ಭಾರತದ ಸಂಸ್ಕೃತಿ ಪರಂಪರೆಯಲ್ಲೂ ಧರ್ಮದ ವಿಚಾರ ಎತ್ತುವ ಕಪಿಲ್ ಸಿಬಲ್ ಅವರಿಂದ ಬಿಜೆಪಿ ಪಾಠ ಕಲಿಯಬೇಕಿಲ್ಲ -ಪ್ರಲ್ಹಾದ್ ಜೋಶಿ ತಿರುಗೇಟು

| Updated By: ಆಯೇಷಾ ಬಾನು

Updated on: May 31, 2023 | 9:12 AM

ಕಪಿಲ್ ಸಿಬಲ್ ಈ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಅಮಾಯಕ ರಾಮಭಕ್ತರನ್ನು ಧಾರ್ಮಿಕ ದ್ವೇಷದಿಂದ ಹತ್ಯೆಗೈದ ಸಮಾಜವಾದಿ ಪಕ್ಷದ ಜೊತೆ ಸೇರಿರುವ ನಿಮ್ಮಂತಹವರಿಂದ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ ಎಂದಿದ್ದಾರೆ.

ಭಾರತದ ಸಂಸ್ಕೃತಿ ಪರಂಪರೆಯಲ್ಲೂ ಧರ್ಮದ ವಿಚಾರ ಎತ್ತುವ ಕಪಿಲ್ ಸಿಬಲ್ ಅವರಿಂದ ಬಿಜೆಪಿ ಪಾಠ ಕಲಿಯಬೇಕಿಲ್ಲ -ಪ್ರಲ್ಹಾದ್ ಜೋಶಿ ತಿರುಗೇಟು
ಪ್ರಲ್ಹಾದ್ ಜೋಶಿ, ಕಪಿಲ್ ಸಿಬಲ್
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಕಾಲದಲ್ಲಿ ನೂತನ ಸಂಸತ್ ಭವನ(New Parliament Building) ನಿರ್ಮಾಣವಾದದ್ದನ್ನು ಸಹಿಸದೇ ಕಾಂಗ್ರೆಸ್ ಪಕ್ಷ ಹೊಟ್ಟೆ‌ ಉರಿ ಪಡುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ವಾಗ್ದಾಳಿ ನಡೆಸಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆಯಲ್ಲಿ ಪ್ರಧಾನಿ ಮೋದಿಯವರು‌ ಮಾಡಿದ ಭಾಷಣ ಟೀಕಿಸಿ ಟ್ವೀಟ್ ಮಾಡಿದ್ದ ಕಪಿಲ್ ಸಿಬಲ್ ಗೆ(kapil sibal) ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಪಿಲ್ ಸಿಬಲ್ ಅವರು ಭಾರತದ ಸಂಸ್ಕೃತಿ ಪರಂಪರೆಯನ್ನ ಬಿಂಬಿಸುವ ಸಂಸತ್ ಭವನ ಕಾರ್ಯಕ್ರಮದಲ್ಲೂ ಧರ್ಮವನ್ನು ಎಳೆತಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿ ಜೋಶಿಯವರು ಟ್ವೀಟ್ ಮಾಡಿದ್ದಾರೆ.

ಸಂಸತ್ ಭವನ ಉದ್ಘಾಟನೆ ಸಂದರ್ಭದಲ್ಲಿ ಹೊಸ ಭಾರತಕ್ಕಾಗಿ ಹೊಸ ಸಂಸತ್ ಭವನ ಎಂದು ಪ್ರಧಾನಿ ಮೋದಿ ಹೇಳಿದ್ದರು. ಮೋದಿ ಅವರ ಹೇಳಿಕೆ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಕಪಿಲ್ ಸಿಬಲ್ ನಮಗೆ ಬೇಕಿರುವುದು ಹೊಸ ಅಥವಾ ಹಳೆಯ ಭಾರತವಲ್ಲ, ಧಾರ್ಮಿಕ ಪ್ರಕ್ರಿಯೆಗಳಿಂದ ಹೊರತಾದ ಸಂಸತ್ ಬೇಕು. ಎಲ್ಲರನ್ನೂ ಸಮಾನವಾಗಿ ನೋಡುವ ಕಾನೂನು ಇರಬೇಕು, ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಹತ್ಯೆ ನಡೆಯದಂತಹ ಭಾರತ ಬೇಕು ಎಂದಿದ್ದರು.

ಕಪಿಲ್ ಸಿಬಲ್ ಈ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಅಮಾಯಕ ರಾಮಭಕ್ತರನ್ನು ಧಾರ್ಮಿಕ ದ್ವೇಷದಿಂದ ಹತ್ಯೆಗೈದ ಸಮಾಜವಾದಿ ಪಕ್ಷದ ಜೊತೆ ಸೇರಿರುವ ನಿಮ್ಮಂತಹವರಿಂದ ಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ. ಶಾಬಾನೊ ಪ್ರಕರಣದಲ್ಲಿ ಮುಸ್ಲಿಂ ಮಹಿಳೆಯರ ಹೋರಾಟವನ್ನು ಹತ್ತಿಕ್ಕಲು ಅಂದಿನ ನಿಮ್ಮ ಸರಕಾರ ಯಾವ ರೀತಿ ಪ್ರಯತ್ನಿಸಿತ್ತು ನೆನಪಿಸಿಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ​​ಪ್ರಣಾಳಿಕೆಯಲ್ಲಿರುವ ಬಜರಂಗದಳ ಬ್ಯಾನ್ ಅಂಶವನ್ನು ಕ್ಯಾನ್ಸಲ್ ಮಾಡೋದಾದ್ರೆ ಮೊದಲು ಕ್ಷಮೆ ಕೇಳಲಿ – ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಗುಡುಗು

ಭಾರತದ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ಸಂಸತ್ ಭವನದ ವಿಚಾರದಲ್ಲೂ “ಧರ್ಮ” ಹುಡುಕುವ ಮೊದಲು, ಧರ್ಮ ಎಂಬುದು ಜೀವನದ ಒಂದು ಅವಿಭಾಜ್ಯ ಅಂಗವೇ ಹೊರತು ಕೇವಲ ಪೂಜಾ ಪದ್ಧತಿ ಅಲ್ಲ ಎಂಬ ಸತ್ಯವನ್ನ ಸಿಬಲ್ ಅವರು ಅರ್ಥಮಾಡಿಕೊಳ್ಳಲಿ. ಎಲ್ಲಾ ಧರ್ಮಗಳ ಧಾರ್ಮಿಕ ಪಾರ್ಥನೆಯೊಂದಿಗೆ ನೂತನ ಸಂಸತ್ ಭವನ ಲೋಕಾರ್ಪಣೆಗೊಂಡಿದ್ದು ಕಂಡಿಲ್ಲವೇ? ಎಂದು ಸಿಬಲ್ ಅವರನ್ನ ಜೋಶಿ ಪ್ರಶ್ನಿಸಿದ್ದಾರೆ.

ಈ ಆತ್ಮನಿರ್ಭರ ಭಾರತದ ಅಡಿಯಲ್ಲಿ ನಿರ್ಮಿಸಲಾದ ಸಂಸತ್ ಭವನ ಕಂಡಾಗ ನಿಮ್ಮಂತವರಿಗೆ ಉರಿ ಎದ್ದಿರುವುದು ಸಹಜ. ಭಾರತದಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿರಬೇಕು, ಅದುವೇ ನಮ್ಮ ಧ್ಯೇಯ ಎಂದು ಜೋಶಿ ಟ್ವಿಟರ್ ನಲ್ಲಿ ಕಪಿಲ್ ಸಿಬಲ್ ಅವರ ಟೀಕೆಯ ಪ್ರತಿ ಸಾಲಿಗೂ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.

ಕರ್ನಾಟಕ ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ