ಸ್ವರ್ಣಯುಗ ಆರಂಭ ಎಂದು ರಾಮಲಲ್ಲಾ ಕಿವಿಯಲ್ಲಿ ಹೇಳಿದಂತಿತ್ತು; ರಾಮಮಂದಿರ ಪ್ರಾಣಪ್ರತಿಷ್ಠೆ ಅನುಭವ ಹಂಚಿಕೊಂಡ ಪ್ರಧಾನಿ

|

Updated on: Apr 01, 2024 | 12:21 PM

PM Narendra Modi on his experience during Pran Pratishtha of Ram Mandir: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ ತಮಿಳಿನ ತಂತಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಆ ಅನುಭವ ಹಂಚಿಕೊಂಡಿದ್ದಾರೆ. ಪ್ರಾಣಪ್ರತಿಷ್ಠೆಗೆ ಮುನ್ನ ನಡೆದ 11 ದಿನಗಳ ಅನುಷ್ಠಾನದ ವೇಳೆ ತಾನು ಅಂತರ್ಮುಖಿಯಾಗುತ್ತಾ ಹೋಗಿದ್ದನ್ನು ಮೋದಿ ಹೇಳಿಕೊಂಡಿದ್ದಾರೆ. ಇದು ಸ್ವರ್ಣಯುಗದ ಆರಂಭ, ಭಾರತದ ದಿನಗಳು ಶುರುವಾಗಿವೆ ಎಂದು ರಾಮಲಲ್ಲಾ ತನ್ನ ಕಿವಿಯಲ್ಲಿ ಹೇಳಿದಂತೆ ಭಾಸವಾಯಿತು ಎಂದೂ ಪ್ರಧಾನಿಗಳು ಅನುಭವ ಹಂಚಿಕೊಂಡಿದ್ದಾರೆ.

ಸ್ವರ್ಣಯುಗ ಆರಂಭ ಎಂದು ರಾಮಲಲ್ಲಾ ಕಿವಿಯಲ್ಲಿ ಹೇಳಿದಂತಿತ್ತು; ರಾಮಮಂದಿರ ಪ್ರಾಣಪ್ರತಿಷ್ಠೆ ಅನುಭವ ಹಂಚಿಕೊಂಡ ಪ್ರಧಾನಿ
ತಂತಿ ಟಿವಿ ಸಂದರ್ಶನದಲ್ಲಿ ನರೇಂದ್ರ ಮೋದಿ
Follow us on

ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆ 2024ರ ಜನವರಿ 22, ಸೋಮವಾರದಂದು ನಡೆದಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಾಣಪ್ರತಿಷ್ಠೆ ವಿಧಿವಿಧಾನಗಳನ್ನು ನಡೆಸಿದರು. 11 ದಿನಗಳ ಕಾಲ ಅನುಷ್ಠಾನ ಬಳಿಕ ರಾಮಲಲ್ಲ, ಅಥವಾ ಬಾಲರಾಮನ ಪ್ರಾಣಪ್ರತಿಷ್ಠೆ ಮಾಡಿದರು. ಐತಿಹಾಸಿಕ ಮತ್ತು ಭಕ್ತಿಯ ಆ ಘಳಿಗೆಯಲ್ಲಿ ಪ್ರಧಾನಿಗಳ ಮನಸ್ಸಿನಲ್ಲಿ ಯಾವ ಅನುಭವ ಇತ್ತು, ಯಾವೆಲ್ಲಾ ಆಲೋಚನೆಗಳು ಸುಳಿಯುತ್ತಿದ್ದವು ಎಂದು ಹಲವರಿಗೆ ಕುತೂಹಲ ಇರಬಹುದು. ತಮಿಳಿನ ತಂತಿ ಟಿವಿ ವಾಹಿನಿಗೆ ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಪ್ರಧಾನಿಗಳು ಈ ಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ಸಂದರ್ಭದ ಅನುಭವವನ್ನು ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಅದನ್ನು ಕನ್ನಡಕ್ಕೆ ಭಾಷಾಂತರಿಸಿ ಇಲ್ಲಿ ನೀಡಿದ್ದೇವೆ.

“ಅಯೋಧ್ಯೆಯ ಟ್ರಿಸ್ಟಿಗಳು ಬಂದು ನನಗೆ ಆಹ್ವಾನ ನೀಡಿದರು. ಪ್ರಧಾನಿಗಳಿಗೆ ಬಹಳಷ್ಟು ಆಮಂತ್ರಗಳು ಬರುತ್ತಲೇ ಇರುತ್ತವೆ. ಆದರೆ, ಇದು ವಿಶೇಷವಾಗಿತ್ತು. ಯಾವಾಗ ನನಗೆ ಆಮಂತ್ರಣ ಬಂದಿತೋ ಆಗಿನಿಂದಲೇ ನಾನು ಆದ್ಯಾತ್ಮಿಕವಾಗಿ ಕರಗಿಹೋಗತೊಡಗಿದೆ. ಆ ಅನುಭವ ಹೇಳಲು ಶಬ್ದಗಳಲ್ಲಿ ನನಗೆ ಸಾಧ್ಯವಿಲ್ಲ.

“ವಿಜ್ಞಾನ ಮತ್ತು ಆದ್ಯಾತ್ಮವನ್ನು ಪರಸ್ಪರ ವೈರಿ ಎಂದು ಭಾವಿಸುತ್ತಾರೆ. ಇವರಿಗೆ ನನ್ನ ಮಾತುಗಳು ವಿಡಂಬನೆಯಂತೆ ತೋರಬಹುದು. ನನ್ನ ವಿರುದ್ಧ ಅವರಿಗೆ ಅಸ್ತ್ರವೂ ಆಗಬಹುದು.

“ನಾನು ಅಂದು 11 ದಿನದ ಅನುಷ್ಠಾನಕ್ಕೆ ಸಜ್ಜಾಗಲು ನಿರ್ಧರಿಸಿದೆ. ದಕ್ಷಿಣ ಭಾರತದಲ್ಲಿ ರಾಮನಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಮಯ ಕಳೆಯಲು ನಿರ್ಧರಿಸಿದೆ. ಪ್ರಧಾನಿಯಾಗಿ ಕೆಲಸ, ಪಕ್ಷಕ್ಕೆ ಕೆಲಸ, ಉಳಿದ ಸಮಯದಲ್ಲಿ ಆದ್ಯಾತ್ಮಿಕವಾಗಿ ತೊಡಗಿಸಿಕೊಳ್ಳುತ್ತಿದ್ದೆ.

ಇದನ್ನೂ ಓದಿ: ಸುಪ್ರೀಂಕೋರ್ಟ್‌ನಿಂದಲೂ ಜಾಮೀನು ಸಿಗುತ್ತಿಲ್ಲ: ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ

ಅಂತರ್ಮುಖಿಯಾಗುತ್ತಾ ಹೋದೆ…

“ಆ 11 ದಿನಗಳ ಅನುಷ್ಠಾನದ ವೇಳೆ ನಾನು ಸಂಪೂರ್ಣವಾಗಿ ಅಂತರ್ಮುಖಿಯಾಗುತ್ತಾ ಹೋಗಿದ್ದೆ. ನಾನು ಅಯೋಧ್ಯೆಗೆ ಹೋದಾಗ, ಒಂದೊಂದು ಹೆಜ್ಜೆ ಇರಿಸುವಾಗಲೂ ನನ್ನ ತಲೆಯಲ್ಲಿ ಯೋಚನೆ ನಡೆಯುತ್ತಲೇ ಇತ್ತು. ನಾನು ಪ್ರಧಾನಿಯಾಗಿರುವುದರಿಂದ ಹೋಗುತ್ತಿದ್ದೇನಾ ಅಥವಾ ಭಾರತದ ನಾಗರಿಕನಾಗಿ ಹೋಗುತ್ತಿದ್ದೇನಾ ಎಂಬ ಪ್ರಶ್ನೆಯನ್ನು ನಾನೇ ಕೇಳಿಕೊಳ್ಳುತ್ತಿದ್ದೆ. 140 ಕೋಟಿ ಪ್ರಜೆಗಳ ಪೈಕಿ ನಾನೂ ಒಬ್ಬ ಎನ್ನುವ ಭಾವನೆ ನನ್ನದಾಗಿತ್ತು.

ಕರ್ನಾಟಕ ಬಿಜೆಪಿ ಮೋದಿ ಸಂದರ್ಶನದ ವಿಡಿಯೋ ಟ್ವೀಟ್ ಮಾಡಿರುವುದು…

“ಈ ದೇಶ ಮತ್ತು 500 ವರ್ಷದ ಸಂಘರ್ಷ, ಲಕ್ಷಾಂತರ ಜನರ ಬಲಿದಾನ, ಲಕ್ಷಾಂತರ ಜನರ ತಪಸ್ಸು, ಯಾತನೆ, ಆಸೆ ಆಕಾಂಕ್ಷೆ, ಭಕ್ತಿ… ಇಷ್ಟೆಲ್ಲಾ ದೊಡ್ಡ ಸಂಗತಿಗಳು ಇದರಲ್ಲಿದೆಯಲ್ಲಾ ಎಂದು ಒಂದೊಂದು ಹೆಜ್ಜೆ ಇಡುವಾಗಲೂ ನನ್ನ ಮನಸ್ಸಿಗೆ ಬರುತ್ತಿತ್ತು. ಈ ಭಾವನಾ ಸ್ಥಿತಿಯಲ್ಲಿ ನಾನು ಮಂದಿರ ಪ್ರವೇಶ ಮಾಡಿದೆ.

“ಅಯೋಧ್ಯೆ ರಾಮಮಂದಿರ ಸ್ಥಾಪನೆಯಾಗುವ 140 ಕೋಟಿ ಜನರ ಆಸೆ ಪೂರ್ಣವಾಗಿದೆ, ಇದು ಟರ್ನಿಂಗ್ ಪಾಯಿಂಟ್ ಇತ್ಯಾದಿ ಇತ್ಯಾದಿ ಅನಿಸುತ್ತಿತ್ತು.

ಇದನ್ನೂ ಓದಿ: ಶ್ರೀಲಂಕಾಗೆ ಭಾರತ ಕಚ್ಚತೀವು ಬಿಟ್ಟುಕೊಟ್ಟಿದ್ದು ಯಾಕೆ? ಅಂದು ನೆಹರೂ, ಇಂದಿರಾ, ಕರುಣಾನಿಧಿ ನಿಲುವು ಏನಿತ್ತು? ಇಲ್ಲಿದೆ ಡೀಟೇಲ್ಸ್

ರಾಮಲಲ್ಲ ಕಣ್ಣುಗಳಿಗೆ ಸಿಕ್ಕಿಹೋಗಿದ್ದೆ…

“ಬಾಲರಾಮನ ಮುಂದೆ ಹೋಗಿ ನಿಂತಾಗ ಮೊದಲು ನನ್ನ ದೃಷ್ಟಿ ಆತನ ಪಾದದ ಮೇಲೆ ಹೋಯಿತು. ಬಳಿಕ ಬಾಲರಾಮನ ಕಣ್ಣಿನತ್ತ ನನ್ನ ದೃಷ್ಟಿ ನೆಟ್ಟಿತು. ಅಲ್ಲೇ ನಾನು ಸ್ತಂಬೀಭೂತನಾದೆ. ಅಲ್ಲಿದ್ದ ಪಂಡಿತರ ಮಾತುಗಳು ನನ್ನ ಗಮನಕ್ಕೆ ಬರುತ್ತಿರಲಿಲ್ಲ. ನನ್ನ ಚಿತ್ತ ಸಂಪೂರ್ಣ ಆ ಬಾಲರಾಮನ ಕಣ್ಣುಗಳತ್ತಲೇ ನೆಟ್ಟಿತ್ತು.

ರಾಮಲಲ್ಲ ಕಿವಿಯಲ್ಲಿ ಉಸುರಿದಂತಾಯಿತು…

“ಸ್ವರ್ಣಯುಗ ಆರಂಭವಾಗಿದೆ ಎಂದು ರಾಮಲಲ್ಲಾ ನನ್ನ ಕಿವಿಯಲ್ಲಿ ಹೇಳುತ್ತಿರುವಂತೆ ಭಾಸವಾಗುತ್ತಿದೆ. ಭಾರತದ ದಿನ ಬಂದಿದೆ. ಭಾರತ ಮುಂದಡಿ ಇಡುತ್ತಿದೆ. 140 ಕೋಟಿ ಜನರ ಕನಸು ಆ ಕಣ್ಣುಗಳಲ್ಲಿ ವ್ಯಕ್ತವಾಗುತ್ತಿತ್ತು…. ಆ ಭಕ್ತಿ ನಿಜಕ್ಕೂ ವರ್ಣಾತೀತ ಅನುಭವ” ಎಂದು ನರೇಂದ್ರ ಮೋದಿ ತಮಿಳಿನ ತಂತಿ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Mon, 1 April 24