಾಗತ
  • ಆಕ್ಲೆಂಡ್​​ನಲ್ಲಿ ಭಾರತೀಯರನ್ನು ಉದ್ದೇಶಿಸಿ ಮೋದಿ ಭಾಷಣ

ಆಕ್ಲೆಂಡ್, ಜುಲೈ 11: ಪ್ರಧಾನಿ ನರೇಂದ್ರ ಮೋದಿ (PM Modi) ತಮ್ಮ 3 ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ನ್ಯೂಜಿಲೆಂಡ್‌ಗೆ ಆಗಮಿಸಿದ್ದಾರೆ. ಸುಮಾರು 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನ್ಯೂಜಿಲೆಂಡ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಇಂದು (ಶನಿವಾರ) ಆಕ್ಲೆಂಡ್‌ನ ಸ್ಪಾರ್ಕ್ ಅರೆನಾದಲ್ಲಿ ಭಾರತೀಯ ಸಮುದಾಯದಿಂದ “ಕಿಯಾ ಓರಾ ಮೋದಿ” ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಈ ವೇಳೆ ಮೋದಿ ನ್ಯೂಜಿಲೆಂಡ್ ಪ್ರಧಾನಿ ಲಕ್ಸನ್ ಸೇರಿದಂತೆ ಭಾರತೀಯ ಮೂಲದ ನ್ಯೂಜಿಲೆಂಡ್ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಭಾರತೀಯರು “ಮೋದಿ, ಮೋದಿ!” ಎಂದು ಘೋಷಣೆ ಕೂಗುತ್ತಾ ಜೋರಾಗಿ ಜಯಘೋಷ ಹಾಕಿದರು.

ನ್ಯೂಜಿಲೆಂಡ್‌ನ ಸಾಂಪ್ರದಾಯಿಕ ಮಾವೋರಿ ಸಂಸ್ಕೃತಿಯನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ, ಶತಮಾನಗಳಿಂದ ಜನರನ್ನು ಒಗ್ಗೂಡಿಸುತ್ತಿರುವ ‘ವಕಾ’ ಎಂಬ ಪದದ ಮಹತ್ವವನ್ನು ವಿವರಿಸಿದರು. “ವಕಾ ಎಂದರೆ ಅದು ಕೇವಲ ಒಂದು ಸಾಂಪ್ರದಾಯಿಕ ದೋಣಿ ಅಥವಾ ಹಡಗಲ್ಲ, ಅದು ನಮ್ಮ ಹಂಚಿಕೆಯ ಪ್ರಯಾಣದ ಸಂಕೇತವಾಗಿದೆ. ಇಂದು ಭಾರತ ಮತ್ತು ನ್ಯೂಜಿಲೆಂಡ್‌ನ ಜಂಟಿ ‘ವಕಾ’ ಒಂದು ಹೊಸ ಐತಿಹಾಸಿಕ ಪ್ರಯಾಣಕ್ಕೆ ಸಿದ್ಧವಾಗಿದೆ. ನಮ್ಮ ಮುಂದೆ ಅಪಾರ ಅವಕಾಶಗಳಿವೆ. ನಮ್ಮ ಈ ಪ್ರಯಾಣಕ್ಕೆ ಪೂರಕವಾದ ಗಾಳಿಯೂ ನಮ್ಮತ್ತ ಬೀಸುತ್ತಿದೆ” ಎಂದು ಬಣ್ಣಿಸಿದರು.


ಇದನ್ನೂ ಓದಿ: 40 ವರ್ಷದ ಬಳಿಕ ನ್ಯೂಜಿಲೆಂಡ್‌ಗೆ ಭಾರತದ ಪ್ರಧಾನಿ ಭೇಟಿ; ವಿಮಾನ ನಿಲ್ದಾಣದಲ್ಲೇ ಮೋದಿಯನ್ನು ಸ್ವಾಗತಿಸಿದ ನ್ಯೂಜಿಲೆಂಡ್ ಪಿಎಂ

ಅನಿವಾಸಿ ಭಾರತೀಯರಿಗೆ ಮೆಚ್ಚುಗೆ:

ಈ ಹೊಸ ಜಂಟಿ ಪ್ರಯಾಣದ ಯಶಸ್ಸಿನ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಈ ಪ್ರಯಾಣದ ಯಶಸ್ಸಿನ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ಅದಕ್ಕೆ ಕಾರಣವೇನೆಂದು ನಿಮಗೆ ಗೊತ್ತೇ? ಮೋದಿ ಇರುವುದರಿಂದಲ್ಲ, ಬದಲಿಗೆ ಈ ಪ್ರಯಾಣದ ನಿಜವಾದ ನಾವಿಕರು ನೀವೆಲ್ಲರೂ ಆಗಿದ್ದೀರಿ. ಆಕ್ಲೆಂಡ್‌ನಿಂದ ವೆಲ್ಲಿಂಗ್ಟನ್‌ವರೆಗೆ, ಕ್ರೈಸ್ಟ್‌ಚರ್ಚ್‌ನಿಂದ ಕ್ವೀನ್ಸ್‌ಟೌನ್‌ವರೆಗೆ ನ್ಯೂಜಿಲೆಂಡ್‌ನ ಪ್ರತಿ ಮೂಲೆಯಲ್ಲೂ ಹರಡಿರುವ ಭಾರತೀಯ ಸಮುದಾಯವೇ ಈ ಸುವರ್ಣ ಶತಮಾನದ ನಾವಿಕರು” ಎಂದು ಹೆಮ್ಮೆಯಿಂದ ಶ್ಲಾಘಿಸಿದ್ದಾರೆ.


ನ್ಯೂಜಿಲೆಂಡ್ ದೇಶವು ಭಾರತೀಯ ಪ್ರತಿಭೆಗಳನ್ನು ಗೌರವಿಸುವ ಮತ್ತು ಮುಕ್ತ ಅವಕಾಶ ನೀಡುವ ಅದ್ಭುತ ತಾಣವಾಗಿದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ನ್ಯೂಜಿಲೆಂಡ್‌ನ ರಸ್ತೆ ಮತ್ತು ಸ್ಥಳಗಳಿಗೆ ಭಾರತೀಯ ನಗರಗಳ ಹೆಸರಿಟ್ಟು ಗೌರವಿಸಲಾಗಿದೆ. ಇಲ್ಲಿ ಸಿನಿಮಾಗಳಲ್ಲಿ ಬರುವ ರಸಮಯ ತಾಣ ‘ಖಂಡಾಲಾ’ ಇದೆ. ಬಾಂಬೆ ಹಿಲ್ಸ್, ಕೋರಮಂಡಲ್, ಕಲ್ಕತ್ತಾ ಸ್ಟ್ರೀಟ್, ಡೆಲ್ಲಿ ಕ್ರೆಸೆಂಟ್, ಅಮೃತಸರ ಸ್ಟ್ರೀಟ್‌ನಂತಹ ನೂರಾರು ಭಾರತೀಯ ಹೆಸರುಗಳು ಇಲ್ಲಿ ಜೀವಂತವಾಗಿವೆ ಎಂದು ಅವರು ನೆನಪಿಸಿದ್ದಾರೆ.


ಇದನ್ನೂ ಓದಿ: 40 ವರ್ಷಗಳಲ್ಲಿ ನ್ಯೂಜಿಲೆಂಡ್​ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ನರೆಂದ್ರ ಮೋದಿ!

ಈ ಸಮಾವೇಶದಲ್ಲಿ ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಮತ್ತು ಅವರ ಸರ್ಕಾರದ ಸಚಿವರಷ್ಟೇ ಅಲ್ಲದೆ, ಅಲ್ಲಿನ ವಿರೋಧ ಪಕ್ಷವಾದ ಲೇಬರ್ ಪಾರ್ಟಿಯ ನಾಯಕರೂ ಭಾಗವಹಿಸಿದ್ದರು. ಇದನ್ನು ಮುಕ್ತವಾಗಿ ಶ್ಲಾಘಿಸಿದ ಪ್ರಧಾನಿ ಮೋದಿ, “ಇದು ಭಾರತ ಮತ್ತು ನ್ಯೂಜಿಲೆಂಡ್ ಬಾಂಧವ್ಯಕ್ಕೆ ಅಲ್ಲಿನ ರಾಜಕಾರಣದಲ್ಲಿ ಇರುವ ಒಮ್ಮತದ ಹಾಗೂ ಬಲವಾದ ದ್ವಿಪಕ್ಷೀಯ ಬೆಂಬಲವನ್ನು ತೋರಿಸುತ್ತದೆ” ಎಂದು ಕೃತಜ್ಞತೆ ಸಲ್ಲಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:30 pm, Sat, 11 July 26

Follow Us