ಅಯೋಧ್ಯೆ ರಾಮ ಮಂದಿರ ದೇಣಿಗೆ ಲೂಟಿ; ಆರೋಪಿಗಳಿಂದ ಹಣ, ಚಿನ್ನ ಜಪ್ತಿ, ವಕಾಲತ್ ವಹಿಸಲು ಒಪ್ಪದ ವಕೀಲರು

ರಾಮ ಮಂದಿರದ ದೇಣಿಗೆ ಕಳ್ಳತನದ ಸುದ್ದಿ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನೀಡಲಾದ ಹಣದ ದುರುಪಯೋಗದ ಬಗ್ಗೆ ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ವಿಶೇಷ ತನಿಖಾ ತಂಡ (SIT) ಉತ್ತರ ಪ್ರದೇಶ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಗಂಭೀರ ಅಕ್ರಮಗಳನ್ನು ಎತ್ತಿ ತೋರಿಸಿದ ನಂತರ ಈ ಪ್ರಕರಣದಲ್ಲಿ ಈಗಾಗಲೇ 8 ಜನರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ, ರಾಮ ಮಂದಿರದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಕಳೆದ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅಯೋಧ್ಯೆ ರಾಮ ಮಂದಿರ ದೇಣಿಗೆ ಲೂಟಿ; ಆರೋಪಿಗಳಿಂದ ಹಣ, ಚಿನ್ನ ಜಪ್ತಿ, ವಕಾಲತ್ ವಹಿಸಲು ಒಪ್ಪದ ವಕೀಲರು
Ram Temple
Image Credit source: TV9

Updated on: Jun 28, 2026 | 10:55 PM

ಅಯೋಧ್ಯೆ, ಜೂನ್ 28: ಅಯೋಧ್ಯೆಯ ರಾಮ ಮಂದಿರದ (Ram Mandir) ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉತ್ತರ ಪ್ರದೇಶ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದ ಎಲ್ಲಾ 8 ಮಂದಿ ಆರೋಪಿಗಳಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿರುವ ಪೊಲೀಸರು, ಅಪಾರ ಪ್ರಮಾಣದ ನಗದು, ಚಿನ್ನಾಭರಣ ಹಾಗೂ ಆಸ್ತಿಗೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಯೋಧ್ಯೆಯ ಭದ್ರತಾ ಪಡೆಗಳ ಮಾಹಿತಿ ಪ್ರಕಾರ, ಶಂಕಿತರೆಲ್ಲರ ಮನೆಗಳ ಮೇಲೂ ಏಕಕಾಲದಲ್ಲಿ ಈ ದಾಳಿ ನಡೆದಿದೆ. ಟೀನು ಎಂದು ಗುರುತಿಸಲಾದ ಪ್ರಮುಖ ಆರೋಪಿಯೊಬ್ಬನಿಂದ ಚಿನ್ನದ ಒಡವೆಗಳು ಹಾಗೂ ಕೆಲವು ಪ್ರಮುಖ ಕಾಗದಪತ್ರಗಳನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಉಳಿದ ಆರೋಪಿಗಳ ಮನೆಗಳಿಂದಲೂ ಇದೇ ರೀತಿಯ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಶೋಧ ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ಆರೋಪಿಗಳ ಕುಟುಂಬಸ್ಥರ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶೌಚಾಲಯದಲ್ಲಿ ಹಣದ ರಾಶಿ, ಭಕ್ತರು ರಾಮಲಲ್ಲಾಗೆ ನೀಡಿದ್ದ ಚಿನ್ನವೂ ಕಳವು; ರಾಮ ಮಂದಿರ ದೇಣಿಗೆ ಕಳ್ಳತನದ ಮಾಹಿತಿ ಬಯಲು

ಕೋರ್ಟ್ ಎಲ್ಲಾ ಎಂಟು ಮಂದಿ ಆರೋಪಿಗಳನ್ನು ಜೂನ್ 29ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಎರಡು ದಿನಗಳ ನಂತರ ಈ ಶೋಧ ಕಾರ್ಯಗಳು ನಡೆದಿವೆ. ಸೋಮವಾರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಪೊಲೀಸರು ಅವರನ್ನು ತಮ್ಮ ಕಸ್ಟಡಿಗೆ (ವಿಚಾರಣೆಗೆ) ನೀಡುವಂತೆ ಕೋರುವ ಸಾಧ್ಯತೆಯಿದೆ.

ಆರೋಪಿಗಳಿಗೆ ವಕೀಲರೇ ಸಿಗುತ್ತಿಲ್ಲ;

ಮತ್ತೊಂದೆಡೆ, ಈ ಕಳ್ಳತನ ಪ್ರಕರಣದ ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ವಕಾಲತ್ತು ವಹಿಸಲು ಅಯೋಧ್ಯೆಯ ವಕೀಲರ ಸಮುದಾಯವು ತೀವ್ರ ಹಿಂಜರಿಕೆ ವ್ಯಕ್ತಪಡಿಸಿದೆ. ಸೋಮವಾರ ನಡೆಯಲಿರುವ ‘ಫೈಜಾಬಾದ್ ಬಾರ್ ಅಸೋಸಿಯೇಷನ್’ನ ಸಾಮಾನ್ಯ ಸಭೆಯಲ್ಲಿ ಈ ಕುರಿತು ಸಾಮೂಹಿಕ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಸ್ಥಳೀಯ ನ್ಯಾಯವಾದಿಗಳು ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ನಂಬಿಕೆಯೊಂದಿಗೆ ಆಟವಾಡುವುದನ್ನು ಒಪ್ಪಲಾಗದು; ರಾಮ ಮಂದಿರದ ದೇಣಿಗೆ ಕಳ್ಳತನದ ಕುರಿತು ಸಿಎಂ ಯೋಗಿ ಆಕ್ರೋಶ

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಬಂದಿರುವ ದೇಣಿಗೆಗಳ ನಿರ್ವಹಣೆಯಲ್ಲಿ ನಡೆದಿರುವ ಆಪಾದಿತ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಸ್ತಾಪವಾಗಲಿದೆ. ಅರ್ಜಿದಾರರ ಪರ ವಕೀಲ ಅಜಯ್ ಕುಮಾರ್ ರೈ ಅವರು ಈ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us