ನಾಚಿಕೆಯ ಸಂಗತಿ; ಪಿಎಂ ಮೋದಿಯ ಪಾದ ಮುಟ್ಟಿದ್ದಕ್ಕೆ ನಿತೀಶ್ ಕುಮಾರ್ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ

|

Updated on: Jun 15, 2024 | 11:44 AM

ಕಳೆದ ವಾರ ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾದಗಳನ್ನು ಮುಟ್ಟಿದ್ದಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ವಾಗ್ದಾಳಿ ನಡೆಸಿದ್ದಾರೆ. ನಿತೀಶ್ ಕುಮಾರ್ 'ತಮ್ಮ ಆತ್ಮಸಾಕ್ಷಿಯನ್ನು ಮಾರಾಟಕ್ಕೆ ಇಟ್ಟಿದ್ದಾರೆ' ಎಂದು ಆರೋಪಿಸಿದ್ದಾರೆ.

ನಾಚಿಕೆಯ ಸಂಗತಿ; ಪಿಎಂ ಮೋದಿಯ ಪಾದ ಮುಟ್ಟಿದ್ದಕ್ಕೆ ನಿತೀಶ್ ಕುಮಾರ್ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ
ಮೋದಿಯವರ ಪಾದ ಮುಟ್ಟಿದ ನಿತೀಶ್ ಕುಮಾರ್
Follow us on

ನವದೆಹಲಿ: ಎನ್​ಡಿಎ ಸರ್ಕಾರ (NDA Government) ರಚನೆ ಮಾಡುವ ಹಿನ್ನೆಲೆಯಲ್ಲಿ ಬಿಹಾರದ ಮುಖ್ಯಮಂತ್ರಿ ಮತ್ತು ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಕಳೆದ ವಾರ ನರೇಂದ್ರ ಮೋದಿ (Narendra Modi) ಅವರನ್ನು ಲೋಕಸಭೆಯ ನಾಯಕರಾಗಿ ಹೆಸರಿಸುವ ಪ್ರಸ್ತಾಪವನ್ನು ಬೆಂಬಲಿಸಿದ್ದರು. ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರ ಮೋದಿ ಅವರ ಹೆಸರನ್ನು ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಎಚ್‌ಡಿ ಕುಮಾರಸ್ವಾಮಿ, ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್ ಸೇರಿದಂತೆ ಎಲ್ಲಾ ಪ್ರಮುಖ ನಾಯಕರು ಬೆಂಬಲಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿಯವರ ಹೆಸರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಎದ್ದ ನಿತೀಶ್ ಕುಮಾರ್ ಅವರಿಗೆ ಮೋದಿ ತಮ್ಮ ಎದುರಿನಿಂದ ಹಾದುಹೋಗಲು ದಾರಿ ಮಾಡಿಕೊಟ್ಟರು. ಆಗ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ ನಂತರ ಮೋದಿಯವರ ಪಾದಗಳನ್ನು ಸ್ಪರ್ಶಿಸಲು ಬಗ್ಗಿದರು. ಅದಕ್ಕೆ ಬೇಡವೆಂದ ನರೇಂದ್ರ ಮೋದಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತಬ್ಬಿಕೊಂಡು, ಕೈ ಕುಲುಕಿದ್ದರು.

ನಿತೀಶ್ ಕುಮಾರ್ ಪ್ರಧಾನಿ ಮೋದಿ ಅವರ ಕಾಲಿಗೆ ಬೀಳಲು ಪ್ರಯತ್ನಿಸಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಿಹಾರದ ಸಿಎಂ ನಿತೀಶ್ ಕುಮಾರ್ ಅವರು ಅಧಿಕಾರದಲ್ಲಿ ತಮ್ಮ ಸ್ವಾರ್ಥಕ್ಕೆ ಏನು ಬೇಕಾದರೂ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಆರೋಪಿಸಿದ್ದಾರೆ. ಇದು ಬಿಹಾರದ ಜನತೆಗೆ ನಾಚಿಕೆಗೇಡಿನ ಸಂಗತಿ ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ಕಾಲಿಗೆ ಬೀಳಲು ಬಂದ ನಿತೀಶ್​ ಕುಮಾರ್​ಗೆ ಪಿಎಂ ನರೇಂದ್ರ ಮೋದಿ ಮಾಡಿದ್ದೇನು?

‘ಜನ್ ಸುರಾಜ್’ ಅಭಿಯಾನವನ್ನು ನಡೆಸುತ್ತಿರುವ ಪ್ರಶಾಂತ್ ಕಿಶೋರ್ ಶುಕ್ರವಾರ ಭಾಗಲ್ಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. “ಈ ಹಿಂದೆ ನಿತೀಶ್ ಕುಮಾರ್ ಅವರೊಂದಿಗೆ ಕೆಲಸ ಮಾಡಿದ ನಾನು ಈಗ ಏಕೆ ಟೀಕಿಸುತ್ತಿದ್ದೇನೆ ಎಂದು ಜನರು ನನ್ನನ್ನು ಕೇಳುತ್ತಾರೆ. ಅವರು ಆಗ ವಿಭಿನ್ನ ವ್ಯಕ್ತಿಯಾಗಿದ್ದರು. ಅವರ ಆತ್ಮಸಾಕ್ಷಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

“ರಾಜ್ಯದ ನಾಯಕ ಎಂದರೆ ಅವರು ಜನರ ಹೆಮ್ಮೆ. ಆದರೆ ನಿತೀಶ್ ಕುಮಾರ್ ಪ್ರಧಾನಿ ಮೋದಿಯ ಪಾದಗಳನ್ನು ಮುಟ್ಟುವ ಮೂಲಕ ಬಿಹಾರಕ್ಕೆ ಅವಮಾನ ಮಾಡಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಭರ್ಜರಿ ಜಯ ಸಿಗಲಿದೆ ಎಂದು ತಪ್ಪಾಗಿ ಭವಿಷ್ಯ ನುಡಿದಿದ್ದ ಪ್ರಶಾಂತ್ ಕಿಶೋರ್, ಅಧಿಕಾರದಲ್ಲಿ ಉಳಿಯಲು ನಿತೀಶ್ ಕುಮಾರ್ ಮೋದಿ ಅವರ ಪಾದ ಮುಟ್ಟಿದ್ದಾರೆ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಜೆಡಿಯು 12 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ನಿತೀಶ್ ಕುಮಾರ್ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದ್ದಾರೆ. ಕೇವಲ 240 ಲೋಕಸಭಾ ಸ್ಥಾನಗಳನ್ನು ಗೆಲ್ಲಬಲ್ಲ ಬಿಜೆಪಿ, ಸಂಸತ್ತಿನ ಕೆಳಮನೆಯಲ್ಲಿ ಬಹುಮತಕ್ಕಾಗಿ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಮತ್ತು ಏಕನಾಥ್ ಶಿಂಧೆ ಅವರ ಬೆಂಬಲವನ್ನು ಅವಲಂಬಿಸಿತ್ತು.

ಇದನ್ನೂ ಓದಿ: ‘ನಿರುದ್ಯೋಗ ಭತ್ಯೆ’ ನೀಡುವುದಾಗಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಘೋಷಣೆ

“ಮೋದಿ ಅಧಿಕಾರಕ್ಕೆ ಮರಳುವಲ್ಲಿ ನಿತೀಶ್ ಕುಮಾರ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತು. ಆದರೆ, ಬಿಹಾರ ಸಿಎಂ ತಮ್ಮ ಸ್ಥಾನವನ್ನು ಹೇಗೆ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ? ಅವರು ರಾಜ್ಯಕ್ಕೆ ಲಾಭವನ್ನು ಮಾಡಿಕೊಳ್ಳಲು ತಮ್ಮ ಪ್ರಭಾವವನ್ನು ಬಳಸುತ್ತಿಲ್ಲ. ಅದರ ಬದಲು ಅವರು ಮೋದಿಯ ಪಾದಗಳನ್ನು ಮುಟ್ಟುತ್ತಿದ್ದಾರೆ. 2025ರ ವಿಧಾನಸಭಾ ಚುನಾವಣೆಯ ನಂತರವೂ ಬಿಜೆಪಿ ಬೆಂಬಲದೊಂದಿಗೆ ಅಧಿಕಾರದಲ್ಲಿ ಉಳಿಯುತ್ತದೆ” ಎಂದು ಕಿಶೋರ್ ಹೇಳಿದ್ದಾರೆ.

ಎನ್‌ಡಿಎ ಸಭೆಯಲ್ಲಿ ನಿತೀಶ್ ಕುಮಾರ್ ಎರಡನೇ ಬಾರಿಗೆ ಸಾರ್ವಜನಿಕವಾಗಿ ಮೋದಿಯವರ ಪಾದ ಮುಟ್ಟಿದರು. ಬಿಹಾರದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಅವರ ಪಾದಗಳನ್ನು ಮುಟ್ಟಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ