ಗಾಯಗೊಂಡ ಹಕ್ಕಿ ಬೇಗ ಗುಣಮುಖವಾಗುವಂತೆ ಗಾಯತ್ರಿ ಮಂತ್ರ ಹೇಳಿ ಪ್ರಾರ್ಥಿಸಿದ ಶಿಲ್ಪಾ ಪುತ್ರಿ; ವಿಡಿಯೋ ಇಲ್ಲಿದೆ

Shilpa Shetty | Samisha: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಪುತ್ರಿ ಸಮಿಶಾಳ ಮುದ್ದಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರ ಮೂಲಕ ಪ್ರಾರ್ಥನೆಯ ಮಹತ್ವವನ್ನು ವಿವರಿಸಿದ್ದಾರೆ ನಟಿ.

ಗಾಯಗೊಂಡ ಹಕ್ಕಿ ಬೇಗ ಗುಣಮುಖವಾಗುವಂತೆ ಗಾಯತ್ರಿ ಮಂತ್ರ ಹೇಳಿ ಪ್ರಾರ್ಥಿಸಿದ ಶಿಲ್ಪಾ ಪುತ್ರಿ; ವಿಡಿಯೋ ಇಲ್ಲಿದೆ
ಶಿಲ್ಪಾ ಶೆಟ್ಟಿ, ಸಮಿಶಾ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ತಮ್ಮ ಸಿನಿಮಾ, ಕಿರುತೆರೆ ಕೆಲಸಗಳ ನಡುವೆ ಕುಟುಂಬಕ್ಕಾಗಿ ಸಮಯವನ್ನು ಮೀಸಲಿಟ್ಟಿದ್ದಾರೆ. ಅವರ ಪುತ್ರಿ ಸಮಿಶಾ (Samisha) ಮುಂದಿನ ತಿಂಗಳು ಎರಡನೇ ವರ್ಷಕ್ಕೆ ಕಾಲಿಡಲಿದ್ದಾರೆ. ಇತ್ತೀಚೆಗೆ ನಟಿ ಸಮಿಶಾಳ ಮುದ್ದಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಮನಗೆದ್ದಿದೆ. ಶಿಲ್ಪಾ ಮನೆಯ ಗಾರ್ಡನ್​ನಲ್ಲಿ ಪಕ್ಷಿಯೊಂದು ಗಾಯಗೊಂಡು ಬಿದ್ದಿತ್ತು. ಅದು ಗುಣಮುಖವಾಗುವಂತೆ ಪ್ರಾರ್ಥಿಸಿದ ಸಮಿಶಾಳ ಮುಗ್ಧ ಮನಸ್ಸಿಗೆ ಎಲ್ಲರೂ ತಲೆದೂಗಿದ್ದಾರೆ. ಶಿಲ್ಪಾ ಈ ಘಟನೆಯ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಶಿಲ್ಪಾ ಹಾಗೂ ಸಮಿಶಾರ ಸಂಭಾಷಣೆ ದಾಖಲಾಗಿದೆ. ‘‘ಸಮಿಶಾ, ನೀನು ಆ ಪಕ್ಷಿ ಮತ್ತೆ ಹಾರುವಂತಾಗಲು (ಬೂ ಬೂ) ಪ್ರಾರ್ಥಿಸುತ್ತಿದ್ದೀಯಾ?’’ ಎಂದು ಶಿಲ್ಪಾ ಕೇಳಿದ್ದಾರೆ. ಆಗ ಪುಟಾಣಿ ಸಮಿಶಾ, ‘ಬರ್ಡೀ ಬೂ ಬೂ’ ಎಂದು ತನ್ನದೇ ಮಾತಿನಲ್ಲಿ ಉದ್ಗರಿಸಿದ್ದಾಳೆ. ಶಿಲ್ಪಾ ಮತ್ತೆ ತಮ್ಮ ಮಾತುಗಳನ್ನು ಉಚ್ಛರಿಸಿದಾಗ ಸಮಿಶಾ, ‘‘ಬರ್ಡಿ ಡೈ’’ ಎಂದಿದ್ದಾಳೆ. ಆಗ ಮಗಳನ್ನು ಕೂರಿಸಿಕೊಂಡು ಅರ್ಥ ಮಾಡಿಸಿದ ಶಿಲ್ಪಾ, ‘‘ಇಲ್ಲಾ ಪುಟ್ಟಿ, ಪಕ್ಷಿ ಈಗ ಸಾಯುವುದಿಲ್ಲ. ಅದು ಗುಣವಾಗಿ ಮತ್ತೆ ಹಾರುತ್ತದೆ. ಅದಕ್ಕಾಗಿ ನಾವು ಪ್ರಾರ್ಥಿಸೋಣವೇ?’’ ಎಂದು ಕೇಳಿದ್ದಾರೆ.

ನಂತರ ಶಿಲ್ಪಾ ಕೈ ಮುಗಿದು ಪ್ರಾರ್ಥಿಸಲು ಅನುವಾಗಿದ್ದಾರೆ. ಅವರು ಮಂತ್ರ ಹೇಳಲು ಮುಂದಾದಾಗ ಸಮಿಶಾ ಹಿಂದೆ ಸರಿದಿದ್ದಾಳೆ. ಮಗಳ ನಡೆಯಿಂದ ಶಿಲ್ಪಾಗೆ ತುಸು ಆಶ್ಚರ್ಯವಾಗಿದೆ. ಆದರೆ ಸಮಿಶಾ ಹಿಂದೆ ಸರಿದಿದ್ದು, ಒಂದೆಡೆ ಕುಳಿತುಕೊಳ್ಳಲು ಎಂದು ನಂತರ ಅರ್ಥವಾಗಿದೆ. ನಂತರ ಸಮಿಶಾ ಒಂದೆಡೆ ಕುಳಿತು, ಕೈ ಮುಗಿದು ಗಾಯತ್ರಿ ಮಂತ್ರ ಹೇಳುತ್ತಾ ಪ್ರಾರ್ಥಿಸಿದ್ದಾಳೆ. ಅದಕ್ಕೆ ಶಿಲ್ಪಾ ಕೂಡ ಜತೆಯಾಗಿದ್ದಾರೆ. ಪ್ರಾರ್ಥನೆಯ ನಂತರ ಸಮಿಶಾಗೆ ಪಕ್ಷಿ ಚೇತರಿಸಿಕೊಳ್ಳಲಿದೆ ಎಂದು ಶಿಲ್ಪಾ ಭರವಸೆ ನೀಡಿದ್ದಾರೆ.

ವಿಡಿಯೋವನ್ನು ಹಂಚಿಕೊಂಡಿರುವ ಶಿಲ್ಪಾ, ನಂತರ ಏನಾಯಿತು ಎಂದು ಕ್ಯಾಪ್ಶನ್​ನಲ್ಲಿ ವಿವರಿಸಿದ್ದಾರೆ. ಪಕ್ಷಿಯನ್ನು ‘ಪೆಟಾ ಇಂಡಿಯಾ’ ರಕ್ಷಿಸಿ, ಚಿಕಿತ್ಸೆ ನೀಡಿದೆ ಎಂದಿರುವ ಶಿಲ್ಪಾ, ಪ್ರಾರ್ಥನೆಯ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘‘ಮಕ್ಕಳು ನಿಜವಾಗಿಯೂ ಮುಗ್ಧ ಮನಸ್ಸನ್ನು ಹೊಂದಿರುವವರು. ಬೇರೆಯವರಿಗಾಗಿ ಮಿಡಿಯುವ, ಪ್ರಾರ್ಥಿಸುವ ಮಕ್ಕಳ ಗುಣವನ್ನು ಎಲ್ಲರೂ ಅನುಸರಿಸಿದರೆ ಜಗತ್ತು ಎಷ್ಟು ಸುಂದರವಾದೀತು. ಇದನ್ನು ನಾವೆಲ್ಲಾ ಬೆಳೆದ ಮೇಲೂ ನೆನಪಿಟ್ಟುಕೊಳ್ಳಬೇಕು’’ ಎಂದು ಶಿಲ್ಪಾ ಬರೆದಿದ್ದಾರೆ.

ಶಿಲ್ಪಾ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ:

ಇದೀಗ ಶಿಲ್ಪಾ ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದ್ದು, ಸಮಿಶಾಳ ಗುಣ ಅಭಿಮಾನಿಗಳ ಮನಗೆದ್ದಿದೆ. ಅಲ್ಲದೇ ಬಹಳ ಮುದ್ದಾದ ವಿಡಿಯೋ ಇದು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:

74 ವರ್ಷಗಳ ಬಳಿಕ ಮತ್ತೆ ಒಂದಾದ ಸಹೋದರರು: ವಿಡಿಯೋ ವೈರಲ್​

ಕ್ಯಾಮೆರಾ ಮುಂದೆ ಟವೆಲ್​ ಕಿತ್ತೆಸೆಯಲು ಮುಂದಾದ ನಿವೇದಿತಾ ಗೌಡ;​ ಕಮೆಂಟ್​ ಮೂಲಕ ನೆಟ್ಟಿಗರ ಛಾಟಿ

Published On - 11:29 am, Thu, 13 January 22

Click on your DTH Provider to Add TV9 Kannada