ರಾಜಕೀಯ ಪಕ್ಷಗಳ ಬೇಕಾಬಿಟ್ಟಿ ದೇಣಿಗೆ ಸಂಗ್ರಹಕ್ಕೆ ಕಡಿವಾಣ ಹಾಕಲು ಮುಂದಾದ ಚುನಾವಣಾ ಆಯೋಗ: 2 ಸಾವಿರಕ್ಕಿಂತ ಹೆಚ್ಚು ಹಣಕೊಟ್ಟವರ ವಿವರ ಪರಿಶೀಲನೆ

ಹಣ ಸ್ವೀಕರಿಸಿದ ಮಾಹಿತಿಯ ಜೊತೆಗೆ ಪಕ್ಷದ ಯಾವ ಘಟಕವು ಈ ಮೊತ್ತವನ್ನು ಸ್ವೀಕರಿಸಿದೆ ಎಂಬುದನ್ನೂ ಬಹಿರಂಗಪಡಿಸಬೇಕು ಎಂದು ಆಯೋಗವು ಹೇಳಿದೆ.

ರಾಜಕೀಯ ಪಕ್ಷಗಳ ಬೇಕಾಬಿಟ್ಟಿ ದೇಣಿಗೆ ಸಂಗ್ರಹಕ್ಕೆ ಕಡಿವಾಣ ಹಾಕಲು ಮುಂದಾದ ಚುನಾವಣಾ ಆಯೋಗ: 2 ಸಾವಿರಕ್ಕಿಂತ ಹೆಚ್ಚು ಹಣಕೊಟ್ಟವರ ವಿವರ ಪರಿಶೀಲನೆ
ಚುನಾವಣಾ ಆಯೋಗ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 20, 2022 | 7:14 AM

ದೆಹಲಿ: ಯಾವುದೇ ರಾಜಕೀಯ ಪಕ್ಷವು ಪಡೆಯುವ ₹ 2,000ಕ್ಕಿಂತಲೂ ಹೆಚ್ಚಿನ ಮೊತ್ತದ ದೇಣಿಗೆಯನ್ನು ಅನಾಮಧೇಯವಾಗಿ ಉಳಿಸುವಂತಿಲ್ಲ. ದೇಣಿಗೆ ಕೊಟ್ಟವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಭಾರತೀಯ ಚುನಾವಣಾ ಆಯೋಗವು (Election Commission of Indian – EC) ಪ್ರಕಟಿಸಿರುವ ಕರಡು ತಿದ್ದುಪಡಿ ದಾಖಲೆಯು ಸಲಹೆ ಮಾಡುತ್ತದೆ. ಈವರೆಗೆ ದೇಣಿಗೆ ಬಹಿರಂಗಪಡಿಸಲು ₹ 20,000 ಮಿತಿಯಿತ್ತು. ಒಂದು ಪಕ್ಷವು ಸ್ವೀಕರಿಸಿದ ಒಟ್ಟು ದೇಣಿಗೆಯ ಮಿತಿಯನ್ನು ₹ 20 ಕೋಟಿ ಅಥವಾ ಶೇ 20 ರಷ್ಟು ಮೊತ್ತಕ್ಕೆ (ಯಾವುದು ಕಡಿಮೆಯೋ ಅದು) ನಗದು ದೇಣಿಗೆಯನ್ನು ಸೀಮಿತಗೊಳಿಸಲು ಚುನಾವಣಾ ಆಯೋಗವು ಚಿಂತನೆ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬರೆದಿದ್ದು, ‘ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹಹ ವ್ಯವಸ್ಥೆ ಶುದ್ಧೀಕರಿಸಲು’ ಪ್ರಜಾಪ್ರತಿನಿಧಿ ಕಾಯ್ದೆಗೆ (Representation of the People (RP) Act) ತಿದ್ದುಪಡಿ ತರುವ ಕುರಿತು ಪ್ರಸ್ತಾಪಿಸಿದ್ದಾರೆ.

‘ಮಾನ್ಯತೆ ಪಡೆಯದ ಪಕ್ಷಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಈ ಮೊದಲು ಚುನಾವಣಾ ಅಯೋಗವು ಮುಂದಾಗಿತ್ತು. ಇದೀಗ ಆಯೋಗವು ಮಾನ್ಯತೆ ಪಡೆದ ಪಕ್ಷಗಳ ಕಾರ್ಯವೈಖರಿಯನ್ನು ಸುಧಾರಿಸಲು ಮತ್ತು ಕಪ್ಪು ಹಣ ಹಾಗೂ ತೆರಿಗೆ ವಂಚನೆಯ ವಿರುದ್ಧ ಶಿಸ್ತುಕ್ರಮ ರೂಪಿಸಲು ಮುಂದಾಗಿದೆ’ ಎಂದು ಈ ಬೆಳವಣಿಗೆಯ ಬಗ್ಗೆ ತಿಳಿದಿರುವ ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

₹ 20,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ದೇಣಿಗೆಗಳ ವಿವರಗಳನ್ನು ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ತಿಳಿಸಬೇಕು ಎಂಬ ಷರತ್ತು ಈಗಾಗಲೇ ಚಾಲ್ತಿಯಲ್ಲಿದೆ. ಹಣ ಸ್ವೀಕರಿಸಿದ ಮಾಹಿತಿಯ ಜೊತೆಗೆ ಪಕ್ಷದ ಯಾವ ಘಟಕವು ಈ ಮೊತ್ತವನ್ನು ಸ್ವೀಕರಿಸಿದದೆ ಎಂಬುದನ್ನೂ ಬಹಿರಂಗಪಡಿಸಬೇಕು ಎಂದು ಆಯೋಗವು ಹೇಳಿತ್ತು.

ಚುನಾವಣಾ ಉದ್ದೇಶಕ್ಕಾಗಿ ಪ್ರತಿಯೊಬ್ಬ ಅಭ್ಯರ್ಥಿಯು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಬೇಕೆಂದು ಚುನಾವಣಾ ಆಯೋಗವು ಶಿಫಾರಸು ಮಾಡಿದೆ. ‘ಒಬ್ಬ ಅಭ್ಯರ್ಥಿ ಮೊದಲು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ನಂತರ ಸಂಸದನಾಗಿ ಸ್ಪರ್ಧಿಸಲು ನಿರ್ಧರಿಸಿದರೆ, ಎರಡು ಪ್ರತ್ಯೇಕ ಖಾತೆಗಳನ್ನು ತೆರೆಯಬೇಕಾಗುತ್ತದೆ. ಸ್ಪರ್ಧಿಸುವ ಪ್ರತಿ ಚುನಾವಣೆಗೆ, ಅಭ್ಯರ್ಥಿಯು ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆಯಬೇಕು. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಕಣ್ಣಿರಿಸಲು ಹಾಗೂ ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಆಯೋಗಕ್ಕೆ ಈ ಕ್ರಮವು ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯಕ್ಕೆ ಅಧಿಕಾರಿಗಳು ಬಂದಿದ್ದಾರೆ.

ಕೆಲವು ಪಕ್ಷಗಳು ಯಾವುದೇ ದೇಣಿಗೆ ಪಡೆದಿರುವುದನ್ನು ಆಯೋಗಕ್ಕೆ ತಿಳಿಸಿಲ್ಲ. ಆದರೆ ಅವರ ಲೆಕ್ಕಪರಿಶೋಧಕ ವರದಿಗಳು ದೊಡ್ಡ ಮೊತ್ತದ ಸ್ವೀಕೃತಿಯನ್ನು ತೋರಿಸುತ್ತವೆ. ₹ 20,000ರ ಮಿತಿಗಿಂತ ಕಡಿಮೆ ನಗದು ರೂಪದಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆದಿರುವುದನ್ನು ಇದು ಎತ್ತಿತೋರಿಸುತ್ತದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚಿನಲ್ಲಿ ಪಾರದರ್ಶಕತೆಯನ್ನು ತರಲು ಹಾಗೂ ಸಟ್ಟಾ ವಹಿವಾಟು ತಡೆಯಲು ಆಯೋಗವು ಎಲ್ಲ ಬಗೆಯ ₹ 2,000 ಕ್ಕಿಂತ ಹೆಚ್ಚಿನ ಸ್ವೀಕೃತಿಗಳನ್ನು ಬಹಿರಂಗಪಡಿಸಬೇಕೆಂದು ಸೂಚಿಸಿದೆ.

ಆಯೋಗದ ಈ ಚಿಂತನೆ ಕಾರ್ಯರೂಪಕ್ಕೆ ಬರಬೇಕಾದರೆ ‘ಚುನಾವಣಾ ನೀತಿ ಸಂಹಿತೆ, 1961ರ ನಿಯಮ 89’ರಲ್ಲಿ ಅಗತ್ಯ ತಿದ್ದುಪಡಿ ಮಾಡಬೇಕಾಗುತ್ತದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಗೆ ಅಗತ್ಯ ತಿದ್ದುಪಡಿ ತರುವ ಮೂಲಕ ರಾಜಕೀಯ ಪಕ್ಷಗಳಿಗೆ ವಿದೇಶಿ ದೇಣಿಗೆ ಸಿಗದಂತೆ ತಡೆಯಲು ಆಯೋಗವು ಮುಂದಾಗಿದೆ. ಹಾಲಿ ಇರುವ ನಿಯಮಗಳ ಅಡಿಯಲ್ಲಿ ದೇಶೀಯ ಅಥವಾ ವಿದೇಶಿ ದೇಣಿಗೆಯನ್ನು ಪ್ರತ್ಯೇಕಿಸುವ ನಿಯಮಗಳು ಜಾರಿಯಲ್ಲಿ ಇಲ್ಲ.

ಅಸ್ತಿತ್ವದಲ್ಲಿ ಇಲ್ಲದ 284 ರಾಜಕೀಯ ಪಕ್ಷಗಳನ್ನು ಚುನಾವಣಾ ಆಯೋಗವು ‘ಅನೂರ್ಜಿತ’ ಎಂದು ಘೋಷಿಸಿದ ನಂತರ ಚುನಾವಣಾ ಆಯೋಗವು ದೇಣಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮುಂದಾಗಿದೆ. ಚುನಾವಣಾ ಆಯೋಗದ ನಿಯಮಗಳನ್ನು ಪಾಲಿಸಲು ವಿಫಲವಾದ ಒಟ್ಟು 537 ರಾಜಕೀಯ ಪಕ್ಷಗಳ ವಿರುದ್ಧ ಆಯೋಗವು ಕ್ರಮ ಜರುಗಿಸಿದೆ. ಆದರೆ ದೇಣಿಗೆ ಸಂಗ್ರಹದ ಬಗ್ಗೆ ಚುನಾವಣಾ ಆಯೋಗವು ಕಠಿಣ ಕ್ರಮ ಜರುಗಿಸಲು ಸಾಧ್ಯವಿದೆಯೇ ಎಂಬ ಬಗ್ಗೆಯೂ ಅನುಮಾನಗಳು ಕೇಳಿಬಂದಿವೆ. ‘ರಾಜಕೀಯ ಪಕ್ಷಗಳು ಸಂಗ್ರಹಿಸುವ ಹಣದ ಅತ್ಯಂತ ಕಡಿಮೆ ಪ್ರಮಾಣವನ್ನು ಘೋಷಿಸಿಕೊಳ್ಳುತ್ತವೆ. ಹಣ ಪಡೆಯುವವರು ಮತ್ತು ಕೊಡುವವರು ಘೋಷಿಸಿದರೆ ಮಾತ್ರ ಚುನಾವಣಾ ಆಯೋಗಕ್ಕೆ ವಿಷಯ ತಿಳಿಯುತ್ತದೆ’ ಎಂದು ಅಸೋಸಿಯೇಷನ್ ಡೆಮಾಕ್ರಟಿಕ್ ರಿಫಾರ್ಮ್ಸ್​ ಸಂಘಟನೆಯ ಜಗದೀಪ್ ಚೊಕ್ಕರ್ ಹೇಳಿದ್ದಾರೆ.

ಕಳೆದ ಸೆ.7ರಂದು ಆದಾಯ ತೆರಿಗೆ ಇಲಾಖೆಯು ನೋಂದಾಯಿತ ಆದರೆ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ (registered unrecognised political parties RUPPs) ವಿರುದ್ಧ ತಪಾಸಣೆಗೆ ಮುಂದಾಗಿತ್ತು. ಇದಕ್ಕಾಗಿ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆದಿತ್ತು. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಗುಜರಾತ್​ನಲ್ಲಿ ಇಂಥ ಪಕ್ಷಗಳು ₹ 4,000 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹಿಸಿವೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿತ್ತು.

Published On - 7:10 am, Tue, 20 September 22