ವರ್ಷದಲ್ಲಿ 6 ತಿಂಗಳು ವಿದೇಶದಲ್ಲಿದ್ದರೆ ರಾಜಕೀಯ ಹೇಗೆ ಮಾಡ್ತೀರಿ: ರಾಹುಲ್ ಗಾಂಧಿ ಬಗ್ಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ
ಜನರ ನಡುವೆ ನಿಂತು ಕೆಲಸ ಮಾಡುವವರು ನಾಯಕತ್ವ ವಹಿಸಿಕೊಳ್ಳಬೇಕು ಎಂದು ಶರದ್ ಪವಾರ್ ಹೇಳಿದರು.
ಮುಂಬೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ರಾಜಕಾರಣದ ಶೈಲಿ ಕುರಿತು ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ಹರಿಹಾಯ್ದಿದ್ದಾರೆ. ವರ್ಷದಲ್ಲಿ 6 ತಿಂಗಳು ವಿದೇಶದಲ್ಲಿಯೇ ಇದ್ದರೆ ರಾಜಕಾರಣ ಹೇಗೆ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ನಗರದ ಜೆ.ಬಿ.ಚವಾಣ್ ಕೇಂದ್ರದಲ್ಲಿ ಪತ್ರಕರ್ತರು, ಕಲಾವಿದರು ಮತ್ತು ನಾಗರಿಕ ಸಂಘಟನೆಗಳ ಸದಸ್ಯರೊಂದಿಗೆ ಬುಧವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು. ಇದೇ ಪ್ರಶ್ನೆಯನ್ನು ಮಾಧ್ಯಮಗೋಷ್ಠಿಯಲ್ಲಿ ಎನ್ಸಿಪಿ ನಾಯಕ ಶರದ್ ಪವಾರ್ ಅವರಿಗೂ ಕೇಳಲಾಯಿತು. ಅವರು ಸಹ ಪರೋಕ್ಷವಾಗಿ ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಬೆಂಬಲಿಸಿದರು. ಜನರ ನಡುವೆ ನಿಂತು ಕೆಲಸ ಮಾಡುವವರು ನಾಯಕತ್ವ ವಹಿಸಿಕೊಳ್ಳಬೇಕು. ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಹೀಗೆಯೇ ನಡೆದುಕೊಂಡು ತೋರಿಸಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಸಂಯುಕ್ತ ಪ್ರಗತಿಶೀಲ ಮೈತ್ರಿಕೂಟ (United Progressive Alliance – UP) ಎನ್ನುವುದು ಇರುವುದಿಲ್ಲ. ಯುಪಿಎ ಎನ್ನುವುದು ಇತಿಹಾಸವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು. ಬಿಜೆಪಿ ವಿರುದ್ಧ ಹೋರಾಟ ನಡೆಸಲು ಪರ್ಯಾಯ ವ್ಯವಸ್ಥೆ ಬೇಕು. ಹೋರಾಟ ಮಾಡದ ಪಕ್ಷಕ್ಕೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
‘ಯುಪಿಎ ಎಂದರೇನು? ಯುಪಿಎ ಎಲ್ಲಿದೆ?’ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಜೊತೆಗಿರುವ ಪಕ್ಷಗಳನ್ನು ಗಮನದಲ್ಲಿರಿಸಿಕೊಂಡು ಹೊಸ ರಾಜಕೀಯ ದಾಳ ಉರುಳಿಸಿದರು. ಇನ್ನು ಎರಡು ವರ್ಷಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಹೊತ್ತಿಗೆ ದೇಶದಲ್ಲಿ ಹೊಸ ರಾಜಕೀಯ ಸಮೀಕರಣ ನಡೆಸುವ ಇಚ್ಛೆಯನ್ನೂ ಈ ಮೂಲಕ ಹೊರಹಾಕಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವಲ್ಲಿ ಯಶಸ್ವಿಯಾದ ಶರದ್ ಪವಾರ್ ಪ್ರಸ್ತುತ ರಾಷ್ಟ್ರ ರಾಜಕಾರಣದಲ್ಲಿ ತೃತೀಯ ರಂಗ ರೂಪಿಸಲು ಶ್ರಮಿಸುತ್ತಿದ್ದಾರೆ. ಮಮತಾ ಭೇಟಿಯ ಬಗ್ಗೆ ಪ್ರತಿಕ್ರಿಯಿಸುವಾಗ, ‘2024ರ ಚುನಾವಣೆಯ ಹಾದಿ’ (ಟೆಂಪ್ಲೇಟ್ ಫಾರ್ 2024) ಎಂದು ಹೇಳಿದರು.
ಮಮತಾರನ್ನು ಭೇಟಿಯಾದ ನಂತರ ಫೋಟೊಗಳನ್ನು ಟ್ವೀಟ್ ಮಾಡಿದ ಶರದ್ ಪವಾರ್, ‘ನನ್ನ ಮುಂಬೈ ನಿವಾಸದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದೆ. ನಮ್ಮ ಮೈತ್ರಿಯನ್ನು ಬಲಪಡಿಸಿಕೊಳ್ಳಬೇಕು. ಜನರ ಹಿತದೃಷ್ಟಿಯಿಂದ ದೇಶದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿಕೊಳ್ಳಲು ಬದ್ಧತೆ ಪ್ರದರ್ಶಿಸಬೇಕು’ ಎಂಬ ಬಗ್ಗೆ ಇಬ್ಬರಲ್ಲೂ ಸಹಮತವಿತ್ತು ಎಂದು ಪವಾರ್ ಟ್ವೀಟ್ನಲ್ಲಿ ಹೇಳಿದ್ದಾರೆ.
ನಿನ್ನೆಯಷ್ಟೇ (ನ.30) ಮಮತಾ ಬ್ಯಾನರ್ಜಿ ಶಿವಸೇನೆಯ ನಾಯಕರಾದ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರನ್ನು ಭೇಟಿಯಾಗಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗುವ ಉದ್ದೇಶ ಮಮತಾ ಅವರಿಗೆ ಇತ್ತಾದರೂ ಸಾಧ್ಯವಾಗಲಿಲ್ಲ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಉದ್ಧವ್ ಸದ್ಯಕ್ಕೆ ವೈದ್ಯರ ಸಲಹೆ ಮೇರೆಗೆ ಪ್ರತ್ಯೇಕ ವಾಸದಲ್ಲಿದ್ದಾರೆ.
ಇದನ್ನೂ ಓದಿ: ತೃತೀಯ ರಂಗ ಸಂಘಟನೆ ಚುರುಕು: ಮಮತಾ ಬ್ಯಾನರ್ಜಿ-ಶರದ್ ಪವಾರ್ ಚರ್ಚೆ ಇದನ್ನೂ ಓದಿ: ಐಟಿ ದಾಳಿಗಳು ಲಖಿಂಪುರ್ ಖೇರಿ ಘಟನೆಯನ್ನು ಟೀಕಿಸಿದ್ದರ ಪರಿಣಾಮವಾಗಿರಬಹುದು: ಶರದ್ ಪವಾರ್