ದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು 6 ರಾಜ್ಯಗಳ ಮಂತ್ರಿಗಳ ಜತೆಗೆ ಸಭೆ ನಡೆಸಲಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ ಮತ್ತು ಕೇರಳ ಮುಖ್ಯಮಂತ್ರಿಗಳೊಂದಿಗೆ ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಕೊವಿಡ್19 ಪರಿಸ್ಥಿತಿಯ ಕುರಿತಾಗಿ ಇಂದು ಸಭೆ ನಡೆಯಲಿದೆ.
ದೇಶದ ಅನೇಕ ಭಾಗಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಗಿರಿಧಾಮಗಳಲ್ಲಿ ಜನಸಮೂಹವು ಮಾಸ್ಕ್ ಧರಿಸದೇ, ಕೊವಿಡ್ ನಿಯಂತ್ರಣ ಮಾನದಂಡಗಳನ್ನು ಉಲ್ಲಂಘಿಸುತ್ತಿದೆ. ಈ 6 ರಾಜ್ಯಗಳಲ್ಲಿನ ಹಲವು ಜಿಲ್ಲೆಗಳಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಈ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿಲ್ಲ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 41,806 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದೆ. ಒಟ್ಟು 3,09,78,880 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 4,11,989 ಸಾವು ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ 581 ಜನರು ಕೊವಿಡ್ಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈಗ 4,32,041 ಸಕ್ರಿಯ ಪ್ರಕರಣಗಳಿವೆ. ಒಟ್ಟು ಪ್ರಕರಣಗಳಲ್ಲಿ ಶೇ.1.39ರಷ್ಟಿದೆ.
ರೋಗನಿರೋಧಕ ಶಕ್ತಿ ಕ್ಷೀಣಿಸುತ್ತಿದೆ: ಡಾ. ರಣದೀಪ್ ಗುಲೇರಿಯಾ
ಜನರಲ್ಲಿ ಕೊವಿಡ್ ಕುರಿತಾದ ನಿರ್ಲಕ್ಷ್ಯ ಹೀಗೆ ಮುಂದುವರೆದಿದ್ದೇ ಆದರೆ 3ನೇ ಅಲೆ, ಈ ಹಿಂದೆ ಬಂದ ಎರಡನೇ ಅಲೆಯನ್ನೂ ಮೀರಿಸಿ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮುಖಗವಸು ಧರಿಸುವುದು ಹೀಗೆ ಕೊವಿಡ್ ನಿಯಂತ್ರಣ ಮಾನದಂಡಗಳನ್ನು ಪಾಲಿಸುವುದು ಜತೆಗೆ ಲಸಿಕೆಗಳನ್ನು ಪಡೆದುಕೊಳ್ಳುವುದರ ಮೂಲಕ ಕೊವಿಡ್ 3ನೇ ಅಲೆಯ ಹರಡುವಿಕೆಯನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.
ಕೊವಿಡ್19 ಹೊಸ ರೂಪಾಂತರಗಳು ಪ್ರಪಂಚದಾದ್ಯಂತ ಹರಡುವ ನಿರೀಕ್ಷೆಯಿದೆ. ಸಾಂಕ್ರಾಮಿಕ ರೋಗವನ್ನು ತಡೆಯುವುದು ಇನ್ನಷ್ಟು ಕಷ್ಟಕರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಜ್ಞರ ಸಮಿತಿ ಎಚ್ಚರಿಸಿದೆ. ಅಪಾಯಕಾರಿಯಾದ ವೈರಸ್ ಜಾಗತಿಕವಾಗಿ ಹರಡುವ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಬಹುದು ಎಂದು ತುರ್ತು ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ:
ಸೆಪ್ಟೆಂಬರ್ ಹೊತ್ತಿಗೆ ಮಕ್ಕಳಿಗೂ ಕೊರೊನಾ ಲಸಿಕೆ ಲಭ್ಯವಾಗಲಿದೆ: ಡಾ.ರಣದೀಪ್ ಗುಲೇರಿಯಾ
Published On - 9:40 am, Fri, 16 July 21