ಭಯೋತ್ಪಾದಕರ ಹತ್ಯೆಗೆ ಕೇಂದ್ರ ಸರ್ಕಾರ ಸಜ್ಜು; ಜಮ್ಮು ಮತ್ತು ಕಾಶ್ಮೀರಕ್ಕೆ 25 ಕಂಪನಿಯ ಸೈನಿಕರನ್ನು ಕಳಿಸಲು ನಿರ್ಧಾರ

25 ಕಂಪನಿಗಳ ಸೈನಿಕರಿಗೆ ವಸತಿ, ಸಾರಿಗೆ ಇತ್ಯಾದಿಗಳ ವ್ಯವಸ್ಥೆ ಕಲ್ಪಿಸುವುದರ ಪ್ರಕ್ರಿಯೆಗಳು ಈಗಾಗಲೇ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಕಾಶ್ಮೀರಕ್ಕೆ ಹೋಗುವ ಕಂಪನಿಗಳಿಗೆ ಮಾಹಿತಿ ನೀಡುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಭಯೋತ್ಪಾದಕರ ಹತ್ಯೆಗೆ ಕೇಂದ್ರ ಸರ್ಕಾರ ಸಜ್ಜು; ಜಮ್ಮು ಮತ್ತು ಕಾಶ್ಮೀರಕ್ಕೆ 25 ಕಂಪನಿಯ ಸೈನಿಕರನ್ನು ಕಳಿಸಲು ನಿರ್ಧಾರ
ಭಾರತೀಯ ಯೋಧರು
Follow us
S Chandramohan
| Updated By: preethi shettigar

Updated on: Oct 22, 2021 | 10:10 AM

ಜಮ್ಮು ಕಾಶ್ಮೀರದಲ್ಲಿ ಈಗ ಟಾರ್ಗೆಟ್ ಹತ್ಯೆಗಳನ್ನು ಉಗ್ರಗಾಮಿಗಳು ಮಾಡುತ್ತಿದ್ದಾರೆ. ಈ ಟಾರ್ಗೆಟ್ ಹತ್ಯೆ ತಡೆದು ನಾಗರಿಕರಿಗೆ ಹೆಚ್ಚಿನ ಭದ್ರತೆ ನೀಡಲು ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚುವರಿಯಾಗಿ ಸೈನಿಕರನ್ನು ಕಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕಾಶ್ಮೀರಕ್ಕೆ 25 ಕಂಪನಿ ಸೈನಿಕರನ್ನು ಹೆಚ್ಚುವರಿಯಾಗಿ ಕಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಶನಿವಾರದಿಂದ ಅಮಿತ್ ಶಾ ಮೂರು ದಿನಗಳ ಕಾಲ ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ.

ಜಮ್ಮು ಕಾಶ್ಮೀರಕ್ಕೆ 25 ಕಂಪನಿ ಸೈನಿಕರನ್ನು ಕಳಿಸಲು ನಿರ್ಧಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಹತ್ಯೆ ಹಾಗೂ ಎನ್​ಕೌಂಟರ್​ಗಳ ನಡುವೆ ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚುವರಿ ಸೇನಾಪಡೆಗಳನ್ನು ಕಳಿಸಲು ನಿರ್ಧರಿಸಿದೆ. ಮೂಲಗಳ ಪ್ರಕಾರ, ನಾಗರಿಕರಿಗೆ ಭದ್ರತೆ ನೀಡಲು ಮತ್ತು ಭಯೋತ್ಪಾದಕರನ್ನು ಹತ್ಯೆ ಮಾಡಲು, ಸೇನಾ ಪಡೆಗಳಿಗೆ ಸಹಾಯ ಮಾಡಲು ಜಮ್ಮು ಮತ್ತು ಕಾಶ್ಮೀರಕ್ಕೆ ಸುಮಾರು 25 ಕಂಪನಿಗಳ ಸೈನ್ಯವನ್ನು ಕಳುಹಿಸಲು ಅಧಿಕೃತ ಆದೇಶವನ್ನು ಶೀಘ್ರದಲ್ಲೇ ಹೊರಡಿಸಲಾಗುತ್ತದೆ.

ಸಿಆರ್‌ಪಿಎಫ್‌ನ ಹೆಚ್ಚುವರಿ ಕಂಪನಿಗಳನ್ನು ಹಂತ ಹಂತವಾಗಿ ಕಳುಹಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಮೊದಲ ಹಂತದಲ್ಲಿ, 10 ಕಂಪನಿಗಳನ್ನು ಜಮ್ಮು ಕಾಶ್ಮೀರಕ್ಕೆ ಕಳುಹಿಸಲಾಗುವುದು, ಮುಂದಿನ ಎರಡು ಹಂತಗಳಲ್ಲಿ, ಉಳಿದ 15 ಕಂಪನಿಗಳನ್ನು ಕಳುಹಿಸಲಾಗುವುದು. ಭಾರತೀಯ ಸೇನೆಯ ಒಂದು ಕಂಪನಿಯಲ್ಲಿ 120 ಸೈನಿಕರಿರುತ್ತಾರೆ. 25 ಕಂಪನಿಗಳಿಂದ ಒಟ್ಟಾರೆ 3 ಸಾವಿರ ಹೆಚ್ಚುವರಿ ಸೈನಿಕರನ್ನು ಈಗ ಜಮ್ಮು ಕಾಶ್ಮೀರಕ್ಕೆ ಕಳಿಸಲಾಗುತ್ತಿದೆ. 2019ರ ಆಗಸ್ಟ್ 5 ರಂದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಮುನ್ನ ಕೂಡ ಇದೇ ರೀತಿಯಾಗಿ ಹೆಚ್ಚುವರಿ ಸೈನಿಕರನ್ನು ಭದ್ರತಾ ವ್ಯವಸ್ಥೆಗಾಗಿ ಜಮ್ಮು ಕಾಶ್ಮೀರಕ್ಕೆ ಕಳಿಸಲಾಗಿತ್ತು.

ಕೇಂದ್ರ ಸರ್ಕಾರಕ್ಕಿರುವ ಸವಾಲು ಜಮ್ಮು ಮತ್ತು ಕಾಶ್ಮೀರದಲ್ಲಿ 90ರ ದಶಕದಲ್ಲಿ ಕಾಶ್ಮೀರಿ ಪಂಡಿತರನ್ನು ಹತ್ಯೆಗೈಯುವ ಮೂಲಕ ಉಗ್ರಗಾಮಿಗಳು ಕಾಶ್ಮೀರಿ ಪಂಡಿತರಲ್ಲಿ ಜೀವ ಭಯ ಹುಟ್ಟಿಸಿ, ಕಾಶ್ಮೀರ ಕಣಿವೆ ತೊರೆಯುವಂತೆ ಮಾಡಿದ್ದರು. 90 ರ ದಶಕದಲ್ಲಿ ಕಾಶ್ಮೀರದಲ್ಲಿ 80 ಸಾವಿರ ಕಾಶ್ಮೀರಿ ಪಂಡಿತರಿದ್ದರು. ಆದರೇ, 90 ರ ದಶಕದಲ್ಲಿ ಕಾಶ್ಮೀರಿ ಪಂಡಿತರು ಜೀವ ಭಯದಿಂದ ಕಾಶ್ಮೀರ ತೊರೆದು ಅಕ್ಕ ಪಕ್ಕದ ರಾಜ್ಯಗಳು, ದೆಹಲಿಗೆ ವಲಸೆ ಬಂದರು. ಇದರಿಂದಾಗಿ ಈಗ ಕೇವಲ 3 ಸಾವಿರ ಕಾಶ್ಮೀರಿ ಪಂಡಿತರು ಮಾತ್ರ ಕಾಶ್ಮೀರ ಕಣಿವೆಯಲ್ಲಿದ್ದಾರೆ. ಈಗ ಸ್ಥಳೀಯರಲ್ಲದವರನ್ನು, ಕಾಶ್ಮೀರಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರಗಾಮಿಗಳು ಹತ್ಯೆ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟುವುದೇ ಈಗ ಭಾರತೀಯ ಸೇನೆ, ಕೇಂದ್ರ ಸರ್ಕಾರಕ್ಕಿರುವ ಸವಾಲು.

ಉನ್ನತ ಮಟ್ಟದ ಸಭೆಯಲ್ಲಿ, ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸುಮಾರು ಎರಡು ಡಜನ್ ಸಿಆರ್‌ಪಿಎಫ್ ಕಂಪನಿಗಳು ದೇಶದ ವಿವಿಧ ಭಾಗಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಲಿವೆ. ಶೀಘ್ರದಲ್ಲೇ ಈ 25 ಕಂಪನಿಗಳು ಸೈನ್ಯವನ್ನು ಸೇರಲು ಅಧಿಕೃತ ಆದೇಶ ಹೊರಡಿಸಲಾಗುತ್ತೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

25 ಕಂಪನಿಗಳ ಸೈನಿಕರಿಗೆ ವಸತಿ, ಸಾರಿಗೆ ಇತ್ಯಾದಿಗಳ ವ್ಯವಸ್ಥೆ ಕಲ್ಪಿಸುವುದರ ಪ್ರಕ್ರಿಯೆಗಳು ಈಗಾಗಲೇ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಕಾಶ್ಮೀರಕ್ಕೆ ಹೋಗುವ ಕಂಪನಿಗಳಿಗೆ ಮಾಹಿತಿ ನೀಡುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ. ವ್ಯವಸ್ಥೆಗಳನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. ಡಿಜಿ ಸಿಆರ್‌ಪಿಎಫ್ ಕುಲದೀಪ್ ಸಿಂಗ್ ಈಗಾಗಲೇ ಜಮ್ಮು ಮತ್ತು ಕಾಶ್ಮೀರದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಅಕ್ಟೋಬರ್ 23ರಿಂದ 25ರವರೆಗೆ ತಮ್ಮ ಭೇಟಿಗಾಗಿ ಜಮ್ಮು ಕಾಶ್ಮೀರ ತಲುಪುವವರೆಗೂ ಡಿಜಿ ಕುಲದೀಪ್ ಸಿಂಗ್ ಅಲ್ಲಿಯೇ ಇರುತ್ತಾರೆ.

ಬುಧವಾರ, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್​ಕೌಂಟರ್​ನಲ್ಲಿ ಇಬ್ಬರು ಅಪರಿಚಿತ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಶೋಪಿಯಾನ್ ಜಿಲ್ಲೆಯ ಡ್ರಾಗಡ್ ಪ್ರದೇಶದಲ್ಲಿ ಉಗ್ರರು ಇರುವುದರ ಬಗ್ಗೆ ಮಾಹಿತಿ ಪಡೆದ ನಂತರ ಪ್ರದೇಶವನ್ನು ಸುತ್ತುವರಿದು, ಶೋಧ ಕಾರ್ಯಾಚರಣೆಯನ್ನು ಆರಂಭಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏತನ್ಮಧ್ಯೆ, ಕಳೆದ 10 ವರ್ಷಗಳಲ್ಲಿ ಭಾರತೀಯ ಸೇನೆಯ ಸುದೀರ್ಘ ಕಾರ್ಯಾಚರಣೆ ಮಾಂಧರ್ ಸೆಕ್ಟರ್‌ನಲ್ಲಿ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ಕಳೆದ ಎರಡು ವಾರಗಳಲ್ಲಿ ಒಟ್ಟು 15 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಆದರೆ ಕಳೆದ 15 ದಿನಗಳಲ್ಲಿ 11 ನಾಗರಿಕರನ್ನು ಹೆಚ್ಚಾಗಿ ಸ್ಥಳೀಯರಲ್ಲದವರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ 48 ಗಂಟೆಗಳ ನಂತರ ಯೋಧರ ಮೃತದೇಹ ಪತ್ತೆ, ಸಾವಿನ ಸಂಖ್ಯೆ 9ಕ್ಕೆ ಏರಿಕೆ

9ನೇ ದಿನಕ್ಕೆ ಕಾಲಿಟ್ಟ ಉಗ್ರ ನಿಗ್ರಹ ಕಾರ್ಯಾಚರಣೆ: ಜಮ್ಮು ಕಾಶ್ಮೀರದ ನಿವಾಸಿಗಳು ಮನೆಯಿಂದ ಹೊರಬರಬೇಡಿ ಎಂದ ಭದ್ರತಾ ಪಡೆ