PM Modi in Kerala: ಎರಡು ದಿನಗಳ ಭೇಟಿಗಾಗಿ ಕೊಚ್ಚಿ ತಲುಪಿದ ಪ್ರಧಾನಿ; ರಸ್ತೆಯಲ್ಲಿ ನಡೆದು ಜನರತ್ತ ಕೈ ಬೀಸಿದ ಮೋದಿ
ಮೋದಿ ಇಂದು ಸಂಜೆ 5.30ಕ್ಕೆ ತೇವರ ಜಂಕ್ಷನ್‌ನಿಂದ ತೇವರ ಸೇಕ್ರೆಡ್ ಹಾರ್ಟ್ ಕಾಲೇಜು ಮೈದಾನದವರೆಗೆ 1.8 ಕಿ.ಮೀ ಮೆಗಾ ರೋಡ್ ಶೋ ನಡೆಸಲಿದ್ದಾರೆ. 6 ಗಂಟೆಗೆ 'ಯುವಂ 2023' ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ.

ಕೊಚ್ಚಿ: ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಕೊಚ್ಚಿಗೆ ಆಗಮಿಸಿದ್ದಾರೆ. ಮಧ್ಯಪ್ರದೇಶದಿಂದ (Madhya Pradesh) ವಿಶೇಷ ವಾಯುಪಡೆಯ ವಿಮಾನದಲ್ಲಿ ಕೊಚ್ಚಿಯ (Kochi) ವಿಲ್ಲಿಂಗ್ಡನ್ ದ್ವೀಪದಲ್ಲಿರುವ ನೌಕಾ ಪಡೆಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ, ಸಂಜೆ 5.30ಕ್ಕೆ ತೇವರ ಜಂಕ್ಷನ್‌ನಿಂದ ತೇವರ ಸೇಕ್ರೆಡ್ ಹಾರ್ಟ್ ಕಾಲೇಜು ಮೈದಾನದವರೆಗೆ 1.8 ಕಿ.ಮೀ ಮೆಗಾ ರೋಡ್ ಶೋ ನಡೆಸಲಿದ್ದಾರೆ. 6 ಗಂಟೆಗೆ ‘ಯುವಂ 2023’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆನಂತರ 7.45ಕ್ಕೆ ವಿಲ್ಲಿಂಗ್ಡನ್ ಐಲ್ಯಾಂಡ್‌ನ ಹೋಟೆಲ್ ತಾಜ್ ಮಲಬಾರ್‌ನಲ್ಲಿ ಕ್ರೈಸ್ತ ಧರ್ಮದ ಮುಖ್ಯಸ್ಥರನ್ನು ಭೇಟಿಯಾಗಲಿದ್ದಾರೆ. ಅವರು ತಾಜ್ ಮಲಬಾರ್‌ನಲ್ಲಿ ತಂಗಲಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಪುತ್ರ ಅನಿಲ್ ಆಂಟನಿ, ನಟಿ ಅಪರ್ಣಾ ಬಾಲಮುರಳಿ ಮತ್ತಿತರರು ಯುವಂ ವೇದಿಕೆ ತಲುಪಿದ್ದಾರೆ. ನಟಿ ನವ್ಯಾ ನಾಯರ್ ವೇದಿಕೆಯಲ್ಲಿ ನೃತ್ಯ ಪ್ರದರ್ಶಿಸಿದ್ದಾರೆ.
ಬಿಳಿ ಜುಬ್ಬಾ ಮತ್ತು ಧೋತಿ ಧರಿಸಿ ಆಗಮಿಸಿದ ಪ್ರಧಾನಿ ರಸ್ತೆಯಲ್ಲೇ ನಡೆದು ಜನರತ್ತ ಕೈ ಬೀಸಿದ್ದಾರೆ. ಸುಮಾರು ಒಂದು ಕಿಮೀ ಮೋದಿ ರಸ್ತೆಯಲ್ಲೇ ಹೆಜ್ಜೆ ಹಾಕಿದ ಮೋದಿಯವರಿಗೆ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಹೂವಿನ ಸುರಿಮಳೆಗೈದಿದ್ದಾರೆ. ನಂತರ ಮೋದಿಯವರು ಕಾರಿನಲ್ಲಿ ಕುಳಿತು ಜನರಿಗೆ ನಮಸ್ಕರಿಸುತ್ತಾ ಸಾಗಿದ್ದಾರೆ.
#WATCH | Kerala: PM Narendra Modi holds a roadshow in Kochi. PM is on a two-day visit to the state. pic.twitter.com/m1aBLyrPZ9
— ANI (@ANI) April 24, 2023
ನಾಳೆ ಬೆಳಗ್ಗೆ 9.25ಕ್ಕೆ ಮೋದಿ ಕೊಚ್ಚಿಯಿಂದ ಹೊರಟು 10.15ಕ್ಕೆ ತಿರುವನಂತಪುರಂ ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿ ವಂದೇಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಬೆಳಗ್ಗೆ 10.30 ಕ್ಕೆ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಗುವುದು, 10.50ರವರೆಗೆ ಅವರು ಅಲ್ಲೇ ಇರಲಿದ್ದಾರೆ. ಪ್ರಧಾನಿ ರೈಲಿನಲ್ಲಿ ಪ್ರಯಾಣಿಸುವುದಿಲ್ಲ. 11ಗಂಟೆಗೆ ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಸಮಾರಂಭದಲ್ಲಿ 3200 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೊಚ್ಚಿ ವಾಟರ್ ಮೆಟ್ರೋವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು. ಅವರು ಡಿಜಿಟಲ್ ವಿಶ್ವವಿದ್ಯಾಲಯವನ್ನು ಉದ್ಘಾಟಿಸಲಿದ್ದಾರೆ.
#WATCH | Kerala: PM Narendra Modi greets people in Kochi during his roadshow. pic.twitter.com/nX9hcqgbjV
— ANI (@ANI) April 24, 2023
ದಕ್ಷಿಣ ರೈಲ್ವೆಯ ತಿರುವನಂತಪುರಂ ಮತ್ತು ಪಾಲಕ್ಕಾಡ್ ವಿಭಾಗಗಳ ಅಡಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಕೊಚುವೇಲಿ – ತಿರುವನಂತಪುರಂ – ನೇಮಮ್ ರೈಲು ನಿಲ್ದಾಣಗಳನ್ನು ಕೇಂದ್ರೀಕರಿಸಿ ತಿರುವನಂತಪುರ ರೈಲ್ವೆ ವಲಯದ ಸಮಗ್ರ ಅಭಿವೃದ್ಧಿ ಯೋಜನೆ, ನೇಮಮ್ ಟರ್ಮಿನಲ್ ಯೋಜನೆಯ ಘೋಷಣೆ, ತಿರುವನಂತಪುರ ಸೆಂಟ್ರಲ್, ವರ್ಕಲಾ ಶಿವಗಿರಿ ಮತ್ತು ಕೋಝಿಕ್ಕೋಡ್ ರೈಲು ನಿಲ್ದಾಣಗಳನ್ನು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಯೋಜನೆಯ ಉದ್ಘಾಟನೆಯನ್ನು ಪ್ರಧಾನ ಮಂತ್ರಿಯವರು ನೆರವೇರಿಸಲಿದ್ದಾರೆ.
ಇದನ್ನೂ ಓದಿ: Operation Kaveri: ಹಕ್ಕಿಪಿಕ್ಕಿ ಜನ ಸೇರಿ ಸುಡಾನ್ನಿಂದ ಭಾರತೀಯರ ಕರೆತರಲು ಆಪರೇಷನ್ ಕಾವೇರಿ
ತಿರುವನಂತಪುರಂ-ಶೋರ್ನೂರ್ ವಿಭಾಗದ ರೈಲಿನ ವೇಗವನ್ನು ಗಂಟೆಗೆ 110 ಕಿ.ಮೀ.ಗೆ ಹೆಚ್ಚಿಸುವ ಯೋಜನೆಗೆ ಅವರು ಶಂಕು ಸ್ಥಾಪನೆ ಮಾಡಲಾಗಿದ್ದಾರೆ. ನವೀಕರಿಸಿದ ಕೊಚುವೇಲಿ ರೈಲು ನಿಲ್ದಾಣ ಮತ್ತು ದಿಂಡಿಗಲ್ – ಪಳನಿ – ಪೊಲ್ಲಾಚಿ ವಿದ್ಯುದ್ದೀಕೃತ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು. ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಒಂದು ಗಂಟೆ ಕಾಲ ಕಳೆಯಲಿರುವ ಪ್ರಧಾನಿ, ಮಧ್ಯಾಹ್ನ 12.40ಕ್ಕೆ ಗುಜರಾತ್ನ ಸೂರತ್ಗೆ ತೆರಳಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:53 pm, Mon, 24 April 23