ಯುಪಿಎ ಎಂಬುದು ಈಗ ಉಳಿದಿಲ್ಲ ಎಂದ ಮಮತಾ ಬ್ಯಾನರ್ಜಿ ಹೇಳಿಕೆಗೆ ಕಾಂಗ್ರೆಸ್ ನಾಯಕರ ಟೀಕಾ ಪ್ರಹಾರ

ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಟಿಎಂಸಿ ಮುಖ್ಯಸ್ಥರು ತಮ್ಮ ಹೇಳಿಕೆಗಳ ಮೂಲಕ "ಹುಚ್ಚುತನ" ಪ್ರಾರಂಭಿಸುತ್ತಿದ್ದಾರೆ ಎಂದು ಆರೋಪಿಸಿದರು. ಮಮತಾ ಬ್ಯಾನರ್ಜಿ ಅವರಿಗೆ ಯುಪಿಎ ಎಂದರೇನು ಎಂದು ತಿಳಿದಿಲ್ಲವೇ?

ಯುಪಿಎ ಎಂಬುದು ಈಗ ಉಳಿದಿಲ್ಲ ಎಂದ ಮಮತಾ ಬ್ಯಾನರ್ಜಿ ಹೇಳಿಕೆಗೆ ಕಾಂಗ್ರೆಸ್ ನಾಯಕರ ಟೀಕಾ ಪ್ರಹಾರ
ಮಮತಾ ಬ್ಯಾನರ್ಜಿ- ಕಪಿಲ್ ಸಿಬಲ್

ದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee )ಅವರು ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (UPA) ಇನ್ನು ಮುಂದೆ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದ್ದು ಇದಕ್ಕೆ ಕಾಂಗ್ರೆಸ್ ನಾಯಕರು ಟೀಕಾಪ್ರಹಾರ ಮಾಡಿದ್ದಾರೆ. ಮಮತಾ ಅವರ ಈಯ ಹೇಳಿಕೆಗಳು ಕೆಲವು ಕಾಂಗ್ರೆಸ್ ನಾಯಕರನ್ನು ಒಗ್ಗಟ್ಟಿನ ಅಗತ್ಯವನ್ನು ತೋರಿಸಲು ಪ್ರೇರೇಪಿಸಿದೆ. ಕಾಂಗ್ರೆಸ್ ಇಲ್ಲದಿದ್ದರೆ ಯುಪಿಎ ಆತ್ಮವಿಲ್ಲದ ದೇಹವಾಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ (Kapil Sibal )ಗುರುವಾರ ಹೇಳಿದ್ದು, ಇದು ಪ್ರತಿಪಕ್ಷಗಳ ಒಗ್ಗಟ್ಟನ್ನು ಪ್ರದರ್ಶಿಸುವ ಸಮಯ ಎಂದಿದ್ದಾರೆ. ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸುವ ಸಮಯ ಬಂದಿದೆ ಎಂದು ಸಿಬಲ್ ಟ್ವೀಟ್ ಮಾಡಿದ್ದಾರೆ. ಏತನ್ಮಧ್ಯೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರು ಟಿಎಂಸಿ ಮುಖ್ಯಸ್ಥರು ತಮ್ಮ ಹೇಳಿಕೆಗಳ ಮೂಲಕ “ಹುಚ್ಚುತನ” ಪ್ರಾರಂಭಿಸುತ್ತಿದ್ದಾರೆ ಎಂದು ಆರೋಪಿಸಿದರು. ಮಮತಾ ಬ್ಯಾನರ್ಜಿ ಅವರಿಗೆ ಯುಪಿಎ ಎಂದರೇನು ಎಂದು ತಿಳಿದಿಲ್ಲವೇ? ಅವರು ಹುಚ್ಚುತನವನ್ನು ಪ್ರಾರಂಭಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ, ”ಎಂದಿದ್ದಾರೆ. “ಇಡೀ ಭಾರತ ‘ಮಮತಾ, ಮಮತಾ’ ಎಂದು ಜಪಿಸಲು ಪ್ರಾರಂಭಿಸಿದೆ ಎಂದು ಅವರು ಭಾವಿಸಿದಂತಿದೆ. ಆದರೆ ಭಾರತ ಎಂದರೆ ಬಂಗಾಳವಲ್ಲ ಮತ್ತು ಬಂಗಾಳ ಮಾತ್ರ ಭಾರವಲ್ಲ ಎಂದು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಮುಂಬೈನಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗಿನ ಸಭೆಯ ನಂತರ, ಬ್ಯಾನರ್ಜಿ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ನೀವು ಹೆಚ್ಚಿನ ಸಮಯ ವಿದೇಶದಲ್ಲಿರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಇಂದು ದೇಶದಲ್ಲಿ ಫ್ಯಾಸಿಸಂನ ವಾತಾವರಣವಿದೆ. ಇದರ ವಿರುದ್ಧ ಪ್ರಬಲ ಪರ್ಯಾಯವನ್ನು ನೀಡಬೇಕಾಗಿದೆ. ಯಾರೂ ಅದನ್ನು ಒಬ್ಬರೇ ಮಾಡಲು ಸಾಧ್ಯವಿಲ್ಲ. ಬಲವಿರುವವರನ್ನು ಒಟ್ಟಿಗೆ ತೆಗೆದುಕೊಳ್ಳಬೇಕು ಎಂದು ಮಮತಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಪವಾರ್ ಯುಪಿಎ ನೇತೃತ್ವ ವಹಿಸುತ್ತಾರೆಯೇ ಎಂಬ ಪ್ರಶ್ನೆ ಕೇಳಿದಾಗ “ಏನು ಯುಪಿಎ? ಈಗ ಯುಪಿಎ ಇಲ್ಲ. ನಾವು ಅದನ್ನು ಒಟ್ಟಿಗೆ ನಿರ್ಧರಿಸುತ್ತೇವೆ ಎಂದಿದ್ದಾರೆ ಮಮತಾ.

ಬ್ಯಾನರ್ಜಿ ವಿರುದ್ಧ ಮುಸುಕಿನ ಗುದ್ದಾಟದಲ್ಲಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ಮಹಾರಾಷ್ಟ್ರ ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್, ಬಿಜೆಪಿ ಮತ್ತು ಕೇಂದ್ರ ಸರ್ಕಾರದ “ದಬ್ಬಾಳಿಕೆಯ” ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಹೋರಾಟದ ಬಗ್ಗೆ ದೇಶಕ್ಕೆ ಚೆನ್ನಾಗಿ ತಿಳಿದಿದೆ ಎಂದು ಪ್ರತಿಕ್ರಿಯಿಸಿದ್ದಾರೆ. “ಯಾವುದೇ ಪಕ್ಷವು ತನ್ನ ರಾಜಕೀಯ ಲಾಭ ಮತ್ತು ವೈಯಕ್ತಿಕ ಮಹತ್ವಾಕಾಂಕ್ಷೆಗಳ ಬಗ್ಗೆ ಯೋಚಿಸುವುದನ್ನು ಮುಂದುವರೆಸಿದರೆ ರಾಹುಲ್ ಗಾಂಧಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಟೀಕಿಸುವ ಮೂಲಕ ಯಾವುದೇ ವೈಯಕ್ತಿಕ ಪಕ್ಷವು ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ದೇಶ ಮತ್ತು ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ ಮಾತ್ರ ಸಮರ್ಥ ಆಯ್ಕೆಯಾಗಿದೆ ಎಂದು ಅವರು ಹೇಳಿದರು.

ಕಳೆದ ಏಳು ವರ್ಷಗಳಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಿರ್ಭೀತಿಯಿಂದ ಹೋರಾಡಿದೆ. “ಅವರು ಮತ್ತು ಅವರ ಇಡೀ ಕುಟುಂಬವು ಬಿಜೆಪಿ ಮತ್ತು ಇತರ ಪಕ್ಷಗಳಿಂದ ವೈಯಕ್ತಿಕ ದಾಳಿಗೆ ಒಳಗಾಗಿದೆ. ಅವರ ವಿರುದ್ಧ ಮಾನಹಾನಿಯಾಗುವಂತ ಪ್ರಚಾರ ನಡೆಸಲಾಯಿತು, ಆದರೆ ರಾಹುಲ್ ಗಾಂಧಿ ಹಿಂದೆ ಸರಿಯಲಿಲ್ಲ ಎಂದಿದ್ದಾರೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್‌ನ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಎಎನ್ಐ ಸುದ್ದಿಸಂಸ್ಥೆ ಜತೆ ಮಾತನಾಡಿದ್ದು“ಕಾಂಗ್ರೆಸ್ ಹೆಸರು ಮಾಡಿದ ವಿವಿಧ ಸಾಮಾಜಿಕ-ರಾಜಕೀಯ ವಿಷಯಗಳಲ್ಲಿ ಅವರನ್ನು (ಟಿಎಂಸಿ) ಸೇರಿಸಲು ನಾವು ಪ್ರಯತ್ನಿಸಿದ್ದೇವೆ. ಪ್ರತಿಪಕ್ಷಗಳು ಒಡೆದು ತಮ್ಮ ತಮ್ಮಲ್ಲೇ ಜಗಳ ಮಾಡಿಕೊಳ್ಳಬಾರದು, ಬಿಜೆಪಿ ವಿರುದ್ಧ ಒಟ್ಟಾಗಿ ಹೋರಾಡಬೇಕು ಎಂದಿದ್ದಾರೆ.

ಇದನ್ನೂ ಓದಿ: Video: ರಾಷ್ಟ್ರಗೀತೆ ಅರ್ಧಕ್ಕೇ ನಿಲ್ಲಿಸಿ, ಕುಳಿತ ಮಮತಾ ಬ್ಯಾನರ್ಜಿ; ಇಂಥ ನಡವಳಿಕೆ ನಾಚಿಕೆ ಗೇಡು ಎಂದ ತೇಜಸ್ವಿ ಸೂರ್ಯ

ಇದನ್ನೂ ಓದಿ: ವರ್ಷದಲ್ಲಿ 6 ತಿಂಗಳು ವಿದೇಶದಲ್ಲಿದ್ದರೆ ರಾಜಕೀಯ ಹೇಗೆ ಮಾಡ್ತೀರಿ: ರಾಹುಲ್ ಗಾಂಧಿ ಬಗ್ಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ

Published On - 4:21 pm, Thu, 2 December 21

Click on your DTH Provider to Add TV9 Kannada