Cabinet Expansion: ಶೀಘ್ರದಲ್ಲೇ ವಿಸ್ತರಣೆಯಾಗಲಿದೆ ಕೇಂದ್ರ ಸಚಿವ ಸಂಪುಟ; ಪ್ರಧಾನಿ ಮೋದಿ-ಅಮಿತ್ ಶಾ ಉನ್ನತ ಸಭೆ
ಬಿಜೆಪಿ ಮಿತ್ರ ಪಕ್ಷಗಳಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಮದಾಸ್ ಅಠಾವಳೆಯನ್ನು ಹೊರತುಪಡಿಸಿದರೆ ಇನ್ಯಾರಿಗೂ ಪಿಎಂ ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಇದೀಗ ಸಂಪುಟ ವಿಸ್ತರಣೆ ವೇಳೆ ಮಿತ್ರ ಪಕ್ಷಗಳಿಗೂ ಮಣೆ ಹಾಕಬಹುದು.
ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರದಲ್ಲಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂಗಾರು ಅಧಿವೇಶನಕ್ಕೂ ಮೊದಲು, ಅಂದರೆ ಈ ತಿಂಗಳ ಕೊನೆ ಅಥವಾ ಜುಲೈ ಮೊದಲ ವಾರದಲ್ಲಿ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸದ್ಯ ಪ್ರಧಾನಿ ಮೋದಿ ಸಂಪುಟದಲ್ಲಿ ಒಟ್ಟು 60 ಸಚಿವರಿದ್ದಾರೆ. ಒಟ್ಟು 79 ಸಚಿವರ ಅಗತ್ಯವಿದ್ದು, ಸದ್ಯದಲ್ಲೇ ವಿಸ್ತರಣೆಯಾಗಲಿದೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದಲೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ವಿವಿಧ ಸಚಿವರುಗಳ ಕಾರ್ಯವೈಖರಿಯ ಪರಿಶೀಲನೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಸಚಿವ ಸಂಪುಟ ವಿಸ್ತರಣೆ, ಪುನಃರಚನೆ ವೇಳೆ ಮಾತ್ರ ಇಂಥ ಪರಿಶೀಲನೆ ಕೆಲಸ ನಡೆಯುತ್ತದೆ ಎಂದು ವರದಿಯಾಗಿದೆ.
ಇನ್ನು ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್, ಬಿಹಾರ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ, ಸಂಸದ ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಅವರು ಸೇರ್ಪಡೆಯಾಗಲಿದ್ದಾರೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ. ಈ ಮಧ್ಯೆ ಸರಿಯಾಗಿ ಕಾರ್ಯ ನಿರ್ವಹಿಸದ ಸಚಿವರು ತಮ್ಮ ಸ್ಥಾನ ಕಳೆದುಕೊಳ್ಳಬಹುದಾದ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇನ್ನು ಬಿಜೆಪಿ ಮಿತ್ರ ಪಕ್ಷಗಳಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಮದಾಸ್ ಅಠಾವಳೆಯನ್ನು ಹೊರತುಪಡಿಸಿದರೆ ಇನ್ಯಾರಿಗೂ ಪಿಎಂ ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಇದೀಗ ಸಂಪುಟ ವಿಸ್ತರಣೆ ವೇಳೆ ಮಿತ್ರ ಪಕ್ಷಗಳಿಗೂ ಮಣೆ ಹಾಕಬಹುದು. ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು)ಸದಸ್ಯರಿಗೂ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗಿದೆ. ಪ್ರಸ್ತುತ ಹಲವು ಸಚಿವರು ಮೂರ್ನಾಲ್ಕು ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಸಂಪುಟ ವಿಸ್ತರಣೆಯ ಬಳಿಕ, ಯಾರಿಗೆ ಯಾವ ಇಲಾಖೆ ಸಿಗಲಿದೆ ಎಂಬ ಬಗ್ಗೆ ಕುತೂಹಲವಂತೂ ಇದ್ದೇ ಇದೆ.
ಇದನ್ನೂ ಓದಿ: ನಿಮ್ಮ ನಿಜವಾದ ಬಣ್ಣ ತೋರಿಸಿದ್ದೀರಿ; ದಿಗ್ವಿಜಯ್ ಸಿಂಗ್ಗೆ ತಿರುಗೇಟು ನೀಡಿದ ಪ್ರಹ್ಲಾದ್ ಜೋಶಿ
ಮಳೆಗಾಲದಲ್ಲಿ ಮನೆಯಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ; ಬಳ್ಳಾರಿ ಜನರಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ
PM Narendra modi May expand cabinet before mansoon session
Published On - 12:39 pm, Sat, 12 June 21