Gandhi Jayanti: ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ; ಬಾಪು ಆದರ್ಶಗಳನ್ನು ಸ್ಮರಿಸಿದ ರಾಷ್ಟ್ರಪತಿ
ಅಹಿಂಸೆಯನ್ನು ಪ್ರತಿಪಾದಿಸಿದ್ದ ಗಾಂಧಿಯವರ ಜನ್ಮದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ.
ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾನುವಾರ ಗಾಂಧಿ ಜಯಂತಿ ಪ್ರಯುಕ್ತ ರಾಜಘಾಟ್ನಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿ (Mahatma Gandhi) ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹಾತ್ಮಾ ಗಾಂಧಿ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. ಅಹಿಂಸೆಯನ್ನು ಪ್ರತಿಪಾದಿಸಿದ್ದ ಗಾಂಧಿಯವರ ಜನ್ಮದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ. 2007ರಲ್ಲಿ ವಿಶ್ವಸಂಸ್ಥೆಯ ಮಹಾಧಿವೇಶನವು ‘ಅಹಿಂಸಾ ದಿನ’ದ ನಿರ್ಣಯವನ್ನು ಅಂಗೀಕರಿಸಿತ್ತು.
ಗಾಂಧಿ ಜಯಂತಿ ಪ್ರಯುಕ್ತ ಟ್ವೀಟ್ ಮಾಡಿರುವ ಮೋದಿ, ‘ಗಾಂಧಿ ಜಯಂತಿಯಂದು ಮಹಾತ್ಮಾ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ಈ ಬಾರಿಯ ಗಾಂಧಿ ಜಯಂತಿ ಇನ್ನೂ ವಿಶೇಷವಾದುದು. ಏಕೆಂದರೆ ಭಾರತವು ಈ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ನಾವು ಬಾಪು ಅವರ ಆದರ್ಶಗಳಿಗೆ ಅನುಗುಣವಾಗಿ ಬದುಕಬೇಕಿದೆ’ ಎಂದು ಹೇಳಿದರು. ಮಹಾತ್ಮಾ ಗಾಂಧಿ ಅವರಿಗೆ ಗೌರವ ಸಲ್ಲಿಸಲು ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಖರೀದಿಸುವಂತೆ ಕರೆ ನೀಡಿದರು.
PM @narendramodi pays tribute to #LalBahadurShastri on his birth anniversary at Vijay Ghat#lalbahadurshastrijayanti pic.twitter.com/I4CQNr2daB
— DD News (@DDNewslive) October 2, 2022
ರಾಷ್ಟ್ರಪತಿ ದ್ರೌಪದಿ ಮುರ್ಮು ಸಹ ಗಾಂಧಿ ಅವರನ್ನು ಸ್ಮರಿಸಿದ್ದಾರೆ. ‘ಶಾಂತಿ, ಸಮಾನತೆ ಮತ್ತು ಕೋಮು ಸೌಹಾರ್ದತೆಯ ಮೌಲ್ಯಗಳಿಗೆ ತಮ್ಮನ್ನು ತಾವು ಮರುರೂಪಿಸಿಕೊಳ್ಳಬೇಕಾದ ಸಂದರ್ಭ ಇದು’ ಎಂದು ಮುರ್ಮು ಹೇಳಿದ್ದಾರೆ. ಈ ಕುರಿತು ಪತ್ರವೊಂದನ್ನು ಟ್ವೀಟ್ ಮಾಡಿರುವ ಅವರು, ‘ಮಹಾತ್ಮಾ ಗಾಂಧಿ ಅವರ 153ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ, ನಾನು ಎಲ್ಲಾ ನಾಗರಿಕರ ಪರವಾಗಿ ರಾಷ್ಟ್ರಪಿತನಿಗೆ ಗೌರವ ಸಲ್ಲಿಸುತ್ತೇನೆ. ಗಾಂಧಿ ಅವರ ಸ್ಫೂರ್ತಿದಾಯಕ ಜೀವನದ ಮೌಲ್ಯಗಳಾದ ಶಾಂತಿ, ಸಮಾನತೆ ಮತ್ತು ಕೋಮು ಸೌಹಾರ್ದತೆಯನ್ನು ನಾವು ಅಳವಡಿಸಿಕೊಳ್ಳೋಣ’ ಎಂದು ಹೇಳಿದರು.
ರಾಜಘಾಟ್ನಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
President #DroupadiMurmu pays homage to Mahatma Gandhi on the occasion of #MahatmaGandhiJayanti at Rajghat@rashtrapatibhvn pic.twitter.com/tzY7fsCPQk
— DD News (@DDNewslive) October 2, 2022
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನು ಸ್ಮರಿಸಿ ಟ್ವೀಟ್ ಮಾಡಿ, ಗಾಂಧಿ ಅವರ ಸಂದೇಶಗಳನ್ನು ಸ್ಮರಿಸಿದ್ದಾರೆ. ‘ಮಹಾತ್ಮಾ ಗಾಂಧಿ ಜನ್ಮದಿನದ ಪ್ರಯುಕ್ತ ವಿಶ್ವ ಅಹಿಂಸಾ ದಿನ ಆಚರಿಸಲಾಗುತ್ತಿದೆ. ಶಾಂತಿ, ಗೌರವ ಮತ್ತು ಘನತೆಯ ಬದುಕು ಎಲ್ಲರಿಗೂ ಸಿಗಬೇಕಿದೆ. ಇಂದು ಜಗತ್ತಿನ ಎದುರು ಇರುವ ಹಲವು ಸವಾಲುಗಳನ್ನು ಗಾಂಧಿ ಅವರ ಸಂದೇಶದ ಮೂಲಕ ಮಣಿಸಬಹುದಾಗಿದೆ’ ಎಂದು ಹೇಳಿದರು.
ಅಕ್ಟೋಬರ್ 2, 1869 ರಂದು ಗುಜರಾತಿನ ಪೋರ್ ಬಂದರ್ನಲ್ಲಿ ಜನಿಸಿದ ಮಹಾತ್ಮಾ ಗಾಂಧಿ ಬ್ರಿಟಿಷ್ ವಸಾಹತುಶಾಹಿ ಆಡಳಿತದ ವಿರುದ್ಧದ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು. ಸ್ವರಾಜ್ಯ ಮತ್ತು ಅಹಿಂಸೆಯಲ್ಲಿ ಅಚಲ ನಂಬಿಕೆ ಇರಿಸಿದ್ದರು. ಅದು ಅವರಿಗೆ ವಿಶ್ವದಾದ್ಯಂತ ಪ್ರಶಂಸೆ ತಂದುಕೊಟ್ಟಿತು.
Published On - 9:09 am, Sun, 2 October 22