PM Modi: ಜಮ್ಮು ಕಾಶ್ಮೀರದ ಶತ್ರುಗಳಿಗೆ ಪಾಠ ಕಲಿಸಲು ಸರ್ಕಾರ ಹಿಂಜರಿಯುವುದಿಲ್ಲ; ಪ್ರಧಾನಿ ಮೋದಿ ಭರವಸೆ

Modi in Srinagar: ಪ್ರಧಾನಿ ನರೇಂದ್ರ ಮೋದಿ ಇಂದು (ಗುರುವಾರ) ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಶುಕ್ರವಾರ ನಡೆಯುವ ಯೋಗ ದಿನಾಚರಣೆಯನ್ನು ಮುಗಿಸಿ ಮೋದಿ ದೆಹಲಿಗೆ ಮರಳಲಿದ್ದಾರೆ. ಇಂದು ಶ್ರೀನಗರದ ಶೇರ್-ಇ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (SKICC)ನಲ್ಲಿ ನಡೆದ 'ಯುವಕರ ಸಬಲೀಕರಣ, ಜಮ್ಮು ಕಾಶ್ಮೀರದ ಪರಿವರ್ತನೆ' ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ.

PM Modi: ಜಮ್ಮು ಕಾಶ್ಮೀರದ ಶತ್ರುಗಳಿಗೆ ಪಾಠ ಕಲಿಸಲು ಸರ್ಕಾರ ಹಿಂಜರಿಯುವುದಿಲ್ಲ; ಪ್ರಧಾನಿ ಮೋದಿ ಭರವಸೆ
ಜಮ್ಮು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ
Follow us
|

Updated on: Jun 20, 2024 | 9:14 PM

ಶ್ರೀನಗರ: 2024ರ ಲೋಕಸಭೆ ಚುನಾವಣೆಯಲ್ಲಿ (Lok Sabha Elections 2024) ಜಯ ಗಳಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಜೂನ್ 20) ಜಮ್ಮು ಮತ್ತು ಕಾಶ್ಮೀರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. 2 ದಿನಗಳ ಕಾಲ ಅವರು ಜಮ್ಮು ಕಾಶ್ಮೀರದಲ್ಲಿ (Jammu and Kashmir) ಇರಲಿದ್ದಾರೆ. ಈ ಪ್ರದೇಶದಲ್ಲಿ ಇತ್ತೀಚಿನ ಭಯೋತ್ಪಾದಕ ದಾಳಿಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂದು ಅವರು ಈ ವೇಳೆ ದೃಢವಾದ ಸಂದೇಶವನ್ನು ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಕೇಂದ್ರ ಸರ್ಕಾರ ಹಿಂಜರಿಯುವುದಿಲ್ಲ ಎಂದು ಅವರು ಕೇಂದ್ರಾಡಳಿತ ಪ್ರದೇಶದ ಜನರಿಗೆ ಭರವಸೆ ನೀಡಿದ್ದಾರೆ.

ಶ್ರೀನಗರದಲ್ಲಿ ಯುವಕರ ಸಬಲೀಕರಣ, ಜಮ್ಮು ಕಾಶ್ಮೀರದ ಪರಿವರ್ತನೆ ಕಾರ್ಯಕ್ರಮದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ನೀವೆಲ್ಲರೂ ಹೊಸ ಶಕ್ತಿಗಾಗಿ ಮೆಚ್ಚುಗೆಗೆ ಅರ್ಹರು. ಆದರೆ ಶಾಂತಿ ಮತ್ತು ಮಾನವೀಯತೆಯ ಶತ್ರುಗಳು ಜಮ್ಮು ಮತ್ತು ಕಾಶ್ಮೀರದ ಪ್ರಗತಿಯನ್ನು ಇಷ್ಟಪಡುವುದಿಲ್ಲ. ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯನ್ನು ನಿಲ್ಲಿಸಲು ಮತ್ತು ಇಲ್ಲಿ ಶಾಂತಿ ಸ್ಥಾಪನೆಯನ್ನು ತಡೆಯಲು ಅವರು ಏನೇನೋ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇತ್ತೀಚಿನ ಭಯೋತ್ಪಾದನಾ ದಾಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಗೃಹ ಸಚಿವರು ಸ್ಥಳೀಯ ಆಡಳಿತದೊಂದಿಗೆ ಎಲ್ಲವನ್ನೂ ಪರಿಶೀಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶತ್ರುಗಳಿಗೆ ಪಾಠ ಕಲಿಸಲು ನಾವು ಹಿಂಜರಿಯುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭತ್ತ, ರಾಗಿ, ಜೋಳ ಸೇರಿ 14 ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಮೋದಿ ಸರ್ಕಾರ ನಿರ್ಧಾರ

ಈ ಪ್ರದೇಶವು ಜೂನ್ 9ರಿಂದ ನಿರಂತರವಾಗಿ ಭಯೋತ್ಪಾದಕ ದಾಳಿಗಳನ್ನು ಎದುರಿಸುತ್ತಿದೆ. ರಿಯಾಸಿಯಲ್ಲಿ ಭಯೋತ್ಪಾದಕರು ಪ್ರಯಾಣಿಕರ ಬಸ್ ಮೇಲೆ ದಾಳಿ ಮಾಡಿದ ಕಾರಣ 10 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಕಳೆದ 4 ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ, ಕಥುವಾ ಮತ್ತು ದೋಡಾ ಜಿಲ್ಲೆಗಳಲ್ಲಿ ನಾಲ್ಕು ಸ್ಥಳಗಳಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದು, 10 ಯಾತ್ರಿಕರು ಮತ್ತು ಒಬ್ಬ ಸಿಆರ್‌ಪಿಎಫ್ ಜವಾನ ಮೃತಪಟ್ಟಿದ್ದಾರೆ. 7 ಭದ್ರತಾ ಸಿಬ್ಬಂದಿ ಮತ್ತು ಹಲವರು ಗಾಯಗೊಂಡಿದ್ದಾರೆ. ಕಥುವಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಿಷೇಧಿತ ಭಯೋತ್ಪಾದಕ ಗುಂಪು ಲಷ್ಕರ್-ಎ-ತೊಯ್ಬಾದ ಅಂಗವಾದ ಪಾಕಿಸ್ತಾನ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್​ಎಫ್) ರಿಯಾಸಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಉಗ್ರರ ನಿರ್ಮೂಲನೆ ಬಗ್ಗೆ ಮೋದಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ನಾನು ಭಯೋತ್ಪಾದಕನಾದರೆ ನಿಮ್ಮದು ಸರ್ಕಾರಿ ನಕ್ಸಲಿಸಂ; ಪಿಎಂ ಮೋದಿ, ಸಿಎಂ ಶಿಂಧೆ ವಿರುದ್ಧ ಉದ್ಧವ್ ಠಾಕ್ರೆ ಆಕ್ರೋಶ

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ಚುನಾವಣೆ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದೆ. ಜಮ್ಮು ಮತ್ತು ಕಾಶ್ಮೀರದ ಜನರು ಸ್ಥಳೀಯ ಮಟ್ಟದಲ್ಲಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಅವರ ಮೂಲಕ ನೀವು ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತೀರಿ. ಇದಕ್ಕಿಂತ ಉತ್ತಮವಾದದ್ದು ಯಾವುದು? ಹೀಗಾಗಿ, ಈಗ ವಿಧಾನಸಭೆ ಚುನಾವಣೆಗೆ ಸಿದ್ಧತೆಯೂ ಆರಂಭವಾಗಿದೆ. ನಿಮ್ಮ ಮತಗಳಿಂದ ಜಮ್ಮು ಮತ್ತು ಕಾಶ್ಮೀರದ ಹೊಸ ಸರ್ಕಾರವನ್ನು ಆಯ್ಕೆ ಮಾಡುವ ಕಾಲ ದೂರವಿಲ್ಲ. ಆ ದಿನ ಕೂಡ ಶೀಘ್ರದಲ್ಲೇ ಬರಲಿದೆ. ಜಮ್ಮು ಮತ್ತು ಕಾಶ್ಮೀರವು ಮತ್ತೊಮ್ಮೆ ತನ್ನ ಭವಿಷ್ಯವನ್ನು ರಾಜ್ಯವಾಗಿ ಉತ್ತಮಗೊಳಿಸುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ಜಮ್ಮು ಕಾಶ್ಮೀರದಲ್ಲಿ 1,500 ಕೋಟಿ ರೂ.ಗೂ ಹೆಚ್ಚು ಮೌಲ್ಯದ 84 ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. 1800 ಕೋಟಿ ರೂ. ಮೌಲ್ಯದ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಲಾಯಿತು. ಈ ವೇಳೆ ಮಾತನಾಡಿದ ಅವರು “ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ನಾವು ಕಾಣುತ್ತಿರುವ ಬದಲಾವಣೆಗಳು ಕಳೆದ 10 ವರ್ಷಗಳಲ್ಲಿ ನಮ್ಮ ಕೆಲಸದ ಫಲಿತಾಂಶವಾಗಿದೆ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ