PM Modi: ದೇಶದ ಅಭಿವೃದ್ಧಿಗೆ ಕಾಶಿ ಮಾರ್ಗಸೂಚಿಯಾಗಬಹುದು; ಮೇಯರ್‌ಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಅಭಿಮತ
All India Mayors conference: ವಾರಣಾಸಿಯಲ್ಲಿ ನಡೆದಿರುವ ಅಭಿವೃದ್ಧಿ ಸಂಪೂರ್ಣ ಭಾರತದ ಅಭಿವೃದ್ಧಿಗೆ ಮಾದರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದಿದ್ದಾರೆ.
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಶುಕ್ರವಾರ (ಡಿಸೆಂಬರ್ 17) ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ಅಖಿಲ ಭಾರತ ಮೇಯರ್‌ಗಳ ಸಮ್ಮೇಳನದಲ್ಲಿ (All India Mayors Conference) ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿ ಮಾತನಾಡಿದರು. ಹಲವಾರು ರಾಜ್ಯಗಳ ಒಟ್ಟು 120 ಮೇಯರ್‌ಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ವಾರಣಾಸಿಯಲ್ಲಿ (ಕಾಶಿ)ಯ ಅಭಿವೃದ್ಧಿ ಕಾರ್ಯಗಳು ಇಡೀ ದೇಶದ ಅಭಿವೃದ್ಧಿಗೆ ಮಾರ್ಗಸೂಚಿಯಾಗಬಹುದು ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ನುಡಿದರು. ‘‘ಭಾರತದ ಬಹುಪಾಲು ನಗರಗಳು ಸಾಂಪ್ರದಾಯಿಕ ನಗರಗಳಾಗಿವೆ. ಸ್ಥಳೀಯ ಕೌಶಲ್ಯಗಳು ಮತ್ತು ಉತ್ಪನ್ನಗಳು ಆ ನಗರದ ಗುರುತಾಗಬಹುದು ಎಂಬುದನ್ನು ಅಂತಹ ಸ್ಥಳಗಳಿಂದ ನಾವು ಕಲಿಯಬಹುದು’’ ಎಂದು ಮೋದಿ ಹೇಳಿದರು. ಪ್ರಧಾನಿಯವರ ಲೋಕಸಭಾ ಕ್ಷೇತ್ರವಾದ ವಾರಣಾಸಿಯು ಹಲವಾರು ಅಭಿವೃದ್ಧಿಗೆ ಸಾಕ್ಷಿಯಾಗಿದ್ದು, ಇತ್ತೀಚೆಗಷ್ಟೇ ಕಾಶಿ ವಿಶ್ವನಾಥ ಕಾರಿಡಾರ್ (Kashi Vishwanath Corridor) ಉದ್ಘಾಟನೆಯಾಗಿತ್ತು.
ಪಾರಂಪರಿಕ ಕಟ್ಟಡಗಳನ್ನು ಕೆಡಗುವ ಅಗತ್ಯವಿಲ್ಲ, ಅವನ್ನು ಪುನರ್ನಿರ್ಮಾಣ ಮಾಡಬೇಕು: ಪ್ರಧಾನಿ ಮೋದಿ ತಮ್ಮ ತಮ್ಮ ನಗರಗಳ ಉಜ್ವಲ ಭವಿಷ್ಯ ಮತ್ತು ಅಭಿವೃದ್ಧಿಯನ್ನು ಸಾಧಿಸಲು ಯಾವುದೇ ಅವಕಾಶಗಳನ್ನೂ ಬಿಡಬಾರದು ಎಂದು ಸಮಾವೇಶದಲ್ಲಿ ಹಾಜರಿದ್ದ ಎಲ್ಲಾ ಮೇಯರ್‌ಗಳಿಗೆ ಪ್ರಧಾನಿ ಮೋದಿ ಸೂಚಿಸಿದರು. ‘‘ನಾವು ವಿಕಾಸವನ್ನು ನಂಬಬೇಕು. ಭಾರತಕ್ಕೆ ಇಂದು ಕ್ರಾಂತಿಯ ಅಗತ್ಯವಿಲ್ಲ. ನಾವು ನಮ್ಮ ಪಾರಂಪರಿಕ ಕಟ್ಟಡಗಳನ್ನು ಕೆಡವಿ ಪುನರ್ನಿರ್ಮಾಣ ಮಾಡುವ ಅಗತ್ಯವಿಲ್ಲ, ಬದಲಿಗೆ ನಾವು ಅವುಗಳನ್ನು ಪುನರುಜ್ಜೀವನಗೊಳಿಸಬೇಕಾಗಿದೆ’’ ಎಂದು ಮೋದಿ ಹೇಳಿದರು.
ತಮ್ಮ ವ್ಯಾಪ್ತಿಯ ನಗರಗಳನ್ನು ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ತರಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ಮೇಯರ್‌ಗಳಿಗೆ ಪ್ರಧಾನಮಂತ್ರಿಯವರು ಒತ್ತಾಯಿಸಿದರು. ಸ್ವಚ್ಛತಾ ಕಾರ್ಯಕ್ರಮವನ್ನು ವಾರ್ಷಿಕ ಉಪಕ್ರಮದಂತೆ ಕಾಣಬೇಡಿ ಎಂದು ಮೇಯರ್ಗಳಿಒಗೆ ವಿನಂತಿಸಿದ ಮೋದಿ, ಪ್ರತಿ ತಿಂಗಳು ವಾರ್ಡ್ಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸುವಂತೆ ಸಲಹೆ ನೀಡಿದರು.
ಚೆನ್ನಾಗಿರುವ ವಾರ್ಡ್ಗಳಿಗೆ ಪ್ರಶಸ್ತಿ ನೀಡುವಂತೆ ಸಲಹೆ ನೀಡಿದ ಪ್ರಧಾನಿ: ಯಾವ ವಾರ್ಡ್ ಸುಂದರವಾಗಿದೆ ಎಂಬುದನ್ನು ಗಮನಿಸುವ ಸ್ಪರ್ಧೆ ನಡೆಸುವಂತೆ ಸಲಹೆ ನೀಡಿದ ಪ್ರಧಾನಿ, ಅದಕ್ಕೆ ಸ್ವಚ್ಛತೆ ಹಾಗೂ ನಗರ ಸೌಂದರ್ಯವನ್ನು ಮಾನದಂಡ ಮಾಡಬೇಕು ಎಂದು ಸೂಚಿಸಿದರು. ಸಂಕಿರಣವನ್ನು ‘ನೂತನ ನಗರ ಭಾರತ’ ಎಂಬ ಪರಿಕಲ್ಪನೆಯಲ್ಲಿ ಆಯೋಜಿಸಲಾಗಿತ್ತು.
‘‘ನಗರ ಪ್ರದೇಶಗಳಲ್ಲಿ ವಾಸಿಸಲು ಅನುಕೂಲವಾಗುವಂತೆ ಮಾಡಲು ಇದು ಪ್ರಧಾನ ಮಂತ್ರಿಯವರ ನಿರಂತರ ಪ್ರಯತ್ನವಾಗಿದೆ. ಶಿಥಿಲಗೊಂಡ ನಗರ ಮೂಲಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಅನೇಕ ಯೋಜನೆಗಳು ಮತ್ತು ಉಪಕ್ರಮಗಳನ್ನು ಪ್ರಾರಂಭಿಸಿದೆ’’ ಎಂದು ಸಮ್ಮೇಳನಕ್ಕೂ ಮುನ್ನ ಪ್ರಧಾನ ಮಂತ್ರಿಯವರ ಕಾರ್ಯಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.
ಇದನ್ನೂ ಓದಿ:
ಶಾಸಕ ರಮೇಶ್ ಕುಮಾರ್ ಹೇಳಿಕೆಯಿಂದ ಮುಜುಗರಕ್ಕೀಡಾದ ಕಾಂಗ್ರೆಸ್; ಪಕ್ಷದ ನಾಯಕರಿಂದಲೂ ಖಂಡನೆ
ಉತ್ತರ ಕೊರಿಯಾದಲ್ಲಿ 11 ದಿನ ರಾಷ್ಟ್ರೀಯ ಶೋಕಾಚರಣೆ; ನಗೋದು ಕೂಡ ಬ್ಯಾನ್! ಕಾರಣವೇನು ಗೊತ್ತಾ?