ದೇಶದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಮಾಣ ನಿಧಾನವಾಗಿ ಏರಿಕೆಯಾಗುತ್ತಿದ್ದು, ವಿವಿಧ ರಾಜ್ಯಗಳಲ್ಲಿ ಕೊವಿಡ್ 19 ಪರಿಸ್ಥಿತಿ ಹೇಗಿದೆ ಎಂಬುದನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿಗಳ ಸಭೆ ನಡೆಯಲಿದ್ದು, ಇದರಲ್ಲಿ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಕೂಡ ಉಪಸ್ಥಿತರಿದ್ದು, ಮಾತನಾಡಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕೊವಿಡ್ 19 ಸಾಂಕ್ರಾಮಿಕ ಶುರುವಾದಾಗಿನಿಂದಲೂ ವಿವಿಧ ರಾಜ್ಯಗಳಲ್ಲಿನ ಪರಿಸ್ಥಿತಿ, ಕೊರನಾ ನಿಯಂತ್ರಣ ಕ್ರಮಗಳ ಅನುಷ್ಠಾನ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿಯವರು ಮುಖ್ಯಮಂತ್ರಿಗಳೊಂದಿಗೆ ಹಲವು ಸಭೆಗಳನ್ನು ನಡೆಸಿದ್ದು. ಇದೀಗ ದೇಶದಲ್ಲಿ ಕೊರೊನಾ ನಾಲ್ಕನೇ ಅಲೆಯ ಭಯ ಎದ್ದಿದೆ. ನಿತ್ಯ ದಾಖಲಾಗುವ ಕೇಸ್ಗಳಲ್ಲೂ ಕ್ರಮೇಣ ಏರಿಕೆ ಕಾಣುತ್ತಿದೆ. ಹೀಗಾಗಿ ಮತ್ತೊಮ್ಮೆ ಪ್ರಧಾನಿ ಸಭೆ ಕರೆದಿದ್ದಾರೆ.
ದೇಶದಲ್ಲಿ ಸದ್ಯ ಯಾವುದೇ ಕೊರೊನಾ ನಿಯಂತ್ರಣ ನಿರ್ಬಂಧಗಳಿಲ್ಲ. ಹಾಗೇ, ಲಸಿಕೆ ಮೂರನೇ ಡೋಸ್ ನೀಡಿಕೆ ಅಭಿಯಾನವೂ ನಡೆಯುತ್ತಿದೆ. ಈ ಮಧ್ಯೆ ಕೊರೊನಾ ಸೋಂಕಿನ ಪ್ರಸರಣವೂ ಹೆಚ್ಚುತ್ತಿದೆ. ಹೀಗಾಗಿ ಜನರು ಎಚ್ಚರಿಕೆ ವಹಿಸಬೇಕು ಎಂದು ಸರ್ಕಾರಗಳು ಹೇಳುತ್ತಲೇ ಬರುತ್ತಿವೆ. ಇನ್ನು ಮೊನ್ನೆ ಭಾನುವಾರ ಮನ್ ಕೀ ಬಾತ್ನಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಈಗ ಹಲವು ಹಬ್ಬಗಳು ಸಾಲುಸಾಲಾಗಿ ಬರುತ್ತಿವೆ. ಹಬ್ಬಗಳನ್ನು ಖುಷಿಯಿಂದಲೇ ಆಚರಿಸಿ, ಆದರೆ ಅದರ ಮಧ್ಯೆ ಕೊವಿಡ್ 19 ನಿಯಂತ್ರಣ ನಿಯಮಗಳ ಪಾಲನೆ ಮರೆಯಬೇಡಿ ಎಂದು ಹೇಳಿದ್ದರು. ಈದ್, ಅಕ್ಷಯ ತೃತೀಯಾ, ಭಗವಾನ್ ಪರಶುರಾಮ ಜಯಂತಿ, ವೈಶಾಖ ಬುದ್ಧ ಪೂರ್ಣಿಮಾಗಳು ಸಮೀಪಿಸುತ್ತಿವೆ. ಇವೆಲ್ಲವರೂ ಕೂಡ ಸಾಮರಸ್ಯದ ಪ್ರತೀಕಗಳು. ನಾಮು ಮುಂಚಿತವಾಗಿಯೇ ಎಲ್ಲರಿಗೂ ಶುಭಾಶಯವನ್ನು ಕೋರುತ್ತಿದ್ದೇನೆ. ಆದರೆ ಈ ಹಬ್ಬಗಳ ಆಚರಣೆ ವೇಳೆ ಯಾರೂ ಕೊರೊನಾ ನಿಯಂತ್ರಣ ನಿಯಮಗಳನ್ನು ಮರೆಯಬಾರದು. ಮಾಸ್ಕ್ನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಹೇಳಿದ್ದರು.
ಭಾರತದಲ್ಲಿ ಈಗೀಗ ಪ್ರತಿದಿನ 2 ಸಾವಿರಕ್ಕೂ ಅಧಿಕ ಕೊರೊನಾ ಕೇಸ್ಗಳು ದಾಖಲಾಗುತ್ತಿವೆ. ನಿನ್ನೆ 2483 ಪ್ರಕರಣಗಳು ದಾಖಲಾಗಿದ್ದವು. ಈ ಮೂಲಕ ಭಾರತದ ಒಟ್ಟಾರೆ ಕೊರೊನಾ ಸೋಂಕಿನ ಸಂಖ್ಯೆ 43,062,569ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 15,636. ದೆಹಲಿ, ಉತ್ತರಪ್ರದೇಶ, ಕರ್ನಾಟಕ, ಪಂಜಾಬ್, ಹರ್ಯಾಣಗಳಲ್ಲಿ ಕೊರೊನಾ ಹೆಚ್ಚಳವಾಗಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇಂದು ನಡೆಸಲಿರುವ ಸಭೆ ಅತ್ಯಂತ ಮಹತ್ವದ್ದಾಗಿದೆ.
ಇದನ್ನೂ ಓದಿ: ಬ್ರೇಕಿಂಗ್ ನ್ಯೂಸ್ ನೀಡಿದ ‘ಹೊಂಬಾಳೆ ಫಿಲ್ಮ್ಸ್’: ಯುವ ರಾಜ್ಕುಮಾರ್ ಜತೆ ಹೊಸ ಸಿನಿಮಾ ಘೋಷಣೆ
Published On - 9:52 am, Wed, 27 April 22