ಇಂದು ಸಂಜೆ 4.30ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಸಭೆ; ಕೊವಿಡ್ 19 ನಿಯಂತ್ರಣ ಬಗ್ಗೆ ಮಹತ್ವದ ಚರ್ಚೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ ವಾರ ಉನ್ನತ ಮಟ್ಟದ ಸಭೆ ನಡೆಸಿದ್ದರು. ದೇಶದ ಒಟ್ಟಾರೆ ಕೊವಿಡ್ 19 ಪರಿಸ್ಥಿತಿಯ ಅವಲೋಕನ ಮಾಡಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ಸಂಜೆ 4.30ಕ್ಕೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚ್ಯುವಲ್ ಸಭೆ ನಡೆಸಲಿದ್ದಾರೆ. ದೇಶದಲ್ಲಿ ದಿನೇದಿನೆ ಕೊರೊನಾ ವೈರಸ್ ಮತ್ತು ಒಮಿಕ್ರಾನ್ ಸೋಂಕಿತರ (Omicron Virus)ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದಿನ ಸಭೆ ಮಹತ್ವ ಎನ್ನಿಸಿದೆ. ಇಂದು ದೇಶದಲ್ಲಿ 2.47 ಲಕ್ಷ ಕೊರೊನಾ ಕೇಸ್ಗಳು ದಾಖಲಾಗಿದ್ದು, 380 ಮಂದಿ ಸೋಂಕಿನಿಂದ ಸತ್ತಿದ್ದಾರೆ. ಕೊವಿಡ್ 19 ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದಂತೆ ಈಗಾಗಲೇ ಹಲವು ರಾಜ್ಯಗಳು ನೈಟ್ ಕರ್ಫ್ಯೂ, ಗುಂಪುಗೂಡುವಿಕೆ ನಿಷೇಧ, ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಕಡಿವಾಣದಂಥ ನಿರ್ಬಂಧಗಳನ್ನು ಹೇರಿವೆ. ಹಾಗಿದ್ದಾಗ್ಯೂ ಕೂಡ ಕೊರೊನಾ ಇಳಿಮುಖ ಆಗುತ್ತಿಲ್ಲ. ದೈನಂದಿನ ಪಾಸಿಟಿವಿಟಿ ರೇಟ್ ಕೂಡ ಏರುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ಪಶ್ಚಿಮಬಂಗಾಳ, ಕರ್ನಾಟಕ, ರಾಜಸ್ಥಾನ ಸೇರಿ ಕೆಲವು ರಾಜ್ಯಗಳಲ್ಲಂತೂ ಕೊರೊನಾ ಅತ್ಯಂತ ವೇಗವಾಗಿ ಹಬ್ಬುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಕಳೆದ ವಾರ ಉನ್ನತ ಮಟ್ಟದ ಸಭೆ ನಡೆಸಿದ್ದರು. ದೇಶದ ಒಟ್ಟಾರೆ ಕೊವಿಡ್ 19 ಪರಿಸ್ಥಿತಿಯ ಅವಲೋಕನ ಮಾಡಿದ್ದರು. ಹೆಚ್ಚುತ್ತಿರುವ ಕೊರೊನಾ ವಿರುದ್ಧ ಹೋರಾಡಲು ಆರೋಗ್ಯ ಕ್ಷೇತ್ರ ಎಷ್ಟು ಸನ್ನದ್ಧವಾಗಿದೆ?, ಕೊರೊನಾ ಲಸಿಕೆ ಅಭಿಯಾನದ ವೇಗ ಹೇಗಿದೆ?, ಒಮಿಕ್ರಾನ್ ಸೋಂಕಿನಿಂದ ಯಾವ ಸ್ವರೂಪದ ಅನಾರೋಗ್ಯ ಉಂಟಾಗುತ್ತಿದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ, ಪರಿಶೀಲನೆ ನಡೆಸಿದ್ದರು. ಈ ಸಭೆಯಲ್ಲಿ ದೇಶದ ಕೊವಿಡ್ 19 ಪರಿಸ್ಥಿತಿ ಮತ್ತು ಜಾಗತಿಕವಾಗಿ ಯಾವ್ಯಾವ ದೇಶದಲ್ಲಿ ಯಾವ ಪರಿಸ್ಥಿತಿ ಇದೆ ಎಂಬ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಪ್ರಧಾನಮಂತ್ರಿಗೆ ಸವಿಸ್ತಾರವಾಗಿ ವರದಿ ನೀಡಿದ್ದರು ಎಂದು ಪ್ರಧಾನಮಂತ್ರಿ ಕಾರ್ಯಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಕೊರೊನಾ ಹೆಚ್ಚಳವಾಗುತ್ತಿದ್ದರೂ, ಇನ್ನೊಂದೆಡೆ ಕೊರೊನಾ ಲಸಿಕೆ ನೀಡಿಕೆ ಅಭಿಯಾನವೂ ವೇಗಗೊಂಡಿದೆ. 15-18ವರ್ಷದವರಿಗೆ ಲಸಿಕೆ ನೀಡಲಾಗುತ್ತಿದ್ದು, ಇನ್ನೊಂದಡೆ ಜನವರಿ 10ರಿಂದ ಆರೋಗ್ಯ ಕಾರ್ಯಕರ್ತರು ಸೇರಿ, ಕೊವಿಡ್ 19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಮತ್ತು 60 ವರ್ಷ ಮೇಲ್ಪಟ್ಟು ಇತರ ರೋಗಗಳಿಂದ ಬಳಲುತ್ತಿರುವವರಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯವೂ ಶುರುವಾಗಿದೆ. ಕಳೆದ ಸಭೆಯಲ್ಲಿ ಪ್ರಧಾನಿ ಮೋದಿ, ಲಸಿಕೆ ವೇಗವನ್ನು ಇನ್ನಷ್ಟು ಹೆಚ್ಚಿಸಬೇಕು. ಮಿಷನ್ ಮೋಡ್ನಲ್ಲಿ ಅಭಿಯಾನ ವಿಸ್ತರಣೆಯಾಗಬೇಕು. ಹಾಗೇ, ಕೇಂದ್ರದ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿ ರಾಜ್ಯಗಳ ಆರೋಗ್ಯ ಅಧಿಕಾರಿಗಳ ಜತೆ ಸಂಪರ್ಕದಲ್ಲಿರಬೇಕು. ಜಿಲ್ಲಾ ಮಟ್ಟದಲ್ಲಿ ಆರೋಗ್ಯ ವ್ಯವಸ್ಥೆ ಸದೃಢಗೊಳಿಸಲು ಶ್ರಮಿಸಬೇಕು ಎಂದು ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಕೊವಿಡ್ 19 ತಪಾಸಣೆ, ಲಸಿಕೆಗಳು ಮತ್ತು ಜಿನೋಮ್ ಸಿಕ್ವೆನ್ಸಿಂಗ್ಗಳಲ್ಲಿ ಹೆಚ್ಚೆಚ್ಚು ವೈಜ್ಞಾನಿಕ ಸಂಶೋಧನೆಯಾಗಬೇಕು ಎಂದು ಪ್ರಧಾನಿ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗಾಯಗೊಂಡ ಹಕ್ಕಿ ಬೇಗ ಗುಣಮುಖವಾಗುವಂತೆ ಗಾಯತ್ರಿ ಮಂತ್ರ ಹೇಳಿ ಪ್ರಾರ್ಥಿಸಿದ ಶಿಲ್ಪಾ ಪುತ್ರಿ; ಮುದ್ದಾದ ವಿಡಿಯೋ ಇಲ್ಲಿದೆ
Published On - 11:29 am, Thu, 13 January 22