ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್ನಲ್ಲಿ ಶ್ರದ್ಧಾ ವಾಕರ್ ಕೊಲೆ ಆರೋಪಿ ಅಫ್ತಾಬ್ ಪೂನಾವಾಲಾ ಇದ್ದಾನೆ ಎನ್ನುವ ಮಾಹಿತಿ ಮುಂಬೈ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಅಫ್ತಾಬ್ ಪೂನಾವಾಲಾ ಎಂಬಾತ ತನ್ನ ಲಿವ್-ಇನ್ ಸಂಗಾತಿಯನ್ನು ಕೊಲೆ ಮಾಡಿ ಫ್ರಿಡ್ಜ್ನಲ್ಲಿರಿಸಿ ಬಳಿಕ ದೆಹಲಿಯ ಬೇರೆ ಬೇರೆ ಭಾಗಗಳಲ್ಲಿ ದೇಹದ ಭಾಗಗಳನ್ನು ವಿಲೇವಾರಿ ಮಾಡಿದ್ದ ಈ ಘಟನೆ 2022ರಲ್ಲಿ ನಡೆದಿತ್ತು.
ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಹತ್ಯೆಯ ತನಿಖೆಯ ಸಮಯದಲ್ಲಿ ಅಫ್ತಾಬ್ ಪೂನಾವಾಲಾ ಬಿಷ್ಣೋಯ್ ಶೂಟರ್ಗಳ ಹಿಟ್ಲಿಸ್ಟ್ನಲ್ಲಿರುವುದು ತಿಳಿದುಬಂದಿದೆ. ಈ ಮಾಹಿತಿಯ ಹಿನ್ನೆಲೆಯಲ್ಲಿ, ಪ್ರಸ್ತುತ ಪೂನಾವಾಲಾ ಅವರನ್ನು ಬಂಧಿಸಿರುವ ತಿಹಾರ್ ಜೈಲಿನ ಆಡಳಿತವು ಆರೋಪಿಗಳ ಸುತ್ತ ಭದ್ರತೆಯನ್ನು ಹೆಚ್ಚಿಸಿದೆ ಎಂದು ವರದಿಯಾಗಿದೆ.
ಆದರೆ, ಮುಂಬೈ ಪೊಲೀಸರಿಂದ ತಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 2022 ರಲ್ಲಿ, ಅಫ್ತಾಬ್ ಪೂನಾವಾಲಾ ದೆಹಲಿಯಲ್ಲಿ ಶ್ರದ್ಧಾ ವಾಲ್ಕರ್ (27) ಳನ್ನು ಕತ್ತು ಹಿಸುಕಿ, ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದ.
ಮತ್ತಷ್ಟು ಓದಿ: Shraddha Walker: ಶ್ರದ್ಧಾ ವಾಕರ್ ಹತ್ಯೆ ಪ್ರಕರಣ: ಅಫ್ತಾಬ್ ಪೂನಾವಾಲಾ ಮೇಲೆ ಕೊಲೆ, ಸಾಕ್ಷ್ಯ ನಾಶ ಆರೋಪ ಹೊರಿಸಿದ ದೆಹಲಿ ಕೋರ್ಟ್
ಶ್ರದ್ಧಾ ಅವರು ಮದುವೆಯಾಗುವಂತೆ ಒತ್ತಡ ಹೇರಿದ್ದರಿಂದ ಈ ಕೃತ್ಯವೆಸಗಿರುವುದಾಗಿ ಹೇಳಿದ್ದ. ಪೂನಾವಾಲಾ ಅವರು ಶ್ರದ್ಧಾ ಅವರ ದೇಹದ ಭಾಗಗಳನ್ನು ದೆಹಲಿಯ ಮೆಹ್ರೌಲಿ ಅರಣ್ಯದಲ್ಲಿ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡುವ ಮೊದಲು ರೆಫ್ರಿಜರೇಟರ್‌ನಲ್ಲಿ ಸುಮಾರು 20 ದಿನಗಳ ಕಾಲ ಇರಿಸಿದ್ದ.
ನವೆಂಬರ್ 2022 ರಲ್ಲಿ ಶ್ರದ್ಧಾ ಅವರ ತಂದೆ ಮಗಳು ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ