PM Modi Kedarnath Visit: ಇಂದು ಕೇದಾರನಾಥ ಮತ್ತು ಬದರಿನಾಥಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

| Updated By: Rakesh Nayak Manchi

Updated on: Oct 21, 2022 | 6:45 AM

ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕೇದಾರನಾಥ ಮತ್ತು ಬದರಿನಾಥಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಬಳಿಕ ಹೇಮಕುಂಡ್ ಸಾಹಿಬ್ ರೋಪ್‌ವೇ ಮತ್ತು ಕೆಲವೊಂದು ರಸ್ತೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

PM Modi Kedarnath Visit: ಇಂದು ಕೇದಾರನಾಥ ಮತ್ತು ಬದರಿನಾಥಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಕೇದಾರನಾಥ ಮತ್ತು ಬದರಿನಾಥಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
Follow us on

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಇಂದು (ಅ.21) ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿವೆ. ಬದರಿನಾಥ-ಕೇದಾರನಾಥ ಮಂದಿರ ಸಮಿತಿಯ ಪ್ರಧಾನ ಪೂಜಾರಿ ಗಂಗಾಧರಲಿಂಗ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ ಕೇದಾರನಾಥದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ” ಎಂದಿದ್ದಾರೆ. ಬಳಿಕ ಪ್ರಧಾನಿ ಮೋದಿ 3400 ಕೋಟಿಗೂ ಹೆಚ್ಚು ಮೌಲ್ಯದ ಸಂಪರ್ಕ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ಈ ಯೋಜನೆಗಳು ಪ್ರದೇಶದ ಸಂಪರ್ಕ ಮತ್ತು ಧಾರ್ಮಿಕ ಪ್ರವಾಸೋದ್ಯಮವನ್ನು ಸುಧಾರಿಸುವ ಗುರಿಯನ್ನು ಹೊಂದಿವೆ. “ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 21ರಂದು ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 8:30 ರ ಸುಮಾರಿಗೆ ಅವರು ಶ್ರೀ ಕೇದಾರನಾಥ ದೇವಸ್ಥಾನದಲ್ಲಿ ದೇವರ ದರ್ಶನ ಮತ್ತು ಪೂಜೆಯನ್ನು ಮಾಡಲಿದ್ದಾರೆ” ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಬೆಳಿಗ್ಗೆ 9 ಗಂಟೆಗೆ ಪ್ರಧಾನಿಯವರು ಕೇದಾರನಾಥ ರೋಪ್‌ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅದರ ನಂತರ ಅವರು ಆದಿಗುರು ಶಂಕರಾಚಾರ್ಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 9:25 ರ ಸುಮಾರಿಗೆ ಮಂದಾಕಿನಿ ಅಷ್ಟಪಥ ಮತ್ತು ಸರಸ್ವತಿ ಅಷ್ಟಪಥ ಉದ್ದಕ್ಕೂ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬಳಿಕ ಬದರಿನಾಥ ದೇಗುಲದಲ್ಲಿ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನದಿ ತೀರದ ಅಭಿವೃದ್ಧಿಯನ್ನು ಪರಿಶೀಲಿಸಲಿದ್ದಾರೆ. ನಂತರ ಮಾಣ ಗ್ರಾಮದಲ್ಲಿ ರಸ್ತೆ ಮತ್ತು ರೋಪ್ ವೇ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. “ಕೇದಾರನಾಥಕ್ಕೆ ಸಂಪರ್ಕಿಸುವ 9.7 ಕಿಮೀ ಉದ್ದದ ಗೌರಿಕುಂಡ್ ರೋಪ್​ವೇಗೆ ಶಂಕುಸ್ಥಾಪನೆ ನೆರವೇರಲಿದೆ. ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ 6-7 ಗಂಟೆಗಳ ಸಮಯವನ್ನು 30 ನಿಮಿಷಗಳಿಗೆ ಕಡಿಮೆ ಮಾಡುತ್ತದೆ.

ಹೇಮಕುಂಡ್ ರೋಪ್‌ವೇ ಗೋವಿಂದಘಾಟ್‌ನಿಂದ ಹೇಮಕುಂಡ್ ಸಾಹಿಬ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸುಮಾರು 12.4 ಕಿಮೀ ಉದ್ದವಿರಲಿದ್ದು, ಪ್ರಯಾಣದ ಸಮಯವನ್ನು ಒಂದು ದಿನಕ್ಕಿಂತ ಹೆಚ್ಚು ಸಮಯದಿಂದ ಕೇವಲ 45 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಈ ರೋಪ್‌ವೇ ಘಂಗಾರಿಯಾವನ್ನು ಸಹ ಸಂಪರ್ಕಿಸುತ್ತದೆ. ಇದು ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್‌ಗೆ ಗೇಟ್‌ವೇ ಆಗಿದೆ” ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಮತ್ತಷ್ಟು ದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:45 am, Fri, 21 October 22