3D Projection at Sun Temple: ಭಾರತದ ಮೊದಲ ಸೌರ ಗ್ರಾಮ ಗುಜರಾತ್ನ ಮೋಧೇರಾ: ಇಂದು ಸೂರ್ಯ ದೇಗುಲದಲ್ಲಿ ತ್ರಿಡಿ ಪ್ರೊಜೆಕ್ಷನ್ಗೆ ಮೋದಿ ಚಾಲನೆ
ಗ್ರಾಮದ ಪ್ರತಿ ಮನೆಗೂ ಸೌರಫಲಕ ಅಳವಡಿಸಲಾಗಿದೆ. ಈ ಮೂಲಕ ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನದಿಂದ ವಿದ್ಯುತ್ ಪಡೆಯುವ ಭಾರತದ ಮೊದಲ ಗ್ರಾಮ ಎನ್ನುವ ಶ್ರೇಯಕ್ಕೆ ಮೋಧೇರಾ ಪಾತ್ರವಾಯಿತು.
ದೆಹಲಿ: ಪ್ರಸಿದ್ಧ ಸೂರ್ಯ ದೇವಾಲಯವನ್ನು ಹೊಂದಿರುವ ಗುಜರಾತ್ನ ಮೋಧೇರಾ ಗ್ರಾಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಮೊದಲ ‘ಸೌರಶಕ್ತಿ ಚಾಲಿತ ಗ್ರಾಮ’ ಎಂದು ಘೋಷಿಸಲಿದ್ದಾರೆ. ‘ಪರಿಸರಸ್ನೇಹಿ ಶುದ್ಧ ಇಂಧನವನ್ನು ಉತ್ಪಾದಿಸುವ ಪ್ರಧಾನಿಯವರ ಕನಸನ್ನು ಸಾಕಾರಗೊಳಿಸಲು ಗುಜರಾತ್ ಮತ್ತೊಮ್ಮೆ ನಾಯಕತ್ವ ವಹಿಸಿರುವುದು ನನಗೆ ಸಂತೋಷವಾಗಿದೆ. 2030ರ ವೇಳೆಗೆ ನವೀಕರಿಸಬಹುದಾದ ಇಂಧನದ ಮೂಲಕ ಭಾರತದ ಇಂಧನ ಅಗತ್ಯಗಳ ಪೈಕಿ ಅರ್ಧದಷ್ಟನ್ನು ಉತ್ಪಾದಿಸಬೇಕು ಎನ್ನುವುದು ಮೋದಿ ಅವರ ಕನಸಾಗಿದೆ’ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇಂದು (ಅ 9) ಗ್ರಾಮದ ಪ್ರಸಿದ್ಧ ಸೂರ್ಯ ದೇಗುಲದಲ್ಲಿ ಮೋದಿ ಅವರು ತ್ರಿಡಿ ಪ್ರೊಜೆಕ್ಷನ್ಗೆ ಚಾಲನೆ ನೀಡಲಿದ್ದಾರೆ.
ಮೊಧೇರಾದ ಸೂರ್ಯ ದೇಗುಲದಿಂದ ಸುಮಾರು 6 ಕಿಮೀ ದೂರದಲ್ಲಿರುವ ಮೆಹ್ಸಾನಾದ ಸುಜ್ಜನ್ ಪುರದಲ್ಲಿರುವ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (ಬಿಇಎಸ್ಎಸ್) ನೊಂದಿಗೆ ಸಂಯೋಜಿಸಲಾದ ಸೌರ ವಿದ್ಯುತ್ ಯೋಜನೆಯ ಮೂಲಕ ಮೋಧೇರಾಗೆ ದಿನದ 24 ಗಂಟೆಯೂ ಸೌರಶಕ್ತಿಯನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಮೊಧೇರಾ ಸೂರ್ಯ ದೇವಾಲಯ ಮತ್ತು ಗ್ರಾಮದಲ್ಲಿ ಸೌರ ಫಲಕಗಳನ್ನು ಅಳವಡಿಸುವ ಕಾಮಗಾರಿ ಆರಂಭಿಸಿತು.
ಈ ಯೋಜನೆಯ ಮೂಲಕ ಮೊಧೇರಾ ಗ್ರಾಮವು ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನದಿಂದ ವಿದ್ಯುತ್ ಪಡೆಯುವ ಭಾರತದ ಮೊದಲ ಗ್ರಾಮ ಎನ್ನುವ ಶ್ರೇಯಕ್ಕೆ ಪಾತ್ರವಾಯಿತು. ಈ ಯೋಜನೆಯಿಂದ ಜನರು ವಿದ್ಯುತ್ ಬಿಲ್ ಮೇಲೆ ಶೇ 60ರಿಂದ 100ರಷ್ಟು ಉಳಿತಾಯ ಮಾಡಲಿದ್ದಾರೆ ಎಂದು ಗುಜರಾತ್ ಸರ್ಕಾರವು ಪತ್ರಿಕಾಹೇಳಿಕೆಯಲ್ಲಿ ತಿಳಿಸಿದೆ. ‘ಸೌರಶಕ್ತಿಯ ಬಳಕೆಯು ನಾಗರಿಕರಿಗೆ ಹಣ ಉಳಿಸಲು ನೆರವಾಗುತ್ತದೆ. ₹ 1,000 ಕ್ಕಿಂತ ಹೆಚ್ಚು ವಿದ್ಯುತ್ ಬಿಲ್ ತೆರುತ್ತಿದ್ದ ಮನೆಗಳು ಇಂದು ಶೂನ್ಯಕ್ಕೆ ಇಳಿದಿವೆ. ಯೋಜನೆಗೆ ಆಯ್ಕೆಯಾದ ಮನೆಗಳಲ್ಲಿ ಸೌರ ಫಲಕಗಳನ್ನು ಉಚಿತವಾಗಿ ಸ್ಥಾಪಿಸಲಾಗಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದನೆಯಿಂದ ನಾವು ಹೆಚ್ಚುವರಿ ಆದಾಯವನ್ನೂ ಗಳಿಸುತ್ತಿದ್ದೇವೆ’ ಎಂದು ಮೋಧೇರಾ ಗ್ರಾಮದ ಸರಪಂಚ್ ಜತನ್ಬೇನ್ ಠಾಕೂರ್ ತಿಳಿಸಿದರು.
2011ರ ಜನಗಣತಿಯ ಪ್ರಕಾರ, ಬೆಚರಾಜಿ ತಾಲ್ಲೂಕಿನ ಮೊಧೇರಾ ಗ್ರಾಮವು 6,373 ಜನಸಂಖ್ಯೆಯನ್ನು ಹೊಂದಿದೆ. ಈ ಯೋಜನೆಗಾಗಿ ಗುಜರಾತ್ ಸರ್ಕಾರವು 12 ಹೆಕ್ಟೇರ್ ಭೂಮಿ ನೀಡಿದೆ. ಕೇಂದ್ರ ಮತ್ತು ಗುಜರಾತ್ ಸರ್ಕಾರಗಳು ಎರಡು ಹಂತಗಳಲ್ಲಿ ಒಟ್ಟು ₹ 80.66 ಕೋಟಿ ಖರ್ಚು ಮಾಡಿವೆ. ಗ್ರಾಮದ ಮನೆಗಳ ಮೇಲೆ ವಿದ್ಯುತ್ ಉತ್ಪಾದಿಸಲೆಂದು 1 ಕಿಲೋವ್ಯಾಟ್ ಸಾಮರ್ಥ್ಯದ 1,300ಕ್ಕೂ ಹೆಚ್ಚು ಚಾವಣಿ ಘಟಕಗಳನ್ನು ಸ್ಥಾಪಿಸಲಾಗಿದೆ. ಹಗಲು ಸೌರಫಲಕಗಳ ಮೂಲಕ ಉತ್ಪಾದನೆಯಾಗುವ ವಿದ್ಯುತ್ ಗ್ರಿಡ್ಗೆ ಪೂರೈಸಲಾಗುತ್ತದೆ. ರಾತ್ರಿ ಹೊತ್ತು ಈ ಮನೆಗಳು ಗ್ರಿಡ್ ಮೂಲಕ ವಿದ್ಯುತ್ ಪಡೆಯುತ್ತವೆ. ಗ್ರಾಮದಲ್ಲಿ ಸೌರಶಕ್ತಿ ಆಧರಿತ ಅತ್ಯಾಧುನಿಕ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಸಹ ಸ್ಥಾಪಿಸಲಾಗಿದೆ. ಈ ಯೋಜನೆಯ ಮತ್ತೊಂದು ವೈಶಿಷ್ಟ್ಯವೆಂದರೆ ಇದು ಭಾರತದ ಮೊದಲ ಗ್ರಿಡ್ ಸಂಪರ್ಕಿತ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ ಹೊಂದಿದೆ.
ಸೂರ್ಯ ದೇಗುಲದಲ್ಲಿ 3-ಡಿ ಪ್ರೊಜೆಕ್ಷನ್ ಯೂನಿಟ್
ಗ್ರಾಮದ ಮೋಧೇರಾ ಸೂರ್ಯ ದೇಗುಲದಲ್ಲಿ ಪರಂಪರೆಯನ್ನು ಸಾರಿ ಹೇಳಲು 3-ಡಿ ಪ್ರೊಜೆಕ್ಷನ್ ಯೂನಿಟ್ ಸ್ಥಾಪಿಸಲಾಗಿದೆ. ಇದೂ ಸಹ ಸೌರಶಕ್ತಿಯನ್ನೇ ಆಧರಿಸಿ ಕಾರ್ಯನಿರ್ವಹಿಸುತ್ತದೆ ಎನ್ನುವುದು ವಿಶೇಷ. ಈ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅ 9 ರಂದು ಚಾಲನೆ ನೀಡಲಿದ್ದಾರೆ. ಅ 9ರಿಂದ ಮೂರು ದಿನ ಪ್ರಧಾನಿ ಗುಜರಾತ್ ಪ್ರವಾಸದಲ್ಲಿ ಪಾಲ್ಗೊಳ್ಳಲಿದ್ದು, ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಗುಜರಾತ್ನಲ್ಲಿ ರಾಜಕೀಯ ಬೆಳವಣಿಗೆ ಚುರುಕು
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಹ ಗುಜರಾತ್ಗೆ ಇದೇ ಸಂದರ್ಭದಲ್ಲಿ (ಅ 8 ಮತ್ತು ಅ 9) ಭೇಟಿ ನೀಡಲಿದ್ದು, ಚುನಾವಣಾ ಪ್ರಚಾರಕ್ಕೆ ಹೊಸ ವೇಗ ನೀಡಲಿದ್ದಾರೆ. ಗುಜರಾತ್ನಲ್ಲಿ ಬಿಜೆಪಿಯು ಸುಮಾರು 27 ವರ್ಷಗಳಿಂದ ಅಧಿಕಾರದಲ್ಲಿದ್ದು, ಈ ಬಾರಿ ಆಪ್ ಪ್ರಮುಖ ಎದುರಾಳಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ.
Published On - 7:29 am, Sun, 9 October 22