ಕೋಲ್ಕತ್ತಾ: ಬಿಜೆಪಿ ಪಶ್ಚಿಮ ಬಂಗಾಳ ರಾಜ್ಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹುಮ್ಮಸ್ಸಿನಲ್ಲಿದೆ. ಇದಕ್ಕಾಗಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ 2 ದಿನಗಳ ಭೇಟಿ ನೀಡಲಿದ್ದು, ಬೃಹತ್ ರೋಡ್ ಶೋ ಆಯೋಜಿಸಲಾಗುತ್ತಿದೆ. ಶನಿವಾರದಂದು ರಾಜ್ಯಕ್ಕೆ ಆಗಮಿಸಲಿರುವ ಅಮಿತ್ ಶಾ ಬಿರ್ಭೂಮ್ ಪ್ರದೇಶದಲ್ಲಿ ರೋಡ್ ಶೋ ನಡೆಸಲಿದ್ದು, ಮಿಡ್ನಾಪುರ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಪಶ್ಚಿಮ ಬಂಗಾಳದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಗುರುವಾರವಷ್ಟೇ ತೃಣಮೂಲ ಕಾಂಗ್ರೆಸ್ ತೊರೆದಿರುವ ಬಂಗಾಳದ ಮಾಜಿ ಸಚಿವ ಸುವೇಂದು ಅಧಿಕಾರಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸುವೇಂದು ಅಧಿಕಾರಿಯ ಸ್ವಕ್ಷೇತ್ರ ಮಿಡ್ನಾಪುರದಲ್ಲಿಯೇ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮ ಇರಲಿದೆ ಎಂದು ವರದಿಯಾಗಿದೆ.
ಈ ಮೂಲಕ ಬಿಜೆಪಿಗೆ ಹೊಸ ನಾಯಕನನ್ನು ಕರೆತರುವ ಪ್ರಯತ್ನ ನಡೆಸಲಾಗುತ್ತಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 200 ಸ್ಥಾನ ಗೆಲ್ಲುವ ಗುರಿಯನ್ನು ರಾಜ್ಯ ನಾಯಕರಿಗೆ ನೀಡಲಾಗಿದೆ. ರೋಡ್ ಶೋ ನಂತರ ಅಮಿತ್ ಶಾ 1921ರಲ್ಲಿ ರವೀಂದ್ರನಾಥ ಠಾಗೋರ್ ಸ್ಥಾಪಿಸಿದ ವಿಶ್ವ ಭಾರತಿ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಲಿದ್ದಾರೆ.
ಪರಕೀಯರ ಪಕ್ಷಕ್ಕೆ ಪಶ್ಚಿಮ ಬಂಗಾಳದಲ್ಲಿ ಜಾಗವಿಲ್ಲ
ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿಯ ಬಗ್ಗೆ ಸದಾ ಕಿಡಿಕಾರುತ್ತಿರುವ ಮಮತಾ ಬ್ಯಾನರ್ಜಿ, ಬಿಜೆಪಿಯನ್ನು ಪರಕೀಯರ ಪಕ್ಷ ಎಂದು ಛೇಡಿಸಿದ್ದಾರೆ. ಬಂಗಾಳದಲ್ಲಿ ಬಿಜೆಪಿ ನೆಲೆಕಾಣುವುದು ಅಸಾಧ್ಯ. ಇಲ್ಲಿನ ಸಾಂಸ್ಕೃತಿಕ ಹಿನ್ನೆಲೆ ಮತ್ತು ಇತಿಹಾಸದ ಬಗ್ಗೆ ಅರಿವಿಲ್ಲದ ಬಿಜೆಪಿ ಯಾವ ಮಟ್ಟಕ್ಕಾದರೂ ಇಳಿಯಲು ಸಿದ್ಧವಿದೆ. ಆದರೆ, ನಾವು ಅದಕ್ಕೆ ಆಸ್ಪದ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ಧಾರೆ.
‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತರೆ ಮಮತಾ ಬ್ಯಾನರ್ಜಿಯ ಹತ್ಯೆ ಆದೀತು‘