ಇಂದು ನವೆಂಬರ್ 1. ವಿಶೇಷವಾದ ದಿನ..ನಮಗೆ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಸಂಭ್ರಮವಾದರೆ ನಮ್ಮಂತೆ ಇತರ 5 ರಾಜ್ಯಗಳೂ ಕೂಡ ಅವುಗಳ ಸಂಸ್ಥಾಪನಾ ದಿನವನ್ನು ಇಂದೇ ಆಚರಿಸಿಕೊಳ್ಳುತ್ತಿವೆ. ಈ ಆರೂ ರಾಜ್ಯಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ. ಹಾಗೇ, ರಾಷ್ಟ್ರಪತಿ ರಾಮನಾಥ ಕೋವಿಂದ್, ರಾಹುಲ್ ಗಾಂಧಿ ಇತರರೂ ಕೂಡ ಆರು ರಾಜ್ಯಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಂದಹಾಗೆ ಇಂದು ಕರ್ನಾಟಕ, ಛತ್ತೀಸ್ಗಢ್, ಮಧ್ಯಪ್ರದೇಶ, ಆಂಧ್ರಪ್ರದೇಶ, ಕೇರಳ ಮತ್ತು ಹರಿಯಾಣ ರಾಜ್ಯಗಳ ಸಂಸ್ಥಾಪನಾ ದಿನ. ಇವೆಲ್ಲವರೂ ಒಂದೇ ವರ್ಷದಲ್ಲಿ ಅಸ್ತಿತ್ವಕ್ಕೆ ಬಂದವು ಅಲ್ಲ..ಬದಲಿಗೆ ವಿವಿಧ ವರ್ಷಗಳ ನವೆಂಬರ್ 1ರಂದು ರಾಜ್ಯಗಳಾಗಿ ಅಸ್ತಿತ್ವಕ್ಕೆ ಬಂದಿವೆ.
ಇಂದು ಮುಂಜಾನೆ ಟ್ವೀಟ್ ಮೂಲಕ ಕರ್ನಾಟಕದ ಜನರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಈ ವಿಶೇಷ ದಿನದಂದು ನನ್ನ ಶುಭ ಹಾರೈಕೆಗಳು. ಕರ್ನಾಟಕದ ಜನರ ಹೊಸ ಅನ್ವೇಷಣೆಯ ಉತ್ಸಾಹದಿಂದ ಆ ರಾಜ್ಯ ವಿಶೇಷವಾಗಿ ಗುರುತಿಸಿಕೊಂಡಿದೆ. ಅದ್ಭುತ ಸಂಶೋಧನೆಗಳು ಮತ್ತು ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ಆ ರಾಜ್ಯ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದ್ದಾರೆ.
Best wishes on the special occasion of Karnataka Rajyotsava. Karnataka has made a special mark due to the innovative zeal of its people. The state is at the forefront of outstanding research and enterprise. May Karnataka scale newer heights of success in the times to come.
— Narendra Modi (@narendramodi) November 1, 2021
2000ನೇ ಇಸ್ವಿಯ ನವೆಂಬರ್ 1ರಂದು ರಚಿತವಾದ ಛತ್ತೀಸ್ಗಢ್ನಲ್ಲಿ ಕೂಡ ರಾಜ್ಯೋತ್ಸವ ಆಚರಣೆ ನಡೆಯುತ್ತಿದೆ. ಅಲ್ಲಿನ ಜನತೆಯನ್ನು ಉದ್ದೇಶಿಸಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಛತ್ತೀಸ್ಗಢ್ನ ಸಮಸ್ತ ಜನತೆಗೆ ಅಭಿನಂದನೆಗಳು. ಜಾನಪದ, ಜಾನಪದ ನೃತ್ಯ, ಕಲೆ-ಸಂಸ್ಕೃತಿ ಕ್ಷೇತ್ರದಲ್ಲಿ ವಿಶಿಷ್ಯ ಗುರುತು ಹೊಂದಿರುವ ಛತ್ತೀಸ್ಗಢ್ ರಾಜ್ಯವು ಇನ್ನಷ್ಟು ಪ್ರಗತಿ ಹೊಂದಲಿ ಎಂದು ಆಶಿಸುವುದಾಗಿ ಹೇಳಿದರು.
ಕೇರಳದಲ್ಲಿ ಪಿರವಿ ದಿನ
ಕೇರಳ ರಾಜ್ಯವೂ ಕೂಡ 1956ರ ನವೆಂಬರ್ 1ರಂದು ಸಂಸ್ಥಾಪನೆಗೊಂಡಿದ್ದು, ಈ ದಿನವನ್ನು ಪಿರವಿ ದಿನ ಎಂದು ಅಲ್ಲಿ ಆಚರಣೆ ಮಾಡಲಾಗುತ್ತದೆ. ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕೇರಳ ರಾಜ್ಯವು ಅಲ್ಲಿನ ಸುತ್ತಲಿನ ಪ್ರದೇಶಗಳು ಮತ್ತು ಶ್ರಮಶೀಲ ಜನರನ್ನು ಒಳಗೊಂಡ ಪ್ರದೇಶ. ಕೇರಳದ ಜನರಿಗೆ ಇನ್ನಷ್ಟು ಯಶಸ್ಸು ಸಿಗಲಿ..ಅವರಿಗೆಲ್ಲ ಪಿರವಿ ದಿನದ ಶುಭಾಶಯಗಳು ಎಂದು ಹೇಳಿದ್ದಾರೆ. ಹಾಗೇ, 1966ರ ನವೆಂಬರ್ 1ರಂದು ಅಸ್ತಿತ್ವಕ್ಕೆ ಬಂದ ಹರಿಯಾಣ ರಾಜ್ಯದ ಜನರಿಗೂ ಪ್ರಧಾನಿ ಮೋದಿ ಶುಭಕೋರಿದ್ದಾರೆ. ಸಂಸ್ಕೃತಿ-ಸಂಪ್ರದಾಯ ರಕ್ಷಿಸುವ ಆ ರಾಜ್ಯ ಇನ್ನಷ್ಟು ಎತ್ತರಕ್ಕೇರಲಿ ಎಂದು ಆಶಿಸಿದ್ದಾರೆ.
ಇನ್ನು 1956ರ ನವೆಂಬರ್ 1ರಂದು ರಚಿತಗೊಂಡ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸಂಸ್ಥಾಪನಾ ದಿನಾಚರಣೆಯೂ ಇಂದು ನಡೆಯುತ್ತಿದ್ದು ಅಲ್ಲಿನ ಜನತೆಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಮಧ್ಯಪ್ರದೇಶ ನೈಸರ್ಗಿಕ ಸಂಪನ್ಮೂಲಗಳು ಮತ್ತು ಕಲೆ-ಸಂಸ್ಕೃತಿಯಿಂದ ಸಮೃದ್ಧವಾಗಿದೆ. ಪ್ರಗತಿಯ ಹಾದಿಯಲ್ಲಿ ನಿರಂತರವಾಗಿ ಸಾಗಲಿ ಎಂದಿದ್ದಾರೆ. ಹಾಗೇ, ಆಂಧ್ರಪ್ರದೇಶಕ್ಕೆ ಅಭಿನಂದನೆ ಸಲ್ಲಿಸಿ, ಇಲ್ಲಿನ ಜನರು ಕೌಶಲ, ದೃಢತೆ ಮತ್ತು ಕ್ಷಮತೆಗೆ ಹೆಸರಾದವರು. ಅವರು ಯಾವಾಗಲೂ ಸಂತೋಷದಿಂದ ಆರೋಗ್ಯವಂತರಾಗಿರಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನನಗೆ ದಿನಕ್ಕೆ 50 ಬೆದರಿಕೆ ಕರೆಗಳು ಬರುತ್ತವೆ, ಜನರು ಕರೆ ಮಾಡಿ ನಿಂದಿಸುತ್ತಾರೆ: ಮುನಾವರ್ ಫರೂಕಿ
ಫ್ಯಾನ್ಸ್ಗೆ ಸರ್ಪ್ರೈಸ್ ನೀಡಿದ್ದ ಪುನೀತ್; ಶಾಕ್ಗೆ ಒಳಗಾದ ಅಭಿಮಾನಿಗಳನ್ನು ಅಪ್ಪು ಸಮಾಧಾನ ಮಾಡಿದ ರೀತಿ ನೋಡಿ