PM Modi in Tamil Nadu: ಅರ್ಜುನ್ ಟ್ಯಾಂಕ್ ಸೇನೆಗೆ ಹಸ್ತಾಂತರ; ತಮಿಳುನಾಡು ರೈತರ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

| Updated By: ganapathi bhat

Updated on: Apr 06, 2022 | 7:59 PM

ಎರಡು ವರ್ಷಗಳ ಹಿಂದೆ, ಈ ದಿನ (ಫೆ.14) ನಡೆದ ಪುಲ್ವಾಮ ದಾಳಿಯ ಬಗ್ಗೆ ನರೇಂದ್ರ ಮೋದಿ ಪ್ರಸ್ತಾಪಿಸಿದರು. ಯಾವೊಬ್ಬ ಭಾರತೀಯನೂ ಈ ದಿನವನ್ನು ಮರೆಯಲು ಸಾಧ್ಯವಿಲ್ಲ ಎಂದು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

PM Modi in Tamil Nadu: ಅರ್ಜುನ್ ಟ್ಯಾಂಕ್ ಸೇನೆಗೆ ಹಸ್ತಾಂತರ; ತಮಿಳುನಾಡು ರೈತರ ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ
ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ
Follow us on

ಚೆನ್ನೈ: ಒಂದು ದಿನದ ತಮಿಳುನಾಡು ಹಾಗೂ ಕೇರಳ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಚೆನ್ನೈನಲ್ಲಿ ಭಾನುವಾರ (ಫೆ.14) ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಸ್ವದೇಶಿ ನಿರ್ಮಿತ ಅರ್ಜುನ್ ಯುದ್ಧ ಟ್ಯಾಂಕರ್​ ಅನ್ನು (Arjun Main Battle Tank MK-1A) ಸೇನೆಗೆ ಹಸ್ತಾಂತರ ಮಾಡಿದರು. ತಮಿಳುನಾಡು ರೈತರ ಕರ್ತವ್ಯಪರತೆಯನ್ನು ಶ್ಲಾಘಿಸಿದರು. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಅವರ ಉಭಯ ರಾಜ್ಯಗಳ ಭೇಟಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.

ಚೆನ್ನೈನಲ್ಲಿ ವನ್ನಾರ್‌ಪೇಟೆ-ವಿಮ್ಕೋನಗರ ಮಾರ್ಗದ ಮೆಟ್ರೋ ರೈಲಿಗೆ ಪ್ರಧಾನಮಂತ್ರಿ ಮೋದಿ ಚಾಲನೆ ನೀಡಿದರು. ₹ 3,770 ಕೋಟಿ ಖರ್ಚಿನಲ್ಲಿ ಸಿದ್ಧಗೊಂಡಿರುವ 9.5 ಕಿ.ಮೀ. ಉದ್ದದ ಮೆಟ್ರೋ ಮೊದಲನೇ ಹಂತದ ವಿಸ್ತೃತ ಮಾರ್ಗವನ್ನು ಮೋದಿ ಉದ್ಘಾಟಿಸಿದರು. ಐಐಟಿ ಮದ್ರಾಸ್​ನ (IIT Madras) ಡಿಸ್ಕವರಿ ಕ್ಯಾಂಪಸ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು. ಚೆನ್ನೈ ಬಳಿಯ ತೈಯುರ್​ನಲ್ಲಿ ಡಿಸ್ಕವರಿ ಆವರಣ ನಿರ್ಮಾಣವಾಗಲಿದೆ.

ಇದಕ್ಕೂ ಮುನ್ನ DRDO ಅಭಿವೃದ್ಧಿಪಡಿಸಿರುವ ಸ್ವದೇಶಿ ಯುದ್ಧ ಟ್ಯಾಂಕರ್​ನ್ನು ಮೋದಿ, ಭೂಸೇನಾ ಮುಖ್ಯಸ್ಥ ಎಂ.ಎಂ.ನರವಾಣೆಗೆ ಹಸ್ತಾಂತರಿಸಿದರು. ಚೆನ್ನೈ-ಅತ್ತಿಪಟ್ಟು ನಡುವಿನ 22.1 ಕಿ.ಮೀ. ಉದ್ದದ, ₹ 293.40 ಕೋಟಿ ಮೊತ್ತದಲ್ಲಿ ನಿರ್ಮಾಣವಾದ ನಾಲ್ಕನೇ ರೈಲ್ವೇ ಲೈನ್​ಗೂ ಮೋದಿ ಚಾಲನೆ ನೀಡಿದರು. ಈ ಮಾರ್ಗವು ಚೆನ್ನೈ ಹಾಗೂ ತಿರುವಳ್ಳುರ್ ಜಿಲ್ಲೆಗಳನ್ನು ಸಂಪರ್ಕಿಸಲಿದೆ.

ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಜವಾಹರ್​ಲಾಲ್ ಮೈದಾನದಲ್ಲಿ ತಮಿಳುನಾಡು ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ದಾಖಲೆಯ ಮಟ್ಟದಲ್ಲಿ ಆಹಾರ ಧಾನ್ಯ ಉತ್ಪಾದನೆ ಮತ್ತು ಜಲ ಸಂಪನ್ಮೂಲವನ್ನು ಸದ್ಬಳಕೆ ಮಾಡಿರುವ ತಮಿಳುನಾಡಿನ ರೈತ ಸಮುದಾಯವನ್ನು ನಾನು ಅಭಿನಂದಿಸುತ್ತೇನೆ. ಜಲಸಂಪನ್ಮೂಲ ರಕ್ಷಣೆಗೆ ಏನೇನು ಸಾಧ್ಯವೋ ಅದೆಲ್ಲವನ್ನೂ ನಾವು ಮಾಡಬೇಕು. ಒಂದು ಹನಿ ನೀರು ಉಳಿತಾಯದಿಂದ, ಹೆಚ್ಚು ಬೆಳೆ ತೆಗೆಯಬಹುದು (Per drop, more crop) ಎಂಬ ಮಂತ್ರವನ್ನು ನೆನಪಿಡಬೇಕು ಎಂದು ತಿಳಿಸಿದರು.

ಚೆನ್ನೈ ಅದಮ್ಯ ಶಕ್ತಿ, ಉತ್ಸಾಹವನ್ನು ತುಂಬಿಕೊಂಡಿದೆ. ಇದು ಜ್ಞಾನ ಮತ್ತು ಸೃಜನಶೀಲತೆಯ ನಗರ. ಇಲ್ಲಿಂದ ನಾವು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸುತ್ತೇವೆ. ಈ ಯೋಜನೆಗಳು ಆವಿಷ್ಕಾರ ಮತ್ತು ಸ್ವದೇಶಿ ಅಭಿವೃದ್ಧಿಯ ಚಿಹ್ನೆಗಳು ಎಂದು ಮೋದಿ ಹೇಳಿದರು.

ಆಟೊಮೊಬೈಲ್ ಕ್ಷೇತ್ರದಲ್ಲಿ ಚೆನ್ನೈ ಈಗಾಗಲೇ ಬಹಳ ಅಭಿವೃದ್ಧಿ ಹೊಂದಿದೆ. ಆಟೊಮೊಬೈಲ್ ನಿರ್ಮಾಣ ಹಬ್ ಆಗಿ ಚೆನ್ನೈ ಗುರುತಿಸಿಕೊಂಡಿದೆ. ಈಗ ಟ್ಯಾಂಕ್ ನಿರ್ಮಾಣ ಹಬ್ ಆಗಿಯೂ ಚೆನ್ನೈ ಬೆಳೆಯುತ್ತಿದೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದರು.

ಎರಡು ವರ್ಷಗಳ ಹಿಂದೆ, ಈ ದಿನ (ಫೆ.14) ನಡೆದ ಪುಲ್ವಾಮ ದಾಳಿಯ ಬಗ್ಗೆಯೂ ಮೋದಿ ಪ್ರಸ್ತಾಪಿಸಿದರು. ಯಾವೊಬ್ಬ ಭಾರತೀಯನೂ ಈ ದಿನವನ್ನು ಮರೆಯಲು ಸಾಧ್ಯವಿಲ್ಲ. ನಮ್ಮ ದೇಶದ ರಕ್ಷಣಾ ವ್ಯವಸ್ಥೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಅವರ ಧೈರ್ಯ-ಸ್ಥೈರ್ಯ ನಮಗೆ ಸದಾ ಸ್ಪೂರ್ತಿ ನೀಡುತ್ತದೆ ಎಂದು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

ಸ್ವದೇಶಿ ಯುದ್ಧ ಟ್ಯಾಂಕರ್ ಹಸ್ತಾಂತರಿಸಿದ ಪ್ರಧಾನಿ ಮೋದಿ:

 

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸಿದ ಪ್ರಧಾನಿ

ನೆಹರು ಮೈದಾನದಲ್ಲಿ ಪ್ರಧಾನಿ ಮೋದಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಡಿ ಕೆ. ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಒ. ಪನೀರ್​ಸೆಲ್ವಂ ಗೌರವಿಸಿದರು. ಅಮ್ಮನ (ಮಾಜಿ ಮುಖ್ಯಮಂತ್ರಿ, ದಿವಂಗತ ಜೆ. ಜಯಲಲಿತಾ) ನೆನಪು ತಮಿಳುನಾಡಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಲು ಪ್ರಧಾನಿ ಮೋದಿ ಸಹಕಾರ ನೀಡಿದ್ದಾರೆ ಎಂದು ಪನೀರ್​ಸೆಲ್ವಂ ಹೇಳಿದರು.

ಇವನ್ನೂ ಓದಿ..

– Two Years of Pulwama Attack: ಫೆಬ್ರವರಿ14ರಂದು ಏನಾಗಿತ್ತು? ಉಗ್ರರ ದಾಳಿಗೆ ಭಾರತ ಹೇಗೆ ಪ್ರತ್ಯುತ್ತರ ನೀಡಿತು?

– ಪುಲ್ವಾಮಾ ದಾಳಿ ನೆನಪಿಸಿಕೊಂಡು ಕಂಬನಿ ಮಿಡಿದ ದೇಶ

Published On - 2:21 pm, Sun, 14 February 21