ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದು, ಅನೇಕ ಜನ ಫಾಲೋವರ್ಸ್ಗಳನ್ನು ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಗಡಿ ತಂಟೆಯೂ ಸೇರಿದಂತೆ ಭಾರತದ ಜತೆ ಸದಾ ಹಲವಾರು ತಕರಾರು ತೆಗೆಯುವ ಚೀನಾ (China) ದೇಶದಲ್ಲಿಯೂ ಜನರು ಸಾಮಾಜಿಕ ಜಾಲತಾಣಗಳಲ್ಲಿ (Social Media) ಮೋದಿಗೆ ಉಘೇ ಉಘೆ ಎನ್ನುತ್ತಿದ್ದಾರೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ಅಮೆರಿಕ ಮೂಲದ ಅಂತರರಾಷ್ಟ್ರೀಯ ಮಟ್ಟದ ಆನ್ಲೈನ್ ಮಾಧ್ಯಮವೊಂದು ಇತ್ತೀಚೆಗೆ ಪ್ರಕಟಿಸಿರುವ ‘ಚೀನಾದಲ್ಲಿ ಭಾರತವನ್ನು ಹೇಗೆ ನೋಡಲಾಗುತ್ತಿದೆ’ ಎಂಬ ಶೀರ್ಷಿಕೆಯಡಿ ಪ್ರಕಟಿತ ವರದಿಯಲ್ಲಿ, ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ‘ಮೋದಿ ಲಾಕ್ಸಿಯನ್’ ಅಂದರೆ, ‘ಮೋದಿ ಅಮರ’ ಎಂದು ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಬಗ್ಗೆ ಉಲ್ಲೇಖಿಸಲಾಗಿದೆ.
ಚೀನಾದಲ್ಲಿ ‘ಲಾಕ್ಸಿಯನ್’ ಎಂಬ ಪದವನ್ನು ಕೆಲವು ವಿಶೇಷ ಸಾಮರ್ಥ್ಯ ಹೊಂದಿರುವ ಹಿರಿಯ ಹಾಗೂ ಅಮರರು ಎಂಬರ್ಥದಲ್ಲಿ ಬಳಸಲಾಗುತ್ತದೆ. ಮೋದಿ ಅವರು ವಿಶ್ವದ ಇತರ ನಾಯಕರಿಗಿಂತ ವಿಭಿನ್ನ ಹಾಗೂ ಅವರೆಲ್ಲರಿಗಿಂತಲೂ ಅದ್ಭುತ ವ್ಯಕ್ತಿತ್ವ ಹೊಂದಿದವರು ಎಂದು ಚೀನಾದ ನೆಟಿಜನ್‌ಗಳು ಭಾವಿಸುವುದು ಇದರಿಂದ ತಿಳಿದುಬಂದಿದೆ ಎಂದು ವರದಿ ಉಲ್ಲೇಖಿಸಿದೆ.
ಚೀನಾದ ನೆಟಿಜನ್‌ಗಳು ಮೋದಿ ಅವರ ಡ್ರೆಸ್ಸಿಂಗ್, ದೈಹಿಕ ನೋಟ, ಹಿಂದಿನ ನಾಯಕರಿಗಿಂತ ಅವರು ಕೈಗೊಂಡಿರುವ ನೀತಿಗಳನ್ನು ವಿಶೇಷವಾಗಿ ಪರಿಗಣಿಸಿದ್ದಾರೆ ಎಂದು ಚೀನಾದ ಸಾಮಾಜಿಕ ಜಾಲತಾಣ ‘ಸಿನಾ ವೈಬೋ’ ಕುರಿತ ವಿಶ್ಲೇಷಣಾತ್ಮಕ ವರದಿ ಪ್ರಕಟಿಸಿದ ಬೀಜಿಂಗ್ ಮೂಲದ ಪತ್ರಕರ್ತ ಉಲ್ಲೇಖಿಸಿದ್ದಾರೆ. ‘ಸಿನಾ ವೈಬೋ’ 25.2 ಕೋಟಿ ದೈನಂದಿನ ಸರಾಸರಿ ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ.
ಇದನ್ನೂ ಓದಿ: Live-in relationships: ಲೀವ್ ಇನ್ ರಿಲೇಷನ್‌ಶಿಪ್ ನೋಂದಣಿ ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ
ವರದಿಯ ಪ್ರಕಾರ, ವಿಶ್ವದ ಪ್ರಮುಖ ದೇಶಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಮೋದಿ ನೇತೃತ್ವದ ಭಾರತವು ಪ್ರಮುಖ ಪಾತ್ರವಹಿಸುತ್ತಿದೆ. ರಷ್ಯಾ ಇರಲಿ, ಅಮೆರಿಕ ಇರಲಿ ಅಥವಾ ದಕ್ಷಿಣದ ಇತರ ಯಾವುದೇ ದೇಶಗಳಿರಲಿ ಅವುಗಳೆಲ್ಲದರ ಜತೆ ಭಾರತ ಉತ್ತಮ ಬಾಂಧವ್ಯ ಹೊಂದಿದೆ ಎಂಬುದಾಗಿ ಚೀನಾದ ನೆಟಿಜನ್‌ಗಳು ಭಾವಿಸುತ್ತಾರೆ.
ಭಾರತ ಮತ್ತು ರಷ್ಯಾ ಉನ್ನತ ಮಟ್ಟದ ಬಾಂಧವ್ಯ ಹೊಂದಿದ್ದು, ಉಭಯ ದೇಶಗಳ ನಡುವೆ ಚೀನಾ ಮತ್ತು ರಷ್ಯಾ ನಡುವೆ ನಡೆದದ್ದಕ್ಕಿಂತಲೂ ಹೆಚ್ಚು ಶಸ್ತ್ರಾಸ್ತ್ರ ಒಪ್ಪಂದಗಳು ನಡೆದಿವೆ. ಜತೆಗೆ ಭಾರತವು ಪಾಶ್ಚಿಮಾತ್ಯರ ನೆಚ್ಚಿನ ದೇಶವಾಗಿದೆ ಎಂದೂ ಚೀನಾ ನೆಟಿಜನ್‌ಗಳು ಹೇಳಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ