Covid India Update: ಭಾರತದಲ್ಲಿ 2541 ಮಂದಿಗೆ ಕೊರೊನಾ ಸೋಂಕು, 30 ಮಂದಿ ಸಾವು
ಒಟ್ಟು ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳು ಶೇ 0.04 ಆಗುತ್ತದೆ. ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಪ್ರಮಾಣವು ಶೇ 98.75 ಇದೆ.
ದೆಹಲಿ: ಕೊರೊನಾ 4ನೇ ಅಲೆಯ ಆತಂಕ ಕಾಣಿಸಿಕೊಂಡಿರುವ ಬೆನ್ನಿಗೇ ದೇಶದಲ್ಲಿ ಒಂದೇ ದಿನ ವರದಿಯಾಗಿರುವ ಕೊರೊನಾ ಸೋಂಕಿತರ ಸಂಖ್ಯೆ ಎರಡು ಸಾವಿರ ದಾಟಿದೆ. ಸೋಮವಾರ (ಏಪ್ರಿಲ್ 25) ದೇಶದ ವಿವಿಧೆಡೆ ಒಟ್ಟು 2,541 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 30 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು 43,06,008 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಪ್ರಸ್ತುತ 16,522 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,22,223ಕ್ಕೆ ಮುಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳು ಶೇ 0.04 ಆಗುತ್ತದೆ. ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಪ್ರಮಾಣವು ಶೇ 98.75 ಇದೆ.
ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಛತ್ತೀಸಗಡ ಮತ್ತು ಕರ್ನಾಟಕದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿರುವ ಕಾರಣ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕ ಮತ್ತು ಛತ್ತೀಸಗಡಗಳಲ್ಲಿ ಹೊಸದಾಗಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಲಾಗಿದೆ. ಹೋಂ ಕ್ವಾರಂಟೈನ್ ಮತ್ತು ಸೋಷಿಯಲ್ ಡಿಸ್ಟೆಂನ್ಸಿಂಗ್ ನಿಯಮಗಳನ್ನೂ ಹೊಸದಾಗಿ ರೂಪಿಸಲಾಗಿದೆ.
ತಮಿಳುನಾಡಿನ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾಸ್ಕ್ ಧರಿಸುವುದನ್ನು ಖಾತ್ರಿಪಡಿಸಬೇಕು. ಲಸಿಕಾಕರಣ ಪ್ರಕ್ರಿಯೆಗೆ ವೇಗ ನೀಡಬೇಕು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತೆ ಬಿಗಡಾಯಿಸಿದರೆ ಅದನ್ನು ಎದುರಿಸಲು ಅಧಿಕಾರಿಗಳು ಸಿದ್ಧರಾಗಿರಬೇಕು ಎಂದು ಹೇಳಿದ್ದರು.
‘ಕೇರಳದಲ್ಲಿ ಸದ್ಯದ ಮಟ್ಟಿಗೆ ಯಾವುದೇ ಆತಂಕವಿಲ್ಲ. ಆದರೆ ನಾವು ಕಟ್ಟೆಚ್ಚರದ ಸ್ಥಿತಿಯನ್ನು ಮುಂದುವರಿಸಿದ್ದೇವೆ. ವಿವಿಧ ರಾಜ್ಯಗಳಲ್ಲಿ ಕೊವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ’ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಸೋಮವಾರ (ಏಪ್ರಿಲ್ 25) 64 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ರಾಜ್ಯದಲ್ಲಿ ಪ್ರಸ್ತುತ 1671 ಸಕ್ರಿಯ ಪ್ರಕರಣಗಳಿದ್ದು, 4637 ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಸೋಂಕಿನಿಂದ 69 ಮಂದಿ ಚೇತರಿಸಿಕೊಂಡು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಪಾಸಿಟಿವಿಟಿ ಪ್ರಮಾಣ ಶೇ 1.38 ಇದೆ. ಇದು ವಾರದ ಸರಾಸರಿಗಿಂತಲೂ ಹೆಚ್ಚು ಎನ್ನುವುದು ಗಮನಾರ್ಹ ಸಂಗತಿ. ವಾರದ ಸರಾಸರಿ ಪಾಸಿಟಿವಿಟಿ ಪ್ರಮಾಣವು ಶೇ 0.96 ಇದೆ.
ಇಂದಿನ 25/04/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/tqycecRXSr @CMofKarnataka @BSBommai @mla_sudhakar @Comm_dhfwka @MDNHM_Kar @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/3BVchbmxFD
— K’taka Health Dept (@DHFWKA) April 25, 2022
ಇದನ್ನೂ ಓದಿ: Coronavirus 4th wave: ಹೆಚ್ಚಳವಾಯ್ತು ಕೊರೊನಾ ಆತಂಕ, ಪ್ರಕಟವಾಯ್ತು ರಾಜ್ಯ ಸರ್ಕಾರದಿಂದ ಹೊಸ ಕೊವಿಡ್ ಗೈಡ್‌ಲೈನ್ಸ್
ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ ಕುರಿತು ಏಪ್ರಿಲ್27ರಂದು ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ
Published On - 8:15 am, Tue, 26 April 22