ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕೇರಳ ಪ್ರವಾಸ ಏಪ್ರಿಲ್ 24ಕ್ಕೆ ಮರು ನಿಗದಿಯಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಮೊದಲು ಮೋದಿ ಅವರು ಏಪ್ರಿಲ್ 24ರಂದು ಕೇರಳದ (Kerala) ಕೊಚ್ಚಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿತ್ತು. ಕೇರಳದ ಕೊಚ್ಚಿಗೆ ಭೇಟಿ ನೀಡಲಿರುವ ಮೋದಿ, 17ರಿಂದ 35 ವರ್ಷ ವಯಸ್ಸಿನ ಯುವಕರು ಬಾಗವಹಿಸುವ ‘ಯುವಂ’ ಸಮಾವೇಶ ಉದ್ಘಾಟಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಕೊಚ್ಚಿಯ ಸೇಕ್ರೆಡ್ ಹರ್ಟ್ಸ್ ಕಾಲೇಜಿನಲ್ಲಿ ‘ವೈಬ್ರಂಟ್ ಯೂತ್ ಫಾರ್ ಮಾಡಿಫೈಯಿಂಗ್ ಕೇರಳ’ ಆಯೋಜಿಸಿದೆ. ನಂತರ ಕೊಚ್ಚಿಯಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
ಕೇರಳ ಪ್ರವಾಸದ ವೇಳೆ ಮೋದಿ ಅವರು ರಾಜ್ಯಕ್ಕೆ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಘೋಷಣೆ ಮಾಡಲಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ. ಈ ಪೈಕಿ ಒಂದು ವಂದೇ ಭಾರತ್ ರೈಲು ತಿರುವನಂತಪುರದಿಂದ ಕಣ್ಣೂರು ನಡುವೆ ಸಂಚರಿಸಲಿದೆ ಎನ್ನಲಾಗಿದೆ.
ಪ್ರಧಾನಿಯವರ ಕೇರಳ ಭೇಟಿಯು ರಾಜ್ಯದಲ್ಲಿ ಪ್ರಮುಖ ರಾಜಕೀಯ ಬದಲಾವಣೆಗೆ ನಾಂದಿಯಾಗಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಹೇಳಿದ್ದಾರೆ. ಈ ಹಿಂದೆ ಮೋದಿ ಅವರು ಕೇರಳಕ್ಕೆ ಭೇಟಿ ನೀಡಿದ್ದಾಗ ‘ಪೋ ಮೋನೆ ಮೋದಿ (PoMoneModi)’ ಎಂಬ ಆನ್ಲೈನ್ ಅಭಿಯಾನ ನಡೆದಿತ್ತು. ಇದಕ್ಕೆ ವಿರುದ್ಧವಾಗಿ ಈ ಬಾರಿ ಬಿಜೆಪಿಯು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಗಮನ ಸೆಳೆಯುವ ಸಲುವಾಗಿ ‘ನನ್ನಿ ಮೋದಿ (Thank you Modi)’ ಅಭಿಯಾನ ನಡೆಸಲು ಉದ್ದೇಶಿಸಿದೆ ಎಂದು ಸುರೇಂದ್ರನ್ ತಿಳಿಸಿದ್ದಾರೆ.
ಇದನ್ನೂ ಓದಿ: Vande Bharat Express: ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಈ ಮಧ್ಯೆ, ಮೋದಿ ಅವರ ಕೊಚ್ಚಿ ಭೇಟಿ ಸಂದರ್ಭದಲ್ಲೇ ಬೃಹತ್ ಸಮಾವೇಶ ಆಯೋಜಿಸಲು ಸಿಪಿಐ(ಎಂ) ಮುಂದಾಗಿದೆ. ಸಿಪಿಐ(ಎಂ) ಹಾಗೂ ಡಿವೈಎಫ್ಐ ಬ್ಯಾನರ್ ಅಡಿಯಲ್ಲಿ ಯುವ ಸಮಾವೇಶ ನಡೆಯಲಿದೆ ಎಂದು ‘ಮಾತೃಭೂಮಿ’ ಪತ್ರಿಕೆ ವರದಿ ಮಾಡಿದೆ.
ರಾಜಸ್ಥಾನದ ಮೊದಲ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದರು. ನೂತನ ವಂದೇ ಭಾರತ್ ರೈಲು ಅಜ್ಮೇರ್ ಹಾಗೂ ದೆಹಲಿ ಕಂಟೋನ್ಮೆಂಟ್ ಮಧ್ಯೆ 5 ಗಂಟೆ 15 ನಿಮಿಷಗಳ ಅವಧಿಯಲ್ಲಿ ಸಂಚರಿಸಲಿದೆ. ಈ ನಿಲ್ದಾಣಗಳ ನಡುವೆ ಪ್ರಸ್ತುತ ಅತಿವೇಗದಲ್ಲಿ ಚಲಿಸುವ ಶತಾಬ್ಧಿ ಎಕ್ಸ್‌ಪ್ರೆಸ್ 6 ಗಂಟೆ 15 ನಿಮಿಷ ತೆಗೆದುಕೊಳ್ಳುತ್ತಿದೆ. ಇದಕ್ಕಿಂತಲೂ ವಂದೇ ಭಾರತ್ ರೈಲು ಒಂದು ಗಂಟೆ ಕಡಿಮೆ ಅವಧಿಯಲ್ಲಿ ಗಮ್ಯ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಕೆಲವು ದಿನಗಳ ಹಿಂದಷ್ಟೇ ಮೋದಿ ಅವರು ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಸಿಕಂದರಾಬಾದ್ ರೈಲು ನಿಲ್ದಾಣದಿಂದ ಚಾಲನೆ ನೀಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ