ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು (ಏಪ್ರಿಲ್ 7) ಸಂಜೆ 7ಗಂಟೆಗೆ ವಿದ್ಯಾರ್ಥಿಗಳು, ಅವರ ಪಾಲಕರು ಮತ್ತು ಶಿಕ್ಷಕರೊಂದಿಗೆ ವರ್ಚ್ಯುವಲ್ ಆಗಿ ಪರೀಕ್ಷಾ ಪೆ ಚರ್ಚಾ ಸಂವಾದ ನಡೆಸಲಿದ್ದಾರೆ. ಸಾಮಾನ್ಯವಾಗಿ ಇಷ್ಟು ವರ್ಷ ಪರೀಕ್ಷಾ ಪೆ ಚರ್ಚಾ ಮುಖಾಮುಖಿ ಸಂವಾದ ಇರುತ್ತಿತ್ತು. ಆದರೆ ಈ ಬಾರಿ ಕೊರೊನಾ ಸಾಂಕ್ರಾಮಿಕ ರೋಗದ ಕಾರಣ ವರ್ಚ್ಯುವಲ್ ಆಗಿ ನಡೆಯಲಿದೆ. 14 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮೋದಿಯವರೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವರ್ಚ್ಯುವಲ್ ಸಂವಾದದಲ್ಲಿ ಯಾರೆಲ್ಲ ಗೆಲ್ಲುತ್ತಾರೋ, ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರೊಟ್ಟಿಗೆ ಮುಖತಃ ಚರ್ಚೆ ನಡೆಸುವ ಅವಕಾಶ ಇರಲಿದೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.
ಇನ್ನು ನರೇಂದ್ರ ಮೋದಿಯವರು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರೊಂದಿಗೆ ಪರೀಕ್ಷಾ ಪೆ ಚರ್ಚಾ ಸಂವಾದ ನಡೆಸುವುದನ್ನು ಎಲ್ಲರೂ ವೀಕ್ಷಿಸಬಹುದಾಗಿದೆ. ಬರೀ ಸಂವಾದದಲ್ಲಿ ಪಾಲ್ಗೊಳ್ಳುವವರಷ್ಟೇ ಅಲ್ಲ, ಭಾಗವಹಿಸದೆ ಇರುವವರೂ ನೋಡಬಹುದು. ದೂರದರ್ಶನ ಸೇರಿ, ಸ್ವಯಂಪ್ರಭಾ ಗ್ರೂಫ್ನ 32 ಚಾನೆಲ್ಗಳು ಈ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ಬಿತ್ತರಿಸಲಿವೆ. ಹಾಗೇ, ಪ್ರಧಾನಿ ನರೇಂದ್ರ ಮೋದಿ, ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ರ ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಾರಗೊಳ್ಳಲಿವೆ. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB)ದ ಯೂಟ್ಯೂಬ್, ಟ್ವಿಟರ್ಗಳಲ್ಲಿ ಕೂಡ ಪರೀಕ್ಷಾ ಪೆ ಚರ್ಚಾ ಸಂವಾದದ ಲೈವ್ ನೋಡಬಹುದು.
ಪರೀಕ್ಷಾ ಪೆ ಚರ್ಚಾಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಮಾತ್ರ ಪ್ರಧಾನಿ ಮೋದಿಯವರಿಗೆ ಪ್ರಶ್ನೆ ಕೇಳಬಹುದಾಗಿದ್ದು, ಉಳಿದವರು ಕಾರ್ಯಕ್ರಮವನ್ನು ವೀಕ್ಷಿಸಬಹುದಷ್ಟೇ. ಈ ಹಂತದಲ್ಲಿ ಗೆದ್ದವರು ವಿಶೇಷವಾಗಿ ವಿನ್ಯಾಸ ಮಾಡಲಾದ ಪ್ರಮಾಣಪತ್ರ, ಪರೀಕ್ಷಾ ಪೆ ಚರ್ಚಾ ಕಿಟ್ಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಟೋಗ್ರಾಫ್ ಇರುವ ಡಿಜಿಟಲ್ ಸ್ಮರಣಾರ್ಥಗಳನ್ನು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಈ ಹಂತದಲ್ಲಿ ಭಾಗವಹಿಸಿದವರಲ್ಲಿ 1500 ವಿದ್ಯಾರ್ಥಿಗಳನ್ನು, 250 ಶಿಕ್ಷಕರು ಮತ್ತು 250 ಪಾಲಕರನ್ನಷ್ಟೇ ಜಯಶಾಲಿಗಳೆಂದು ಆಯ್ಕೆ ಮಾಡಿ, ಪ್ರಧಾನಿ ಮೋದಿಯವರೊಂದಿಗೆ ಮುಖಾಮುಖಿ ಚರ್ಚೆಗೆ ಅವಕಾಶ ನೀಡಲಾಗುವುದು.
ಪರೀಕ್ಷಾ ಪೆ ಚರ್ಚಾಗೆ ನೋಂದಣಿ ಫೆಬ್ರವರಿ 18ರಿಂದ ಪ್ರಾರಂಭವಾಗಿ, ಮಾರ್ಚ್ 14ರಂದು ಮುಕ್ತಾಯಗೊಂಡಿದೆ. 14 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಹಿಂದೆಯೇ ತಿಳಿಸಿದ್ದಾರೆ. ಇಂದು 10.5 ಲಕ್ಷ ವಿದ್ಯಾರ್ಥಿಗಳು, 2.6 ಲಕ್ಷ ಶಿಕ್ಷಕರು, 92,00 ಪಾಲಕರು ಭಾಗವಹಿಸಲಿದ್ದಾರೆ. ಈ ಪರೀಕ್ಷಾ ಪೆ ಚರ್ಚಾ ಮೊದಲು ಶುರುವಾಗಿದ್ದು 2018ರಲ್ಲಿ. ಹಾಗೇ ಮೊದಲ ಸಂವಾದ ದೆಹಲಿಯ ಟಾಕಟೋರಾ ಕ್ರೀಡಾಂಗಣದಲ್ಲಿ ನಡೆದಿತ್ತು.
ಇದನ್ನೂ ಓದಿ: ಬಾಂಗ್ಲಾ ಹೋರಾಟದಲ್ಲಿ ನರೇಂದ್ರ ಮೋದಿ ಭಾಗವಹಿಸಿಲ್ಲ; ಬರೀ ಸುಳ್ಳು ಹೇಳಿಕೊಂಡು ಓಡಾಡ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
(PM Narendra Modi to Interact With Students Today In Pariksha Pe Charcha 2021)
Published On - 2:17 pm, Wed, 7 April 21