PM Modi Chennai Visit: ತಮಿಳುನಾಡಿನಲ್ಲಿ ಎಐಎಡಿಎಂಕೆ ಬಣ ರಾಜಕೀಯ; ನರೇಂದ್ರ ಮೋದಿ ಚೆನ್ನೈ ಭೇಟಿ ಹಿಂದಿದೆ ಹಲವು ರಾಜಕೀಯ ಲೆಕ್ಕಾಚಾರ
42nd Convocation of Anna University: ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ.
ಚೆನ್ನೈ: ತಮಿಳುನಾಡಿನ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾಲಯದ 42ನೇ ಘಟಿಕೋತ್ಸವ (Anna University Convocation) ಚೆನ್ನೈನಲ್ಲಿ ಶುಕ್ರವಾರ (ಜುಲೈ 29) ನಡೆಯಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) 69 ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಪ್ರಮಾಣಪತ್ರ ನೀಡಲಿದ್ದಾರೆ. ಪ್ರಧಾನಿ ತಮಿಳುನಾಡು ಭೇಟಿಯ ಬಗ್ಗೆ ರಾಷ್ಟ್ರ ರಾಜಕೀಯ ವಲಯದಲ್ಲಿ ಕುತೂಹಲ ವ್ಯಕ್ತವಾಗಿದೆ.
ಚೆನ್ನೈ ಭೇಟಿಯ ವೇಳೆ ನರೇಂದ್ರ ಮೋದಿ ಅವರು ಎಐಎಡಿಎಂಕೆಯ ಎರಡು ಪ್ರತ್ಯೇಕ ಬಣಗಳ ನಾಯಕರಾದ ಒ.ಪನ್ನೀರ್ಸೆಲ್ವಂ ಮತ್ತ ಇ.ಪಳನಿಸ್ವಾಮಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಇಬ್ಬರೂ ನಾಯಕರು ಇತ್ತೀಚೆಗಷ್ಟೇ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಯತ್ನಿಸಿದ್ದರು. ಆದರೆ ಬಿಜೆಪಿ ಈ ಭೇಟಿಗೆ ಅವಕಾಶ ನೀಡಿರಲಿಲ್ಲ.
ಒಪಿಎಸ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯ ಅವಕಾಶ ಸಿಕ್ಕಿತ್ತು. ರಾಷ್ಟ್ರಪತಿ ಚುನಾವಣೆ ಸಂದರ್ಭ ತಮ್ಮ ಬೆಂಬಲ ಘೋಷಿಸಿ, ಶಿಷ್ಟಾಚಾರದ ಸೌಹಾರ್ದ ಮಾತುಗಳನ್ನು ಆಡಿ ರಾಜ್ಯಕ್ಕೆ ಹಿಂದಿರುಗಿದ್ದರು. ಇಪಿಎಸ್ಗೆ ಚೆನ್ನೈಗೆ ಹಿಂದುರಿಗಿದ ವೇಳೆ ಅವರ ಬಗ್ಗೆ ವ್ಯಂಗ್ಯವಾಡಿದ್ದ ಒಪಿಎಸ್ ಬಣ, ‘ಬಿಜೆಪಿಯ ಬೆಂಬಲ ಇಪಿಎಸ್ಗೆ ಇಲ್ಲ’ ಎಂದು ಹೇಳಿಕೊಂಡಿತ್ತು.
ಎರಡು ಬಣಗಳ ಪೈಕಿ ಯಾವ ಬಣ ನಿಜವಾದ ಎಐಡಿಎಂಕೆ ಎನ್ನಿಸಿಕೊಳ್ಳುತ್ತದೆ ಎನ್ನುವುದನ್ನು ನಿರೂಪಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಬೆಂಬಲ ನಿರ್ಣಾಯಕಪಾತ್ರ ವಹಿಸುತ್ತದೆ ಎಂಬ ಅರಿವು ಅವರಿಬ್ಬರಿಗೂ ಇದೆ. ಹೀಗಾಗಿಯೇ ತಮಿಳುನಾಡು ಭೇಟಿಯ ವೇಳೆ ಮೋದಿ ಉರುಳಿಸುವ ದಾಳದ ಬಗ್ಗೆ ಕುತೂಹಲ ವ್ಯಕ್ತವಾಗಿದೆ.
ತಮಿಳುನಾಡಿನ ಬಣ ರಾಜಕೀಯದಲ್ಲಿ ಮೋದಿ ಅವರು ಯಾರೊಬ್ಬರ ಪರ ವಹಿಸುವ ಸಾಧ್ಯತೆ ಕಡಿಮೆ ಎಂದೇ ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಎಐಎಡಿಎಂಕೆಯಲ್ಲಿ ಬಿರುಕು ಹೆಚ್ಚಾಗಿ ಅದು ದುರ್ಬಲವಾದಷ್ಟೂ ಡಿಎಂಕೆ ವಿರೋಧಿ ಮತಗಳು ಬಿಜೆಪಿಯತ್ತ ಒಲಿಯುವ ಸಾಧ್ಯತೆ ಹೆಚ್ಚಾಗುತ್ತದೆ. ಎಐಡಿಎಂಕೆಯ ಎರಡೂ ಬಣಗಳಿಂದ ಸಮಾನ ಅಂತರ ಕಾಪಾಡಿಕೊಂಡು, ತಮಿಳುನಾಡಿನ ದೊಡ್ಡ ಪ್ರತಿಪಕ್ಷವಾಗಿ ಹೊರಹೊಮ್ಮಲು ಬಿಜೆಪಿ ಯತ್ನಿಸಬಹುದು ಎಂದು ಹೇಳಲಾಗುತ್ತಿದೆ.