ಭೂಪಾಲ್: ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯದ ನೂತನ ಮೊಗಸಾಲೆಯನ್ನು (ಕಾರಿಡಾರ್) (Ujjain Mahakal Corridor) ಅನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅ 11ರಂದು ಉದ್ಘಾಟಿಸಲಿದ್ದಾರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಉಜ್ಜಯಿನಿಗೆ ಭೇಟಿ ನೀಡಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಉಜ್ಜಯಿನಿ ಮಹಾಕಾಲ್ ಕಾರಿಡಾರ್ನ ಮಹತ್ವಾಕಾಂಕ್ಷೆ ಯೋಜನೆಯ ಮೊದಲ ಹಂತವು ಶೀಘ್ರ ಪೂರ್ಣಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಉಜ್ಜಯಿನಿಗೆ ಭೇಟಿ ನೀಡಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿದ ನಂತರ ಅ.11ರಂದು ಮೊಗಸಾಲೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ’ ಎಂದು ತಿಳಿಸಿದರು.
ಉಜ್ಜಯಿನಿ ಮಹಾಕಾಲ್ ಕಾರಿಡಾರ್ ಯೋಜನೆಯನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ. ದೇವಾಲಯದ ಸಂಕೀರ್ಣವನ್ನು 2023ರ ಆಗಸ್ಟ್ ವೇಳೆಗೆ 2.82 ಹೆಕ್ಟೇರ್ನಿಂದ 20.23 ಹೆಕ್ಟೇರ್ಗೆ, ಅಂದರೆ ಸುಮಾರು 8 ಪಟ್ಟು ವಿಸ್ತರಿಸಲಾಗುವುದು. ಮೊದಲ ಹಂತದಲ್ಲಿ 900 ಮೀಟರ್ ಉದ್ದದ ಕಾರಿಡಾರ್, ಥೀಮ್ ಪಾರ್ಕ್, ಹೆರಿಟೇಜ್ ಮಾಲ್, ಇ-ಟ್ರಾನ್ಸ್ಪೋರ್ಟ್ ಸೌಕರ್ಯಗಳನ್ನು ರೂಪಿಸಲಾಗಿದೆ.
ಎರಡನೇ ಹಂತದಲ್ಲಿ, ಮಹಾರಾಜವಾಡಾ ಶಾಲಾ ಭವನವನ್ನು ಪಾರಂಪರಿಕ ಧರ್ಮಶಾಲೆಯಾಗಿ ಪರಿವರ್ತಿಸಲು ಸರ್ಕಾರ ಯೋಜಿಸಿದೆ. ಜೊತೆಗೆ ರುದ್ರ ಸಾಗರ ಮತ್ತು ಶಿಪ್ರಾ ನದಿಯನ್ನು ಜೋಡಿಸುವುದು, ಮುಂಭಾಗದ ಸರೋವರ ಪ್ರದೇಶದ ಸೌಂದರ್ಯ ವರ್ಧನೆ, 350 ಕಾರುಗಳನ್ನು ನಿಲ್ಲಿಸಲು ಸ್ಥಳಾವಕಾಶ, ಬಹು ಹಂತದ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ರೈಲ್ವೆ ಅಂಡರ್ಪಾಸ್ ಮತ್ತು ರುದ್ರ ಸಾಗರದ ಮೇಲೆ 210 ಮೀಟರ್ ತೂಗುಸೇತುವೆಯನ್ನು ಅಭಿವೃದ್ಧಿಪಡಿಸುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ಡೈನಾಮಿಕ್ ಲೈಟ್ ಶೋ ವ್ಯವಸ್ಥೆ ಮಾಡಲೂ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ರಾಮ್ ಘಾಟ್ ಬಳಿ ಸ್ಥಳ ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರದ ಪ್ರಕಾರ, 2028ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮಧ್ಯಪ್ರದೇಶದ ಬಿಜೆಪಿ ಸರ್ಕಾರವು ಕಳೆದ ಜನವರಿಯಲ್ಲಿ ಕಾರಿಡಾರ್ ಅಭಿವೃದ್ಧಿಗಾಗಿ ₹ 500 ಕೋಟಿ ಆರಂಭಿಕ ನಿಧಿ ಘೋಷಿಸಿತ್ತು.
ತಾಂತ್ರಿಕವಾಗಿ ಅತ್ಯಂತ ಮುಂದುವರಿದ ಭಾರತದ ಧಾರ್ಮಿಕ ತಾಣವಾಗಿ ಉಜ್ಜಯಿನಿ ಮಹಾಕಾಲ್ ದೇವಾಲಯ ಕಾರಿಡಾರ್ ರೂಪಿಸಲು ಮಧ್ಯಪ್ರದೇಶ ಸರ್ಕಾರವು ಚಿಂತನೆ ನಡೆಸಿದೆ. ಉಜ್ಜಯಿನಿಯನ್ನು ‘ಸ್ಮಾರ್ಟ್ ಸಿಟಿ’ಯಾಗಿ ಪರಿವರ್ತಿಸುವ ಮಧ್ಯಪ್ರದೇಶ ಸರ್ಕಾರದ ಮಹತ್ವಾಕಾಂಕ್ಷೆ ಪ್ರಯತ್ನದ ಭಾಗವಾಗಿ ಸ್ಮಾರಕ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಡಿಸೆಂಬರ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಕ್ಷೇತ್ರ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಎಂಬ ತಮ್ಮ ಕನಸಿನ ಯೋಜನೆಯನ್ನು ಉದ್ಘಾಟಿಸಿದ್ದರು. ದಶಾಶ್ವಮೇಧ ಘಾಟ್ ಬಳಿ ಇರುವ ಕಾರಿಡಾರ್ ಸ್ವತಃ ಪ್ರಧಾನ ಮಂತ್ರಿಯವರ ಪರಿಕಲ್ಪನೆಯಾಗಿದೆ. ದೇಶದ ಹಲವು ಪಾರಂಪರಿಕ ತಾಣಗಳನ್ನು ವಿಶೇಷ ಮೊಗಸಾಲೆಗಳನ್ನು (ಕಾರಿಡಾರ್) ರೂಪಿಸುವ ಮೂಲಕ ಸಂರಕ್ಷಿಸಲು ಸರ್ಕಾರಗಳು ಕ್ರಮವಹಿಸುತ್ತಿವೆ.
Published On - 8:46 am, Tue, 20 September 22