PM Modi Speech: ಭಾರತ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವೇ ಎಂಬ ಪ್ರಶ್ನೆಗೆ 100 ಕೋಟಿ ಲಸಿಕೆ ನೀಡಿಕೆ ಉತ್ತರ ನೀಡಿದೆ; ಪ್ರಧಾನಿ ಮೋದಿ
Narendra Modi Speech Highlights: 100 ಕೋಟಿ ಕೊವಿಡ್ ಲಸಿಕೆ ನೀಡಿಕೆ ಪೂರ್ಣಗೊಂಡ ಸಂದರ್ಭದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ದೇಶದ ಸಾಧನೆಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಭಾರತದಲ್ಲಿ 100 ಕೋಟಿ ಲಸಿಕೆ ನೀಡಿಕೆ ಪೂರ್ಣಗೊಂಡ ಹಿನ್ನೆಲೆಯಲ್ಲಿ, ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ಅದರಲ್ಲಿ ಅವರು, ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಅದಕ್ಕೆ ಯಶಸ್ಸೂ ಸಿಕ್ಕಿದೆ. 100 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ. ಇದು ಪ್ರತಿಯೊಬ್ಬ ಭಾರತೀಯನ ಯಶಸ್ಸು. ದೇಶದ ಪ್ರತಿಯೊಬ್ಬರಿಗೂ ಹೃದಯದಿಂದ ಅಭಿನಂದನೆ ಎಂದು ಪ್ರಧಾನಿ ನುಡಿದಿದ್ದಾರೆ. 100 ಕೋಟಿ ಡೋಸ್ ಲಸಿಕೆ ನೀಡಿಕೆ ದೇಶದ ಸಾಮರ್ಥ್ಯದ ಪ್ರತಿಬಿಂಬ. ಕಠಿಣ ಗುರಿ ಇಟ್ಟುಕೊಂಡು ಸಾಧಿಸುವುದು ಭಾರತಕ್ಕೆ ಗೊತ್ತಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಬೇರೆ ದೇಶಗಳ ಲಸಿಕಾ ಅಭಿಯಾನವನ್ನು ಪ್ರಸ್ತಾಪಿಸಿದ ಮೋದಿ, ಲಸಿಕೆ ಸಂಶೋಧನೆಯಲ್ಲಿ ಬೇರೆ ದೇಶಗಳಿಗೆ ಪರಿಣಿತಿ ಇತ್ತು. ಭಾರತ ಸಹ ಲಸಿಕೆಗಾಗಿ ಬೇರೆ ದೇಶಗಳನ್ನು ಅವಲಂಬಿಸಿತ್ತು. ಭಾರತ ಕೊರೊನಾ ವಿರುದ್ಧ ಹೋರಾಡಲು ಸಾಧ್ಯವೇ ಎಂಬ ಪ್ರಶ್ನೆ ಇತ್ತು. ಭಾರತ ಲಸಿಕೆ ಯಾವಾಗ ತರುತ್ತೆ, ಹಣ ಎಲ್ಲಿಂದ ತರುತ್ತೆ ಎಂಬ ಪ್ರಶ್ನೆ ಇತ್ತು. 100 ಕೋಟಿ ಡೋಸ್ ಲಸಿಕೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದೆ ಎಂದು ಭಾರತದ ಸಾಮರ್ಥ್ಯವನ್ನು ಅವರು ಹೊಗಳಿದ್ದಾರೆ.
ಭಾರತದಲ್ಲಿ ಉಚಿತವಾಗಿ ಕೊವಿಡ್ ಲಸಿಕೆ ನೀಡಲಾಗಿದೆ. ಇಡೀ ವಿಶ್ವ ಭಾರತದ ಈ ಸಾಮರ್ಥ್ಯವನ್ನು ನೋಡುತ್ತಿದೆ. 100 ಕೋಟಿ ಡೋಸ್ ಲಸಿಕೆ ಕೇವಲ ಅಂಕಿಸಂಖ್ಯೆಯಲ್ಲ. 100 ಕೋಟಿ ಡೋಸ್ ಲಸಿಕೆ ನವ ಭಾರತದ ಶಕ್ತಿ ತೋರಿಸಿದೆ. ಸಾಂಕ್ರಾಮಿಕ ರೋಗ ಯಾವುದೇ ತಾರತಮ್ಯ ಮಾಡಲ್ಲ. ಅದೇ ರೀತಿ ಲಸಿಕೆಯಲ್ಲೂ ತಾರತಮ್ಯ ಮಾಡಬಾರದು. ವಿಐಪಿಗಳಿಗೂ ಸಾಮಾನ್ಯರಂತೆಯೇ ಲಸಿಕೆಯನ್ನು ನೀಡಲಾಗಿದೆ. ಭಾರತದಲ್ಲಿ ಜನರ ಪಾಲುದಾರಿಕೆಯನ್ನು ನಮ್ಮ ಶಕ್ತಿಯಾಗಿ ಬಳಸಿದ್ದೇವೆ ಎಂದು ಪ್ರಧಾನಿ ನುಡಿದಿದ್ದಾರೆ.
ಕಡಿಮೆ ಸಮಯದಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, ಭಾರತದ ಲಸಿಕೆ ನೀಡಿಕೆ ವೈಜ್ಞಾನಿಕ ಆಧಾರದಲ್ಲಿ ನಡೆದಿದೆ ಎಂದು ನುಡಿದಿದ್ದಾರೆ. ಸವಾಲುಗಳಿಗೆ ಅನುಗುಣವಾಗಿ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ. ದಾಖಲೆ ಸಂಖ್ಯೆಯಲ್ಲಿ ಯುನಿಕಾರ್ನ್‌ಗಳು ಆರಂಭವಾಗಿವೆ. ದೇಶದಲ್ಲಿ ವಿಶ್ವಾಸ, ಉತ್ಸಾಹ, ಹುಮ್ಮಸ್ಸಿನ ವಾತಾವರಣ ಇದೆ. ಸ್ಟಾರ್ಟ್ ಅಪ್‌ನಲ್ಲಿ ದಾಖಲೆ ಮಟ್ಟದಲ್ಲಿ ಹೂಡಿಕೆ ಆಗುತ್ತಿದೆ. ಕೊವಿನ್ ಪೋರ್ಟಲ್ ಈಗ ವಿಶ್ವದ ಆಕರ್ಷಣೆಯಾಗಿದೆ ಎಂದು ಅವರು ನುಡಿದಿದ್ದಾರೆ.
ಮೇಡ್ ಇನ್ ಇಂಡಿಯಾದ ಶಕ್ತಿ ಬಹಳ ದೊಡ್ಡದಾಗಿದೆ. ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸಕಾರಾತ್ಮಕ ವಾತಾವರಣ ಇದೆ. ವ್ಯವಹಾರದಲ್ಲಿ ವೋಕಲ್ ಫಾರ್ ಲೋಕಲ್ ಜಾರಿಗೆ ತರಬೇಕು. ಕಳೆದ ವರ್ಷ ದೀಪಾವಳಿ ವೇಳೆ ಆತಂಕದ ಕಾರ್ಮೋಡ ಇತ್ತು. ಆದರೆ ಈ ಬಾರಿ 100 ಕೋಟಿ ಡೋಸ್ ನೀಡಿಕೆ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ಕೊರೊನಾ ಸಮಯದಲ್ಲಿ ಕೃಷಿ ಕ್ಷೇತ್ರ ದೇಶವನ್ನು ಕಾಪಾಡಿದೆ. ಭಾರತೀಯರು ಉತ್ಪಾದಿಸುವ ವಸ್ತುಗಳನ್ನು ಖರೀದಿಸಿ. ದೀಪಾವಳಿ ವೇಳೆ ಜನರಲ್ಲಿ ಹೊಸ ನಿರೀಕ್ಷೆ ಸೃಷ್ಟಿಯಾಗಿದೆ. ಯುದ್ಧ ನಡೆಯುವಾಗ ಶಸ್ತ್ರಾಸ್ತ್ರವನ್ನು ತ್ಯಜಿಸಬಾರದು. ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಹಬ್ಬಗಳನ್ನು ಸಂಪೂರ್ಣ ಸುರಕ್ಷತೆಯೊಂದಿಗೆ ಆಚರಿಸಬೇಕು. ಮುಂಬರುವ ಹಬ್ಬಗಳಿಗೆ ದೇಶದ ಜನರಿಗೆ ಶುಭಾಶಯಗಳು. ಮಾಸ್ಕ್ ಸಹಜವಾಗಿ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಮೋದಿ ಸಲಹೆ ನೀಡಿದ್ಧಾರೆ.
ಇದನ್ನೂ ಓದಿ:
ಭಯೋತ್ಪಾದಕರ ಹತ್ಯೆಗೆ ಕೇಂದ್ರ ಸರ್ಕಾರ ಸಜ್ಜು; ಜಮ್ಮು ಮತ್ತು ಕಾಶ್ಮೀರಕ್ಕೆ 25 ಕಂಪನಿಯ ಸೈನಿಕರನ್ನು ಕಳಿಸಲು ನಿರ್ಧಾರ
Published On - 10:38 am, Fri, 22 October 21