ಉತ್ತರಪ್ರದೇಶದ ಕುಶಿನಗರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kushinagar International Airport)ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಕ್ಟೋಬರ್ 20 (ಬುಧವಾರ)ರಂದು ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ. ನಾಳೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಪಾಲ್ಗೊಳ್ಳುವರು. ಹಾಗೇ, ಉದ್ಘಾಟನಾ ವಿಮಾನ ಒಟ್ಟು 125 ಮಂದಿ ಗಣ್ಯರು ಮತ್ತು ಬೌದ್ಧ ಸನ್ಯಾಸಿಗಳನ್ನು ಹೊತ್ತು ಶ್ರೀಲಂಕಕ್ಕಾಗಿ ಪ್ರಯಾಣ ಮಾಡಲಿದೆ. ಅಲ್ಲಿ ಕೊಲಂಬೋದ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.
ಭಗವಾನ್ ಬುದ್ಧ ಕೊನೆಯುಸಿರೆಳೆದಿದ್ದು ಉತ್ತರಪ್ರದೇಶದ ಕುಶಿನಗರದಲ್ಲಿ. ಇದನ್ನು ಬುದ್ಧನ ಮಹಾಪರಿನಿರ್ವಾಣದ ಸ್ಥಳ ಎಂದು ಹೇಳಲಾಗಿದ್ದು, ಅಂತಾರಾಷ್ಟ್ರೀಯ ಪ್ರವಾಸಿ ತಾಣ. ಇಲ್ಲಿಗೆ ಜಗತ್ತಿನ ವಿವಿಧೆಡೆಯಿಂದ ಬೌದ್ಧ ಧರ್ಮೀಯರು, ಸನ್ಯಾಸಿಗಳು ಆಗಮಿಸುತ್ತಾರೆ. ಇಲ್ಲೀಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ಉದ್ಘಾಟನೆಯಾದ ಮೊದಲ ಫ್ಲೈಟ್ ಶ್ರೀಲಂಕಕ್ಕೆ ತೆರಳಲಿದೆ. ಅದರಲ್ಲಿ ಇಲ್ಲಿಂದ ಕೆಲವು ಬೌದ್ಧ ಸನ್ಯಾಸಿಗಳು ಹೋಗಲಿದ್ದಾರೆ. ಈ ಮೂಲಕ ಜಗತ್ತಿನಾದ್ಯಂತ ಇರುವ ಎಲ್ಲ ಬೌದ್ಧ ಧರ್ಮೀಯರು, ಬುದ್ಧನ ಅನುಯಾಯಿಗಳು, ಸನ್ಯಾಸಿಗಳಿಗೆ ಕುಶಿನಗರಕ್ಕೆ ಭೇಟಿ ನೀಡಲು ಮಾಡಿಕೊಟ್ಟ ಅನುಕೂಲವನ್ನು ಎತ್ತಿ ತೋರಿಸಲಾಗುವುದು ಎಂದು ಹೇಳಿದೆ. ಹಾಗೇ, ಈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಸಕ್ತ ವಾರದಿಂದ ಕಾರ್ಯಾಚರಣೆ ನಡೆಸಲಿದ್ದು, ಅಂತಾರಾಷ್ಟ್ರೀಯ ಬೌದ್ಧ ಯಾತ್ರಿಕರಿಗೆ ವಾಯುಯಾನವನ್ನು ಸುಲಭಗೊಳಿಸಲಿದೆ ಎಂದು ಪ್ರಧಾನಿ ಕಚೇರಿ ಹೇಳಿದೆ.
ಹೇಗಿದೆ ವಿಮಾನ ನಿಲ್ದಾಣ?
ಭಾರತೀಯ ಏರಪೋರ್ಟ್ ಪ್ರಾಧಿಕಾರ ಇಲ್ಲಿನ ಎಲ್ಲ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತಿದೆ. ಹಾಗೇ ಕುಶಿನಗರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕೂಡ ಕೆಲವು ಮುಂದುವರಿದ ಮಾದರಿಯ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರು, ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಸುಮಾರು 3600 ಚದರ್ ಮೀಟರ್ ವಿಸ್ತಾರದಲ್ಲಿ ಹೊಸ ಟರ್ಮಿನಲ್ ಕಟ್ಟಡ ಕಟ್ಟಲಾಗಿದೆ. ಇದಕ್ಕೆ ಅಂದಾಜು 260 ಕೋಟಿ ರೂಪಾಯಿ ತಗುಲಿದೆ.
ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೇವಲ ಯಾತ್ರಾರ್ಥಿಗಳಿಗೆ ಅನುಕೂಲ ಮಾಡಿಕೊಡುವುದಿಲ್ಲ. ಅದರ ಬದಲಿಗೆ ವಿಮಾನಯಾನ ಕ್ಷೇತ್ರದ ಆರ್ಥಿಕತೆಯನ್ನೂ ಬಲಗೊಳಿಸುತ್ತದೆ. ಇನ್ನು ಹೊಟೆಲ್, ಉದ್ಯಮ, ಪ್ರವಾಸೋದ್ಯಮ ಏಜೆನ್ಸಿ, ರೆಸ್ಟೋರೆಂಟ್ಗಳನ್ನು ಉತ್ತೇಜಿಸುವುದರೊಂದಿಗೆ ಆದರಾತಿಥ್ಯ ಕ್ಷೇತ್ರದ ಮೇಲೆ ಕೂಡ ಧನಾತ್ಮಕ ಪ್ರಭಾವ ಬೀರಲಿದೆ. ಬುದ್ಧನ ಮಹಾಪರಿನಿರ್ವಾಣ ಸ್ಥಳಕ್ಕೆ ನೇರವಾಗಿ ವಿಮಾನ ಯಾನದ ಸೌಲಭ್ಯ ಶುರುವಾದ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಬುದ್ಧನ ಅನುಯಾಯಿಗಳು ಇಲ್ಲಿಗೆ ಆಗಮಿಸಬಹುದಾಗಿದೆ. ಅದರಲ್ಲೂ ಮೊದಲ ವಿಮಾನ ಇಲ್ಲಿಂದ ಶ್ರೀಲಂಕಕ್ಕೆ ಹೋಗುವ ಕಾರಣಕ್ಕೆ ಭಾರತ-ಶ್ರೀಲಂಕಾ ನಡುವಿನ ಸಂಬಂಧ ಉತ್ತೇಜನದ ದೃಷ್ಟಿಯಿಂದ ಒಂದು ಮೈಲಿಗಲ್ಲಾಗಿದೆ.
ಇದನ್ನೂ ಓದಿ: Viral Video: ಕೇಬಲ್ ಮೇಲೆ ನೇತಾಡುತ್ತಿದ್ದ ದೈತ್ಯಾಕಾರದ ಹಾವು ಕಂಡು ಕಿರುಚಾಡಿದ ಜನ; ದೃಶ್ಯ ಕ್ಯಾಮರಾದಲ್ಲಿ ಸೆರೆ
ಶ್ರೀಯಾ ಶರಣ್ ಮಗಳಿಗೆ ರಾಧಾ ಎಂದು ಹೆಸರು ಇಟ್ಟಿದ್ದೇಕೆ? ಇದಕ್ಕಿದೆ ರಷ್ಯಾದ ಕನೆಕ್ಷನ್
Published On - 10:26 am, Tue, 19 October 21