PM Security Breach: ಪ್ರಧಾನಿ ಸಂಚರಿಸುತ್ತಿದ್ದ ವಾಹನದ ಬಳಿ ಬಿಜೆಪಿ ಜಿಂದಾಬಾದ್ ಘೋಷಣೆ ಕೂಗಿದ ಬೆಂಬಲಿಗರು

| Updated By: ರಶ್ಮಿ ಕಲ್ಲಕಟ್ಟ

Updated on: Jan 07, 2022 | 7:49 PM

ಬಿಜೆಪಿ ಧ್ವಜವನ್ನು ಹಿಡಿದ ಗುಂಪು ಹೆದ್ದಾರಿಯ ಒಂದು ಬದಿಯಲ್ಲಿದ್ದರೆ ಇನ್ನೊಂದು ಬದಿಯಲ್ಲಿ ಪ್ರಧಾನಿಯವರ  ಕಪ್ಪು ಟೊಯೊಟಾ ಫಾರ್ಚುನರ್ ಕಾರು ನಿಂತಿರುವುದು ಕಾಣಿಸುತ್ತದೆ.

PM Security Breach: ಪ್ರಧಾನಿ ಸಂಚರಿಸುತ್ತಿದ್ದ ವಾಹನದ ಬಳಿ ಬಿಜೆಪಿ ಜಿಂದಾಬಾದ್ ಘೋಷಣೆ ಕೂಗಿದ ಬೆಂಬಲಿಗರು
ಪ್ರಧಾನಿ ಕಾರು ಬಳಿ ಬಿಜೆಿ
Follow us on

ದೆಹಲಿ: ರೈತರ ರಸ್ತೆ ತಡೆಯಿಂದಾಗಿ  ಪಂಜಾಬ್ ಹೆದ್ದಾರಿಯಲ್ಲಿ(Punjab highway) 20 ನಿಮಿಷಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಸಂಚರಿಸುತ್ತಿದ್ದ ವಾಹನ ಸಿಲುಕಿಕೊಂಡ ಎರಡು ದಿನಗಳ ನಂತರ ಹೆದ್ದಾರಿಯಲ್ಲಿ ಸಂಭವಿಸಿದ ಭದ್ರತಾ ಲೋಪ ಬಗ್ಗೆ ವಿಡಿಯೊವೊಂದು ವೈರಲ್ ಆಗಿದೆ. ಕಿಸಾನ್ ಏಕ್ತಾ ಮೋರ್ಚಾ (Kisan Ekta Morcha) ಈ ವಿಡಿಯೊ ಟ್ವೀಟ್ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಕಾರಿನಿಂದ ಕೆಲವೇ ಮೀಟರ್‌ ದೂರದಲ್ಲಿ  ಬಿಜೆಪಿ ಕಾರ್ಯಕರ್ತರ ಗುಂಪು ಘೋಷಣೆ ಕೂಗುತ್ತಿರುವುದು ಕಾಣಿಸುತ್ತದೆ.  ಬಿಜೆಪಿ ಧ್ವಜವನ್ನು ಹಿಡಿದ ಗುಂಪು ಹೆದ್ದಾರಿಯ ಒಂದು ಬದಿಯಲ್ಲಿದ್ದರೆ ಇನ್ನೊಂದು ಬದಿಯಲ್ಲಿ ಪ್ರಧಾನಿಯವರ  ಕಪ್ಪು ಟೊಯೊಟಾ ಫಾರ್ಚುನರ್ ಕಾರು ನಿಂತಿರುವುದು ಕಾಣಿಸುತ್ತದೆ. ಈ  ಗುಂಪು “ಬಿಜೆಪಿ ಜಿಂದಾಬಾದ್” ಎಂದು ಘೋಷಣೆಗಳನ್ನು ಕೂಗುತ್ತಿರುವುದು ಕಾಣಿಸುತ್ತದೆ. ಗಣ್ಯರ ವಿಶೇಷ ರಕ್ಷಣಾ ಗುಂಪು (SPG) ಸಿಬ್ಬಂದಿ ಗುರಾಣಿಯನ್ನು ರೂಪಿಸಿದಾಗ ಕಾರು ನಂತರ ದೂರ ಹೋಗುತ್ತದೆ. ಬುಧವಾರ ಪ್ರಧಾನಿಯವರ ಭದ್ರತೆಯಲ್ಲಿ ಭಾರೀ ಲೋಪವಾಗಿದೆ ಎನ್ನುವುದಕ್ಕೆ ಇದು ಇನ್ನೊಂದು ಉದಾಹರಣೆ ಈ ವಿಡಿಯೊ ಎಂದು  ರೈತರ  ಸಂಘಟನೆ ಹೇಳಿದೆ.

ಪ್ರಧಾನಿಯವರ ಬೆಂಗಾವಲು ವಾಹನದಿಂದ ಸ್ವಲ್ಪ ದೂರದಲ್ಲಿ ರೈತರು ಫ್ಲೈಓವರ್ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿರುವುದನ್ನು ಮತ್ತೊಂದು ವಿಡಿಯೊ ತೋರಿಸುತ್ತದೆ. ಪ್ರತಿಭಟನಾಕಾರರಿಗಿಂತ ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿಯ ಹೆಚ್ಚು ಹತ್ತಿರ ಹೋಗಿದ್ದರು ಎಂದು ರೈತರು ವಾದಿಸುತ್ತಾರೆ.


ಪ್ರಧಾನಿ ಮೋದಿ ಅವರು ಫಿರೋಜ್‌ಪುರದಲ್ಲಿ ರ್ಯಾಲಿಯಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಅವರ ಬೆಂಗಾವಲು ವಾಹನವು ಫ್ಲೈಓವರ್‌ನ ಮಧ್ಯದಲ್ಲಿ ಸಿಲುಕಿತ್ತು. ಇದೇ ರ್ಯಾಲಿಗೆ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರು ಕೂಡ ಸಂಚಾರ ಸ್ಥಗಿತಗೊಂಡಿದ್ದರಿಂದ ಪರದಾಡುವಂತಾಯಿತು. ಪ್ರಧಾನಿಯವರ ಬೆಂಗಾವಲು ಪಡೆ ಕೂಡ ಮೇಲ್ಸೇತುವೆಯಲ್ಲಿದೆ ಎಂದು ತಿಳಿದಾಗ, ಅವರು ಅವರ ಕಾರಿನ ಹತ್ತಿರ ಹೋಗಲು ಪ್ರಯತ್ನಿಸಿದರು ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಪಂಜಾಬ್ ಚುನಾವಣೆಗೆ ಮುನ್ನ, ಬುಧವಾರ ನಡೆದ ಈ ಘಟನೆ ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಪಂಜಾಬ್‌ನ ಆಡಳಿತಾರೂಢ ಕಾಂಗ್ರೆಸ್ ನಡುವಿನ ರಾಜಕೀಯ ಜಗಳವನ್ನು ಹೆಚ್ಚಿಸಿದೆ.

ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳು ಪ್ರತ್ಯೇಕ ವಿಚಾರಣೆಗಳನ್ನು ನಡೆಸುವುದಾಗಿ ಹೇಳಿವೆ.

ಅವರ ಪ್ರಯಾಣದ ವಿವರಗಳ ಬಗ್ಗೆ ಸಾಕಷ್ಟು ಸೂಚನೆ ನೀಡಿದ್ದರೂ ರಾಜ್ಯ ಸರ್ಕಾರ ಮತ್ತು ಪೊಲೀಸರು ಭದ್ರತಾ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದ್ದಾರೆ ಎಂದು ಕೇಂದ್ರ ಆರೋಪಿಸಿದೆ.

ಕೊನೆಯ ಕ್ಷಣದಲ್ಲಿ ಯೋಜನೆ ಬದಲಾವಣೆಯಾಗಿದ್ದು ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಪಂಜಾಬ್ ಸರ್ಕಾರ ಹೇಳಿದೆ. ಪಿಎಂ ಮೋದಿ ಅವರು ಹೆಲಿಕಾಪ್ಟರ್ ಮೂಲಕ ರ್ಯಾಲಿ ಸ್ಥಳಕ್ಕೆ ತೆರಳಬೇಕಿತ್ತು ಆದರೆ ಪ್ರತಿಕೂಲ ಹವಾಮಾನದಿಂದಾಗಿ 111 ಕಿಮೀ ದೂರವನ್ನು ರಸ್ತೆ ಮೂಲಕ ಪ್ರಯಾಣಿಸಲು ನಿರ್ಧರಿಸಿದರು.

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಹಲವು ಸಂವಹನಗಳನ್ನು ನಡೆಸಿದೆ ಮತ್ತು ಪಿಎಂ ಮೋದಿ ಅವರ ರಸ್ತೆ ಮಾರ್ಗವನ್ನು ಪಂಜಾಬ್ ಪೊಲೀಸ್ ಮುಖ್ಯಸ್ಥರು ತೆರವುಗೊಳಿಸಿದ್ದಾರೆ ಎಂದು ಹೇಳಿದ್ದಾರೆ.

ಭದ್ರತಾ ಲೋಪದ ಕುರಿತು ತನಿಖೆ ನಡೆಸುವಂತೆ ಕೋರಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಧಾನಿ ಮೋದಿಯವರ ಪ್ರಯಾಣದ ದಾಖಲೆಗಳನ್ನು ಸಂರಕ್ಷಿಸುವಂತೆ ಮತ್ತು ಸೋಮವಾರದವರೆಗೆ ಎರಡೂ ವಿಚಾರಣೆಗಳನ್ನು ಸದ್ಯಕ್ಕೆ ನಿಲ್ಲಿಸುವಂತೆ ಸೂಚಿಸಿದೆ.

ಇದನ್ನೂ ಓದಿ:  PM Security Breach: ಪ್ರಧಾನಿ ಮೋದಿ ಸಂಚರಿಸುತ್ತಿದ್ದ ವಾಹನ 20 ನಿಮಿಷ ಸಿಕ್ಕಿಹಾಕಿಕೊಂಡ ಫಿರೋಜ್‌ಪುರ ಫ್ಲೈಓವರ್‌ನಲ್ಲಿ ಏನೇನಾಯಿತು?

ಇದನ್ನೂ ಓದಿ: PM Security Breach: ವರದಿ ಸಲ್ಲಿಸಲು ಪಂಜಾಬ್ ಪೊಲೀಸರಿಗೆ ಒಂದು ದಿನ ಗಡುವು ನೀಡಿದ ಕೇಂದ್ರ

 

Published On - 6:57 pm, Fri, 7 January 22