ದೆಹಲಿ: ಭಾರತಕ್ಕೆ ಡಿಸೆಂಬರ್ 4ರಂದು ಜವಾದ್ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿರುವ ಬೆನ್ನಲ್ಲೇ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದ್ದಾಗ ಪಿಟಿಐ ವರದಿ ಮಾಡಿದೆ. ಚಂಡಮಾರುತದ ಪ್ರಭಾವ, ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಇಂದು ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಭೆಯಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.
ಈ ಜವಾದ್ ಚಂಡಮಾರುತ ಡಿಸೆಂಬರ್ 4ರಂದು ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ ಎಂದು ಭಾರತದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಲ್ಲೂ ಮೊದಲು ಒಡಿಶಾದ ಕರಾವಳಿ ತೀರ ತಲುಪಲಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ, ಚಂಡಮಾರುತದ ಪ್ರಭಾವ ಹೆಚ್ಚಾಗಿ ಆಗಲಿರುವ 13 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಅಲರ್ಟ್ ಮಾಡಿದ್ದು, ಅಲ್ಲಿನ ಜನರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಹಾಗೇ, ರಕ್ಷಣಾ ಕಾರ್ಯಾಚರಣೆ ಆಗಮಿಸುವಂತೆ ಎನ್ಡಿಆರ್ಎಫ್, ಒಡಿಆರ್ಎಎಫ್ಗಳನ್ನೂ ವಿನಂತಿಸಿದೆ. ಇದೀಗ ಮೋದಿಯವರು ಒಟ್ಟಾರೆ ವಿಷಯಗಳ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಜವಾದ್ ಪ್ರಭಾವದಿಂದ ಡಿಸೆಂಬರ್ 4 ಮತ್ತು 5ರಂದು ಆಂಧ್ರ ಮತ್ತು ಒಡಿಶಾದಲ್ಲಿ ಭಾರಿ ಮಳೆಯಾಗಲಿದೆ. ಅದನ್ನು ಹೊರತುಪಡಿಸಿ ಪಶ್ಚಿಮ ಬಂಗಾಳದ ದಕ್ಷಿಣ ಜಿಲ್ಲೆಗಳಾದ ಕೋಲ್ಕತ್ತ, ದಕ್ಷಿಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳು, ಮಿಡ್ನಾಪುರದ ಪೂರ್ವ ಮತ್ತು ಪಶ್ಚಿಮ ಪ್ರದೇಶಗಳು, ಹೂಗ್ಲಿ, ನಾದಿಯಾ ಮತ್ತು ಝಾರ್ಗ್ರಾಮ್ಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: Junior Hockey World Cup 2021: ಬೆಲ್ಜಿಯಂ ಮಣಿಸಿ ಸೆಮಿ ಫೈನಲ್ಗೆ ಎಂಟ್ರಿಕೊಟ್ಟ ಭಾರತ! ಮುಂದಿನ ಎದುರಾಳಿ ಜರ್ಮನಿ