ಜಮ್ಮು ಮತ್ತು ಕಾಶ್ಮೀರದಲ್ಲಿ ಹೈಬ್ರಿಡ್ ಭಯೋತ್ಪಾದಕರಿಂದ ಟಾರ್ಗೆಟ್ ಹತ್ಯೆ: ಪಾಕ್​ನ ಹೊಸ ಕುತಂತ್ರ

TV9kannada Web Team

TV9kannada Web Team | Edited By: Ramesh B Jawalagera

Updated on: Oct 20, 2022 | 7:47 PM

ಕಾಶ್ಮೀರದಲ್ಲಿ ಹೆಚ್ಚಿದ ವಿದೇಶಿ ಉಗ್ರರು.‌! ಅಡಗಿ ಕುಳಿತ ವಿದೇಶಿ ಉಗ್ರರೇ ಭದ್ರತಾ ಪಡೆಗಳಿಗೆ ಟಾರ್ಗೆಟ್..! ಕಾಶ್ಮೀರದಲ್ಲಿರುವ ವಿದೇಶಿ ಉಗ್ರರ ಸಂಖ್ಯೆ ಎಷ್ಟು..? ಇಲ್ಲಿದೆ ಡಿಟೇಲ್ಸ್...

ಜಮ್ಮು ಮತ್ತು ಕಾಶ್ಮೀರದಲ್ಲಿ ಹೈಬ್ರಿಡ್ ಭಯೋತ್ಪಾದಕರಿಂದ  ಟಾರ್ಗೆಟ್ ಹತ್ಯೆ: ಪಾಕ್​ನ ಹೊಸ ಕುತಂತ್ರ
ಪ್ರಾತಿನಿಧಿಕ ಚಿತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಸ್ಥಳೀಯ ಭಯೋತ್ಪಾದಕರಿಗೆ ಹೋಲಿಸಿದರೆ ಪಾಕಿಸ್ತಾನಿ ಭಯೋತ್ಪಾದಕರು ಹೆಚ್ಚಾಗುತ್ತಿರುವುದು ಆಘಾತಕಾರಿಯಾಗಿದೆ. ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವ ಬಹುತೇಕ ಭಯೋತ್ಪಾದಕರು ಸ್ಥಳೀಯರಾಗಿದ್ದರೂ ಪಾಕಿಸ್ತಾನಿ ಮೂಲದ ಉಗ್ರರು ಕಣಿವೆಯಲ್ಲಿ ಅಡಗಿ ಕುಳಿತಿದ್ದಾರೆ. ಭದ್ರತಾ ಪಡೆಗಳಿಗೆ ಅಡಗು ತಾಣಗಳನ್ನು ಇನ್ನೂ ತಲುಪಲು ಸಾಧ್ಯವಾಗಿಲ್ಲ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸಧ್ಯ 137 ಉಗ್ರರು ಸಕ್ರಿಯರಾಗಿದ್ದಾರೆ. ಇವರಲ್ಲಿ 54 ಸ್ಥಳೀಯ ಮತ್ತು 83 ವಿದೇಶಿ ಭಯೋತ್ಪಾದಕರಿದ್ದಾರೆ. ಈ ವರ್ಷ ಇಲ್ಲಿಯವರೆಗೆ 168 ಭಯೋತ್ಪಾದಕರನ್ನು ಹಲವು ಬಾರಿ ನಡೆದಿರುವ ಕಾರ್ಯಾಚರಣೆಗಳಲ್ಲಿ ಎನ್‌ಕೌಂಟರ್ ಮಾಡಲಾಗಿದೆ. ಇವರಲ್ಲಿ 47 ವಿದೇಶಿ ಭಯೋತ್ಪಾದಕರು ಮತ್ತು 121 ಸ್ಥಳೀಯ ಉಗ್ರರನ್ನು ಹತ್ಯೆ ಮಾಡಲಾಗಿದೆ.

ತಾಜಾ ಸುದ್ದಿ

ಭಾರತದಲ್ಲಿ ಆಪರೇಷನ್ ಆಲ್ ಔಟ್ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ರೆ, ಅತ್ತ ಪಾಕಿಸ್ತಾನ ಈಗ ಹೊಸ ತಂತ್ರ ರೂಪಿಸುತ್ತಿದೆ. ತನ್ನ ನೆಲದಿಂದ ಉಗ್ರರನ್ನು ಕಳುಹಿಸಿ ಹೆಚ್ಚು ಹೆಚ್ಚು ಹೈಬ್ರಿಡ್ ಭಯೋತ್ಪಾದಕರ ಹೊಸ ಪಾತ್ರಗಳನ್ನು ಸೃಷ್ಟಿಸುವ ಷಡ್ಯಂತ್ರ ರೂಪಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ, ಹೈಬ್ರಿಡ್ ಭಯೋತ್ಪಾದಕರ ಸಹಾಯದಿಂದ ಮಾತ್ರ ಟಾರ್ಗೆಟ್ ಹತ್ಯೆಗಳನ್ನು ನಡೆಸಲಾಗುತ್ತದೆ.

ಸ್ಥಳೀಯ ಯುವಕರ ಮೇಲೆ‌ ಕಣ್ಣಿಟ್ಟ ಗುಪ್ತಚರ ಇಲಾಖೆ‌

ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಭಯೋತ್ಪಾದಕರು ಕಡಿಮೆ ಇರುವುದು ನಿಜ, ಆದರೆ ಪಾಕಿಸ್ತಾನಿ ಭಯೋತ್ಪಾದಕರು ಹೆಚ್ಚಾಗಿದ್ದಾರೆ. ಭದ್ರತಾ ಪಡೆಗಳ ದಾಳಿಗೆ ಗುರಿಯಾಗಿರುವ ಬಹುತೇಕ ಭಯೋತ್ಪಾದಕರು ಸ್ಥಳೀಯರಾಗಿದ್ದಾರೆ. ಹಿಂದಿದ್ದ ಕಲ್ಲು ತೂರಾಟದ ಯುಗ ಈಗ ಸಂಪೂರ್ಣವಾಗಿ ಮುಗಿದಿದೆ. ಎನ್‌ಕೌಂಟರ್‌ ಸಂದರ್ಭದಲ್ಲಿ ಕಲ್ಲುಗಳ ಸುರಿಮಳೆಯಾಗುತ್ತಿತ್ತು ಈಗ ಪರಿಸ್ಥಿತಿ ಬದಲಾಗಿದೆ. ಗುಪ್ತಚರ ಇಲಾಖೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಥಳೀಯ ಯುವಕರ ಮೇಲೆ ಕಣ್ಣಿಟ್ಟಿವೆ. ಯಾವ ಮನೆಯಿಂದ ಯಾರು, ಯಾವಾಗ ಮತ್ತು ಹೇಗೆ ನಾಪತ್ತೆಯಾಗಿದ್ದಾರೆ, ಈ ಬಗ್ಗೆ ಸಂಪೂರ್ಣ ದಾಖಲೆ ಇಡಲಾಗುತ್ತಿದೆ. ಪ್ರತಿ ಯುವಕರ ಚಲನವನಗಳ ಮೇಲೆ ಭದ್ರತಾ ಪಡೆಗಳು ಕಣ್ಣಿಟ್ಟಿವೆ.‌ ಇದರಿಂದಾಗಿ ಗಡಿಯಾಚೆಗಿನ ಭಯೋತ್ಪಾದಕ ಸಂಘಟನೆಗಳು ತೊಂದರೆಗೀಡಾಗಿವೆ. ಹೊಸ ಭಯೋತ್ಪಾದಕರನ್ನು ನೇಮಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಣಿವೆಯಲ್ಲಿ ಅಡಗಿರುವ ಪಾಕಿಸ್ತಾನಿ ಉಗ್ರರನ್ನು ರಕ್ಷಿಸಿಸುವ ಪ್ರಯತ್ನವನ್ನು ಸಂಘಟನೆಗಳು ಮಾಡುತ್ತಿವೆ‌. ಸ್ಥಳೀಯ ಮಟ್ಟದಲ್ಲಿ ಸಕ್ರಿಯ ಭಯೋತ್ಪಾದಕರನ್ನು ನೇಮಿಸಿಕೊಳ್ಳುವಲ್ಲಿ ಯಶಸ್ವಿಯಾಗದಿದ್ದಾಗ, ಅವರು ಹೈಬ್ರಿಡ್ ಭಯೋತ್ಪಾದಕರನ್ನು ಸಿದ್ಧಪಡಿಸುವ ಕಾರ್ಯತಂತ್ರವನ್ನು ಪ್ರಾರಂಭಿಸುತ್ತಿದ್ದಾರೆ.

ಹೈಬ್ರಿಡ್ ಉಗ್ರರನ್ನು ಹಿಡಿಯುವುದು ಕಷ್ಟ

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿನ ಟಾರ್ಗೆಟ್ ಹತ್ಯೆಗಳ ಹಿಂದೆ ಹೈಬ್ರಿಡ್ ಭಯೋತ್ಪಾದಕರು ಇದ್ದಾರೆ. ಈ ಭಯೋತ್ಪಾದಕರು ಪೊಲೀಸರ ಪಟ್ಟಿಯಲ್ಲಿಲ್ಲ, ಇವರು ಸಾರ್ವಜನಿಕರ ನಡುವೆ ವಾಸಿಸುತ್ತಿದ್ದಾರೆ, ಆದ್ದರಿಂದ ಅವರನ್ನು ಹಿಡಿಯುವುದು ಭದ್ರತಾ ಪಡೆಗಳಿಗೆ ಸುಲಭವಲ್ಲ. ಜನರ ಮಧ್ಯೆ ಇರುವ ಉಗ್ರರು ಕಾಶ್ಮೀರಿ ಪಂಡಿತರು ಅಥವಾ ಹೊರ ರಾಜ್ಯಗಳ ಕಾರ್ಮಿಕರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ. ಪಾಕಿಸ್ತಾನಿ ಭಯೋತ್ಪಾದಕ ಗುಂಪುಗಳು ಕಾಶ್ಮೀರದಲ್ಲಿ ಸಣ್ಣ ಭಯೋತ್ಪಾದಕ ಗುಂಪುಗಳನ್ನು ಬೆಳೆಸುತ್ತಿವೆ. ಟಾರ್ಗೆಟ್ ಹತ್ಯೆಯ ಬಳಿಕ ಒಂದು ಸಣ್ಣ ಸಂಘಟನೆಯು ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸುದ್ದಿ ಬರುತ್ತದೆ. ಹೊಣೆ‌ಹೊತ್ತವರು ಅಷ್ಟೇ ವೇಗದಲ್ಲಿ ಭದ್ರತಾ ಪಡೆಗಳಿಗೆ ಬಲಿಯಾಗುತ್ತಿದ್ದಾರೆ. ಹೈಬ್ರಿಡ್ ಭಯೋತ್ಪಾದಕರಿಗೆ AK-47 ಸ್ವಯಂಚಾಲಿತ ರೈಫಲ್‌ಗಳನ್ನು ನೀಡುವ ಬದಲು ಪಿಸ್ತೂಲ್ ಮತ್ತು ಹ್ಯಾಂಡ್ ಗ್ರೆನೇಡ್‌ಗಳನ್ನು ನೀಡಲಾಗುತ್ತದೆ.

ಭಯೋತ್ಪಾದಕರು ಹೆಚ್ಚು ಕಾಲ ಕಾಶ್ಮೀರದಲ್ಲಿ ಆಕ್ಟೀವ್ ಇರುವ ಸಾಧ್ಯವಿಲ್ಲ. ಕಣಿವೆಯಲ್ಲಿ ಉಗ್ರರ ಸಂಖ್ಯೆ ಕಡಿಮೆಯಾಗುತ್ತಿದೆ. ಉಗ್ರರ ಹೊಸ ನೇಮಕಾತಿಯಲ್ಲಿ ಇಳಿಕೆಯಾಗಿದೆ. ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವ ಬಹುತೇಕ ಸಂಸ್ಥೆಗಳು ಎನ್‌ಐಎ ಮತ್ತು ಇಡಿ ವ್ಯಾಪ್ತಿಗೆ ಒಳಪಟ್ಟಿವೆ. ಉಗ್ರರ ಅಡಗುತಾಣಗಳನ್ನೂ ಪತ್ತೆ ಹಚ್ಚಲಾಗುತ್ತಿದೆ. ಅವರ ಸಹಾಯಕ್ಕೆ ಬಹುತೇಕ ಮಾರ್ಗಗಳು ಬಂದ್‌ ಆಗುತ್ತಿವೆ.

ವರದಿ: ಹರೀಶ್ ಟಿವಿ9 ನವದೆಹಲಿ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada