ಇಡೀ ಜಗತ್ತು ಭಾರತದ ಯುವಕರನ್ನು ಭರವಸೆಯಿಂದ ನೋಡುತ್ತಿದೆ; ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ಪ್ರಧಾನಿ ಮೋದಿ ಘಟಿಕೋತ್ಸವ ಭಾಷಣ 

| Updated By: ಸುಷ್ಮಾ ಚಕ್ರೆ

Updated on: Jul 29, 2022 | 12:07 PM

Narendra Modi Speech: ಇಡೀ ಜಗತ್ತು ಭಾರತದ ಯುವಕರನ್ನು ಭರವಸೆಯಿಂದ ನೋಡುತ್ತಿದೆ. ಏಕೆಂದರೆ ನೀವು ದೇಶದ ಬೆಳವಣಿಗೆಯ ಎಂಜಿನ್‌ ಆಗಿದ್ದೀರಿ ಎಂದು ಅಣ್ಣಾ ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದಲ್ಲಿ ನರೇಂದ್ರ ಮೋದಿ ಹೇಳಿದ್ದಾರೆ.

ಇಡೀ ಜಗತ್ತು ಭಾರತದ ಯುವಕರನ್ನು ಭರವಸೆಯಿಂದ ನೋಡುತ್ತಿದೆ; ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ಪ್ರಧಾನಿ ಮೋದಿ ಘಟಿಕೋತ್ಸವ ಭಾಷಣ 
ಪ್ರಧಾನಿ ನರೇಂದ್ರ ಮೋದಿ
Follow us on

ಚೆನ್ನೈ: ತಮಿಳುನಾಡಿನ ಚೆನ್ನೈಗೆ 2ನೇ ಬಾರಿ ಭೇಟಿ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಇಂದು ಅಣ್ಣಾ ವಿಶ್ವವಿದ್ಯಾನಿಲಯದ (Anna University) 42ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಚೆನ್ನೈನಲ್ಲಿ ಇಂದು ನಡೆದ ಅಣ್ಣಾ ವಿಶ್ವವಿದ್ಯಾನಿಲಯದ 42ನೇ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದು, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ (CM MK Stalin), ರಾಜ್ಯಪಾಲ ಆರ್.ಎನ್. ರವಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಘಟಿಕೋತ್ಸವ ಭಾಷಣ ಮಾಡಿದ್ದಾರೆ. ಯುವಕರು ಈ ದೇಶದ ಅಭಿವೃದ್ಧಿಯ ಇಂಜಿನ್​ಗಳು. ನಮ್ಮ ದೇಶದ ಯುವಕರನ್ನು ಇಡೀ ಜಗತ್ತೇ ಭರವಸೆಯಿಂದ ನೋಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಯುವಕರ ಅಭಿವೃದ್ಧಿಯೇ ದೇಶದ ಬೆಳವಣಿಗೆ. ನಿಮ್ಮ ಕಲಿಕೆಯೇ ಭಾರತದ ಅಭಿವೃದ್ಧಿ. ನಿಮ್ಮ ಗೆಲುವೇ ಭಾರತದ ಗೆಲುವು. ನೀವು ಈಗಾಗಲೇ ನಿಮ್ಮ ಮನಸ್ಸಿನಲ್ಲಿ ನಿಮಗಾಗಿ ಭವಿಷ್ಯವನ್ನು ನಿರ್ಮಿಸಿಕೊಂಡಿದ್ದೀರಿ. ಆದ್ದರಿಂದ, ಇಂದು ಸಾಧನೆಗಳ ದಿನ ಮಾತ್ರವಲ್ಲದೆ ಆಕಾಂಕ್ಷೆಯ ದಿನವೂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಡೀ ಜಗತ್ತು ಭಾರತದ ಯುವಕರನ್ನು ಭರವಸೆಯಿಂದ ನೋಡುತ್ತಿದೆ. ಏಕೆಂದರೆ ನೀವು ದೇಶದ ಬೆಳವಣಿಗೆಯ ಎಂಜಿನ್‌ಗಳು. ಹಾಗೇ, ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಿದೆ. ನಿಮ್ಮೆಲ್ಲರ ಕನಸುಗಳೂ ಈಡೇರಲಿ ಎಂದು ನಾನು ಹಾರೈಸುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: International Bullion Exchange: ಭಾರತದ ಮೊದಲ ಜಾಗತಿಕ ಚಿನ್ನ-ಬೆಳ್ಳಿ ವಿನಿಮಯ ಕೇಂದ್ರಕ್ಕೆ ಇಂದು ನರೇಂದ್ರ ಮೋದಿ ಚಾಲನೆ

ಕಳೆದ ವರ್ಷ ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿತ್ತು. ಈಗೀಗ ನಾವೀನ್ಯತೆಯೇ ಜೀವನ ವಿಧಾನವಾಗುತ್ತಿದೆ. ಕಳೆದ 6 ವರ್ಷಗಳಲ್ಲಿ, ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಶೇ. 15,000ರಷ್ಟು ಹೆಚ್ಚಾಗಿದೆ. ಕಳೆದ ವರ್ಷ, ಭಾರತವು 83 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ದಾಖಲೆಯ ಎಫ್‌ಡಿಐ ಅನ್ನು ಸ್ವೀಕರಿಸಿದೆ. ನಮ್ಮ ಸ್ಟಾರ್ಟ್‌ಅಪ್‌ಗಳು ಸಹ ಕೊವಿಡ್ ಸಾಂಕ್ರಾಮಿಕ ನಂತರದ ದಾಖಲೆಯ ಹಣವನ್ನು ಸಂಪಾದಿಸುತ್ತಿವೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಮೊದಲು ಸಮಾಜದಲ್ಲಿ ಒಬ್ಬ ಯುವಕ ತಾನು ಉದ್ಯಮಿ ಎಂದು ಹೇಳುವುದು ಕಷ್ಟಕರವಾಗಿತ್ತು. ಜನರೆಲ್ಲರೂ ಆತನಿಗೆ ಈ ಕೈ ಸುಟ್ಟುಕೊಳ್ಳುವ ಉದ್ಯಮ ಬಿಟ್ಟು ಒಳ್ಳೆ ಉದ್ಯೋಗ ಹುಡುಕಿಕೊಂಡು ಬೇಗ ಸೆಟಲ್ ಆಗು ಎಂದು ಸಲಹೆ ನೀಡುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಅದಕ್ಕೆ ವಿರುದ್ಧವಾಗಿದೆ. ಯುವಕರು ಹೆಚ್ಚೆಚ್ಚು ಸ್ಟಾರ್ಟ್​ಅಪ್​ಗಳನ್ನು ಆರಂಭಿಸುತ್ತಿದ್ದಾರೆ. ತಮ್ಮದೇ ಸ್ವಾವಲಂಬಿ ಉದ್ಯಮವನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.