ಸಶಸ್ತ್ರಪಡೆಗಳಿಗೆ ಭಾರತದಲ್ಲೇ ತಯಾರಾದ ಹೆಲಿಕಾಪ್ಟರ್​, ಡ್ರೋಣ್​ಗಳ ಹಸ್ತಾಂತರ: ಝಾನ್ಸಿಯಲ್ಲಿ ರಾಷ್ಟ್ರ ರಕ್ಷಾ ಸಮರ್ಪಣ ಪರ್ವ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 17, 2021 | 9:21 PM

ಭಾರತೀಯ ಸಶಸ್ತ್ರಪಡೆಗಳಲ್ಲಿ ದೇಶೀನಿರ್ಮಿತ ಯುದ್ಧೋಪಕರಣಗಳ ಬಳಕೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ

ಸಶಸ್ತ್ರಪಡೆಗಳಿಗೆ ಭಾರತದಲ್ಲೇ ತಯಾರಾದ ಹೆಲಿಕಾಪ್ಟರ್​, ಡ್ರೋಣ್​ಗಳ ಹಸ್ತಾಂತರ: ಝಾನ್ಸಿಯಲ್ಲಿ ರಾಷ್ಟ್ರ ರಕ್ಷಾ ಸಮರ್ಪಣ ಪರ್ವ
ಎಚ್​ಎಎಲ್ ಅಭಿವೃದ್ಧಿಪಡಿಸಿರುವ ಹಗುರ ಹೆಲಿಕಾಪ್ಟರ್
Follow us on

ದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿರುವ ಆಜಾದಿ ಕಾ ಅಮೃತ್​ ಮಹೋತ್ಸವ್ ಅಭಿಯಾನದ ಅಂಗವಾಗಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಬುಧವಾರ (ನ.17) ಮೂರು ದಿನಗಳ ರಾಷ್ಟ್ರ ರಕ್ಷಾ ಸಮರ್ಪಣ ಪರ್ವ ಕಾರ್ಯಕ್ರಮ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಳ್ಳಲಿರುವ ಪ್ರಧಾನಿ ನರೇಂದ್ರಮೋದಿ ಭಾರತದಲ್ಲೇ ತಯಾರಾಗಿರುವ ಯುದ್ಧ ಹೆಲಿಕಾಪ್ಟರ್, ಡ್ರೋಣ್ ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ ಯುದ್ಧೋಪಕರಣಗಳನ್ನು ಸಶಸ್ತ್ರಪಡೆಗಳಿಗೆ ಹಸ್ತಾಂತರಿಸಲಿದ್ದಾರೆ.

ಸರ್ಕಾರದ ಹೇಳಿಕೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂಸ್ತಾನ್ ಏರೊನಾಟಿಕ್ಸ್​ ಲಿಮಿಟೆಡ್ (ಎಚ್​ಎಎಲ್) ಅಭಿವೃದ್ಧಿಪಡಿಸಿರುವ ಯುದ್ಧ ಹೆಲಿಕಾಪ್ಟರ್​ಗಳನ್ನು ವಾಯುಪಡೆ ಮುಖ್ಯಸ್ಥರಿಗೆ ಹಸ್ತಾಂತರಿಸಲಿದ್ದಾರೆ. ಭಾರತದ ನವೋದ್ಯಮ ಅಭಿವೃದ್ಧಿಪಡಿಸಿರುವ ಡ್ರೋಣ್ ಮತ್ತು ಮಾನವ ರಹಿತ ವೈಮಾನಿಕ ಉಪಕರಣಗಳನ್ನು ಸೇನಾ ಮುಖ್ಯಸ್ಥರಿಗೆ ಹಸ್ತಾಂತರಿಸಲಿದ್ದಾರೆ. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಎಲೆಕ್ಟ್ರಾನಿಕ್ ಯುದ್ಧೋಪಕರಣಗಳನ್ನು ನೌಕಾಪಡೆ ಮುಖ್ಯಸ್ಥರಿಗೆ ಹಸ್ತಾಂತರಿಸಲಿದ್ದಾರೆ.

ಭಾರತೀಯ ಸಶಸ್ತ್ರಪಡೆಗಳಲ್ಲಿ ದೇಶೀನಿರ್ಮಿತ ಯುದ್ಧೋಪಕರಣಗಳ ಬಳಕೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಸಶಸ್ತ್ರಪಡೆಗಳ ಮುಖ್ಯಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ ಹಸ್ತಾಂತರಿಸುತ್ತಿರುವ ಯುದ್ಧೋಪಕರಣಗಳೂ ಸಹ ದೇಶೀನಿರ್ಮಿತವಾಗಿರುವುದು ವಿಶೇಷ. ಆತ್ಮನಿರ್ಭರ್ ಭಾರತ್ ಆಶಯಕ್ಕೆ ಈ ಕ್ರಮಗಳಿಂದ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ ಎಂದು ಪ್ರಧಾನಿ ಕಚೇರಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ತಿಳಿಸಿದೆ. ಇದೇ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು, ₹ 400 ಅಂದಾಜುವೆಚ್ಚದ ಉತ್ತರ ಪ್ರದೇಶ ರಕ್ಷಣಾ ಉದ್ಯಮಗಳ ಕಾರಿಡಾರ್​ಗೂ ಚಾಲನೆ ನೀಡಲಿದ್ದಾರೆ. ಇಲ್ಲಿ ಟ್ಯಾಂಕ್ ನಿರೋಧಕ ನಿರ್ದೇಶಿತ ಕ್ಷಿಪಣಿಗಳಿಗೆ ಪ್ರೊಪಲ್ಷನ್ ತಯಾರಿಸಲು ಉದ್ದೇಶಿಸಲಾಗಿದೆ.

ಇದೇ ವೇಳೆ ನ್ಯಾಷನಲ್ ಕೆಡೆಟ್ ಕಾರ್ಪ್ಸ್​ನ​ (ಎನ್​ಸಿಸಿ) ಹಳೆ ವಿದ್ಯಾರ್ಥಿಗಳ ಸಂಘಕ್ಕೂ ಮೋದಿ ಚಾಲನೆ ನೀಡಲಿದ್ದಾರೆ. ಎನ್​ಸಿಸಿಯ ಹಳೆಯ ವಿದ್ಯಾರ್ಥಿಯಾಗಿ ಈ ಸಂಘದ ಮೊದಲ ಸದಸ್ಯರಾಗಿ ತಮ್ಮ ಹೆಸರನ್ನೇ ಮೋದಿ ನೋಂದಾಯಿಸಲಿದ್ದಾರೆ. ಎನ್​ಸಿಸಿಯ ಮೂರೂ ವಿಭಾಗಗಳ ಕೆಡೆಟ್​ಗಳಿಗೆ ಸಿಮ್ಯುಲೇಶನ್ ತಂತ್ರಜ್ಞಾನದ ಮೂಲಕ ತರಬೇತಿ ನೀಡುವ ಸೌಲಭ್ಯವನ್ನೂ ಮೋದಿ ಇದೇ ವೇಳೆ ಉದ್ಘಾಟಿಸಿದ್ದಾರೆ. ರಾಷ್ಟ್ರೀಯ ಯುದ್ಧ ಸ್ಮಾರಕದ ಎಲೆಕ್ಟ್ರಾನಿಕ್ ಕಿಯಾಸ್ಕ್​ಗಳನ್ನೂ ಮೋದಿ ಉದ್ಘಾಟಿಸಲಿದ್ದಾರೆ. ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಈ ಕಿಯಾಸ್ಕ್​​ಗಳು ಅವಕಾಶ ಕಲ್ಪಿಸಿಕೊಡುತ್ತವೆ.

ಇದನ್ನೂ ಓದಿ: ಚುನಾವಣೆ ಹೊಸಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಸಾಲುಸಾಲು ಯೋಜನೆಗಳನ್ನು ಲೋಕಾರ್ಪಣೆ ಮಾಡಲು ಬಿರುಸಿನ ಸಿದ್ಧತೆ
ಇದನ್ನೂ ಓದಿ: ವಾರಣಾಸಿಗೆ ಕರ್ನಾಟಕ ರೇಷ್ಮೆ ಮಾರುಕಟ್ಟೆ ವ್ಯಾಪ್ತಿ ವಿಸ್ತರಣೆ; ಉತ್ತರ ಪ್ರದೇಶ ಸರ್ಕಾರದ ಜತೆ ಕರ್ನಾಟಕ ಸರ್ಕಾರ ಮಾತುಕತೆ