ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಮೆಟ್ರೊ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ. ವಿಡಿಯೊ ಕಾನ್ಫೆರೆನ್ಸ್ ಮೂಲಕ ಕಾಮಗಾರಿಗೆ ಚಾಲನೆ ನೀಡಿದ ಅವರು ಆಗ್ರಾದಲ್ಲಿ ಸ್ಮಾರ್ಟ್ ಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಮೊದಲ ಹಂತದಲ್ಲಿ ಸುಮಾರು ₹1,000 ಕೋಟಿ ವ್ಯಯಿಸಲಾಗುತ್ತಿದೆ ಎಂದರು.
ಕಳೆದ ವರ್ಷ ಕಮಾಂಡ್ ಆ್ಯಂಡ್ ಕಂಟ್ರೋಲ್ ಕೇಂದ್ರದ ಶಿಲಾನ್ಯಾಸ ಮಾಡುವ ಭಾಗ್ಯ ನನಗೆ ಸಿಕ್ಕಿತ್ತು. ಅದು ಈಗ ಕಾರ್ಯವೆಸಗುತ್ತಿದೆ. 2014ರ ನಂತರ 6 ವರ್ಷಗಳಲ್ಲಿ ದೇಶದಲ್ಲಿ 450 ಕಿಮಿಗಿಂತ ಹೆಚ್ಚು ಮೆಟ್ರೊ ಮಾರ್ಗ ಕಾರ್ಯ ಪ್ರವೃತ್ತವಾಗಿದ್ದು ಸುಮಾರು 1000 ಕಿಮೀ ಮೆಟ್ರೊ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉತ್ತರ ಪ್ರದೇಶ ಮೆಟ್ರೊ ರೈಲು ಕಾರ್ಪರೇಷನ್ (ಯುಪಿಎಂಆರ್ಸಿ) ಈ ಯೋಜನೆಯ ಮೊದಲ ಹಂತವನ್ನು ಡಿಸೆಂಬರ್ 2022ರೊಳಗೆ ಪೂರ್ಣಗೊಳಿಸುವ ಗುರಿಯಿರಿಸಿಕೊಂಡಿದೆ.
Speaking at the programme to begin construction of Agra Metro Rail Project. https://t.co/xDQLUUfrrZ
— Narendra Modi (@narendramodi) December 7, 2020
ಆಗ್ರಾದಲ್ಲಿರುವ ಚಾರಿತ್ರಿಕ ಸ್ಮಾರಕ ತಾಜ್ಮಹಲ್, ರೈಲು ನಿಲ್ದಾಣ ಮತ್ತು ಪ್ರಮುಖ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸಲು ಮೆಟ್ರೊ ಯೋಜನೆ ಸಹಕಾರಿಯಾಗಲಿದೆ. ಪ್ರವಾಸೋದ್ಯಮದ ಉತ್ತೇಜನಕ್ಕೆ ಮೆಟ್ರೊ ಯೋಜನೆ ಸಹಕಾರಿಯಾಗಲಿದೆ ಎಂದು ಉತ್ತರ ಪ್ರದೇಶ ಮೆಟ್ರೊ ರೈಲು ಕಾರ್ಪರೇಷನ್ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಕೇಶವ್ ಹೇಳಿದ್ದಾರೆ. ಆಗ್ರಾ ಮೆಟ್ರೊ ರೈಲು ಯೋಜನೆಗೆ ತಗಲುವ ವೆಚ್ಚ ₹8379.62 ಕೋಟಿ ಎಂದು ಅಂದಾಜಿಸಲಾಗಿದೆ.
ಆಗ್ರಾ ಮೆಟ್ರೊ ಯೋಜನೆ ಹೇಗಿದೆ?
29.4 ಕಿಮೀ ಉದ್ದದ ಮೆಟ್ರೊ ರೈಲು ಮಾರ್ಗ ಇದಾಗಿದ್ದು 2 ಕಾರಿಡಾರ್ಗಳಿರಲಿವೆ. ಮೊದಲ ಕಾರಿಡಾರ್ 14 ಕಿಮೀ ಆಗಿದ್ದು ತಾಜ್ನ ಪೂರ್ವ ಗೇಟ್ನಿಂದ ಸಿಕಂದ್ರಾವರೆಗೆ ಇರಲಿದೆ. ಇದು ಭಾಗಶಃ ಎಲಿವೇಟೆಡ್ ಮತ್ತು ಸುರಂಗ ಮಾರ್ಗವನ್ನು ಹೊಂದಿದೆ. 6.3 ಕಿಮೀ ಎಲಿವೇಟೆಡ್ ಆಗಿದ್ದರೆ 7.7 ಕಿಮೀ ಸುರಂಗ ಮಾರ್ಗ ಇರಲಿದೆ. 6 ನಿಲ್ದಾಣಗಳಿರಲಿವೆ. ಇದರಲ್ಲಿ ತಾಜ್ ಈಸ್ಟ್ ಗೇಟ್ , ಬಸಾಯಿ, ಫತೇಹಾಬಾದ್ ರೋಡ್ ರಸ್ತೆ ಎಲಿವೇಟೆಡ್ ಕಾರಿಡಾರ್ನಲ್ಲಿರಲಿದ್ದು ತಾಜ್ ಮಹಲ್, ಆಗ್ರಾ ಕೋಟೆ, ಜಮಾ ಮಸೀದಿ ಸುರಂಗ ಮಾರ್ಗದಲ್ಲಿನ ನಿಲ್ದಾಣಗಳಾಗಿವೆ ಎಂದು ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಆಗ್ರಾ ಹೆಸರು ಬದಲಾವಣೆಗೆ ಮುಂದಾಯ್ತಾ ಯೋಗಿ ಆದಿತ್ಯನಾಥ್ ಸರ್ಕಾರ?