ಪಂಜಾಬ್​​ ಭದ್ರತಾ ಲೋಪದ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್​ಗೆ ವಿವರಿಸಿದ ಪ್ರಧಾನಿ ಮೋದಿ; ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿ

ಪಂಜಾಬ್​​ ಭದ್ರತಾ ಲೋಪದ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್​ಗೆ ವಿವರಿಸಿದ ಪ್ರಧಾನಿ ಮೋದಿ; ಕಳವಳ ವ್ಯಕ್ತಪಡಿಸಿದ ಉಪರಾಷ್ಟ್ರಪತಿ
ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿ

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಪ್ರಧಾನಿ ಮೋದಿಗೆ ಖುದ್ದಾಗಿ ಕರೆ ಮಾಡಿ ಘಟನೆ ಬಗ್ಗೆ ವಿಚಾರಿಸಿದ್ದಾರೆ. ಹಾಗೇ, ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

TV9kannada Web Team

| Edited By: Lakshmi Hegde

Jan 06, 2022 | 2:42 PM

ಜ.5ರಂದು ಪಂಜಾಬ್​​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರ ಭದ್ರತೆಯಲ್ಲಿ ಲೋಪ(PM security breach)ದ ಬಗ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ (Ram Nath Kovind) ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು(  )ಕಳವಳ ವ್ಯಕ್ತಪಡಿಸಿದ್ದಾರೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ಭವನದಲ್ಲಿ ರಾಮನಾಥ ಕೋವಿಂದ್​ರನ್ನು ಭೇಟಿಯಾಗಿ, ನಿನ್ನೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ಟ್ವೀಟ್ ಮಾಡಿರುವ ರಾಷ್ಟ್ರಪತಿ, ಪಂಜಾಬ್​ನಲ್ಲಿ ಪ್ರಧಾನಮಂತ್ರಿ ಭದ್ರತೆಯಲ್ಲಿ ಆದ ಲೋಪದ ಬಗ್ಗೆ ನೇರವಾಗಿ ದೇಶದ ಪಿಎಂ ನರೇಂದ್ರ ಮೋದಿಯವರ ಬಳಿಯೇ ಕೇಳಿ ಮಾಹಿತಿ ಪಡೆಯಲಾಯಿತು. ಈ ಲೋಪದ ಬಗ್ಗೆ ನಿಜಕ್ಕೂ ಕಳವಳ ಉಂಟಾಗಿದೆ ಎಂದು ಹೇಳಿದ್ದಾರೆ.  ಹಾಗೇ, ಪ್ರಧಾನಿ ನರೇಂದ್ರ ಮೋದಿ ಭೇಟಿಯ ಫೋಟೋವನ್ನೂ ಶೇರ್​ ಮಾಡಿಕೊಂಡಿದ್ದಾರೆ. ಇನ್ನು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು, ಪ್ರಧಾನಿ ಮೋದಿಗೆ ಖುದ್ದಾಗಿ ಕರೆ ಮಾಡಿ ಘಟನೆ ಬಗ್ಗೆ ವಿಚಾರಿಸಿದ್ದಾರೆ. ಭವಿಷ್ಯದಲ್ಲಿ ಇಂಥ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸುವ ಅಗತ್ಯವಿದೆ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ. 

ನಿನ್ನೆ ಪಂಜಾಬ್​ನ ಫಿರೋಜ್​ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ರ್ಯಾಲಿ ಹಮ್ಮಿಕೊಂಡಿದ್ದರು ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಭಟಿಂಡಾ ವಿಮಾನ ನಿಲ್ದಾಣದಲ್ಲಿ ಇಳಿದ ಪ್ರಧಾನಿ ಮೋದಿ ಹೆಲಿಕಾಪ್ಟರ್​ ಮೂಲಕ ಫಿರೋಜ್​ಪುರಕ್ಕೆ ಹೋಗಬೇಕಿತ್ತು. ಆದರೆ ಹವಾಮಾನ ಸರಿಯಿಲ್ಲದ ಕಾರಣ ರಸ್ತೆ ಮಾರ್ಗವಾಗಿ ಹೊರಟಿದ್ದರು. ಆದರೆ ಹುಸ್ಸೇನಿವಾಲಾ ಫ್ಲೈಓವರ್​ ಬಳಿ ರೈತರು ಪ್ರತಿಭಟನೆ ನಡೆಸುತ್ತ, ರಸ್ತೆ ಬ್ಲಾಕ್​ ಮಾಡಿದ್ದ ಕಾರಣ ಅವರು ಅಲ್ಲಿ 20 ನಿಮಿಷ ಕಾಯುವಂತಾಯ್ತು. ಕೊನೆಗೂ ವಾಪಸ್​ ದೆಹಲಿಗೆ ಬಂದರು. ಈ ಘಟನೆಯೀಗ ರಾಷ್ಟಾದ್ಯಂತ ಕಳವಳಕ್ಕೆ ಕಾರಣವಾಗಿದೆ. ಭಾರತದ ಇತಿಹಾಸದಲ್ಲಿ ಪ್ರಧಾನಿ ಭದ್ರತೆ ವಿಚಾರದಲ್ಲಿ ಇಷ್ಟುದೊಡ್ಡಮಟ್ಟದಲ್ಲಿ ಲೋಪ ಎಂದಿಗೂ ಆಗಿರಲಿಲ್ಲ ಎನ್ನಲಾಗುತ್ತಿದ್ದು, ಪಂಜಾಬ್​ ಕಾಂಗ್ರೆಸ್​ ಸರ್ಕಾರದ ವಿರುದ್ಧ ತೀವ್ರ ಸ್ವರೂಪದ ಟೀಕೆ ಕೇಳಿಬರುತ್ತಿದೆ.

ಇದನ್ನೂ ಓದಿ: ಪ್ರಧಾನಮಂತ್ರಿ ಭದ್ರತೆ ಲೋಪ; ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಿದ ಪಂಜಾಬ್​ ಸರ್ಕಾರ

Follow us on

Related Stories

Most Read Stories

Click on your DTH Provider to Add TV9 Kannada