ಮತ್ತೊಮ್ಮೆ ಯೋಗಿ ಸರ್ಕಾರದ ವಿರುದ್ಧ ತಿರುಗಿಬಿದ್ದ ಬಿಜೆಪಿ ಸಂಸದ ವರುಣ್ ಗಾಂಧಿ !
ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ವಿಡಿಯೋ ಶೇರ್ ಮಾಡಿಕೊಂಡು ಸರ್ಕಾರದ ವಿರುದ್ಧ ವರುಣ್ ಗಾಂಧಿ ಎರಡು ಟ್ವೀಟ್ ಮಾಡಿದ್ದರು. ಅದಾದ ನಂತರ ವರುಣ್ ಗಾಂಧಿ ಮತ್ತು ಅವರ ತಾಯಿ ಮನೇಕಾ ಗಾಂಧಿಯವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿದೆ.
ಲಖನೌ: ಪಿಲಿಭಿತ್ನ ಬಿಜೆಪಿ ಸಂಸದ ವರುಣ್ ಗಾಂಧಿ (BJP MP Varun Gandhi) ಈಗೀಗ ಯೋಗಿ ಆದಿತ್ಯನಾಥ್ ಸರ್ಕಾರ (Yogi Adityanath Government)ದ ವಿರುದ್ಧ ಜಾಸ್ತಿ ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಉತ್ತರಪ್ರದೇಶದ ಲಖಿಂಪುರ ಖೇರಿ(Lakhimpur Kheri)ಯಲ್ಲಿ ರೈತರ ಮೇಲೆ ನಡೆದ ಹಿಂಸಾಚಾರವನ್ನು ಖಂಡಿಸಿ, ರೈತರ ಪರ ಮಾತನಾಡಿದ್ದರು. ಸರ್ಕಾರವನ್ನು ಪರೋಕ್ಷವಾಗಿಯೇ ವಿರೋಧಿಸಿದ್ದರು. ಇದೀಗ ಪಿಲಿಭಿತ್ ಮತ್ತು ಬರೇಲಿಗಳಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರ ಬಗ್ಗೆಯೂ ಈಗ ವರುಣ್ ಗಾಂಧಿ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ.
ಫಿಲಿಬಿತ್ ಮತ್ತು ಬರೇಲಿಗಳಲ್ಲಿ ಬಹುತೇಕ ಕೆಳ ಪ್ರದೇಶಗಳಲ್ಲಿ ನೀರು ತುಂಬಿ ನಿಂತಿದೆ. ಈ ವಿಪತ್ತು ಮುಗಿಯುವವರಿಗೆ ಯಾರೂ ಹಸಿವಿನಿಂದ ಇರಬಾರದು ಎಂದು ರೇಶನ್ಗಳನ್ನು ನೀಡಲಾಗುತ್ತಿದೆ. ಸಂಕಷ್ಟದಲ್ಲಿರುವ ಸಾಮಾನ್ಯ ಜನರು ವ್ಯವಸ್ಥೆಯಿಂದ ಸಹಾಯವನ್ನು ಬಯಸುತ್ತಾರೆ..ಆದರೆ ಅವರು ತಮ್ಮ ರಕ್ಷಣೆಗೆ ತಾವೇ ಗುದ್ದಾಡುವ ಪರಿಸ್ಥಿತಿ ಇದೆ. ಹೀಗೆ ವೈಯಕ್ತಿಕವಾಗಿಯೇ ಎಲ್ಲವನ್ನೂ ಮಾಡಿಕೊಳ್ಳಬೇಕು ಎಂದಾದರೆ ಆಡಳಿತ ಇರುವುದು ಯಾತಕ್ಕೆ? ಅದರ ಅರ್ಥವೇನು? ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ವಿಪರೀತ ಮಳೆಯಿಂದಾಗಿ ಮೂವರು ಮೃತಪಟ್ಟಿದ್ದಾರೆ. 100ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಶಾರದಾ ಮತ್ತು ದೇವೋಹ ನದಿಗಳು ತುಂಬಿ ಹರಿಯುತ್ತಿದ್ದು, ನದಿ ದಡದ ಜನರ ಸ್ಥಳಾಂತರವಾಗಿದೆ. ಈ ಹೊತ್ತಲ್ಲೇ ವರುಣ್ ಗಾಂಧಿ ಆಡಳಿತವನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ. ಪ್ರವಾಹದಿಂದ ಸಂಕಷ್ಟಕ್ಕೀಡಾದ ಜನರಿಗೆ ಪರಿಹಾರ ನೀಡಲು ಯೋಗಿ ಆದಿತ್ಯನಾಥ್ರನ್ನು ಆಗ್ರಹಿಸಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ವಿಡಿಯೋ ಶೇರ್ ಮಾಡಿಕೊಂಡು ಸರ್ಕಾರದ ವಿರುದ್ಧ ವರುಣ್ ಗಾಂಧಿ ಎರಡು ಟ್ವೀಟ್ ಮಾಡಿದ್ದರು. ಅದಾದ ನಂತರ ವರುಣ್ ಗಾಂಧಿ ಮತ್ತು ಅವರ ತಾಯಿ ಮನೇಕಾ ಗಾಂಧಿಯವರನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿದೆ. ಉತ್ತರಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಆದರೆ ಈ ಬೆನ್ನಲ್ಲೇ ವರುಣ್ ಗಾಂಧಿ ಪದೇಪದೆ ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡುತ್ತಿರುವುದು ಅನುಮಾನ ಹುಟ್ಟಿಸಿದೆ.
ಇದನ್ನೂ ಓದಿ: ಭಾರತದಲ್ಲಿ ಕೊವಿಡ್‌ಗೆ 50 ಲಕ್ಷ ಜನ ಬಲಿ, ಆದ್ರೆ 100 ಕೋಟಿ ಡೋಸ್ ನೀಡಿದ್ದಕ್ಕೆ ಸಂಭ್ರಮಿಸುತ್ತಿದ್ದಾರೆ: ಸಿದ್ದರಾಮಯ್ಯ ವ್ಯಂಗ್ಯ
Published On - 11:22 am, Fri, 22 October 21