ಎಎಮ್ಯು ಶತಮಾನೋತ್ಸವ ಆಚರಣೆಯಲ್ಲಿ ರಾಷ್ಟ್ರಪತಿಗಳು ಭಾಗಿಯಾಗುವ ಸಾಧ್ಯತೆ
ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ ಈ ವರ್ಷ ತನ್ನ ಸಂಸ್ಥಾಪನೆಯ ಶತಮಾನೋತ್ಸವ ಆಚರಿಸಿಕೊಳ್ಳಲಿದೆ. ಸದರಿ ಆಚರಣೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆನ್ಲೈನ್ ಮೂಲಕ ಭಾಗಿಯಾಗುವ ನಿರೀಕ್ಷೆಯಿದೆಯೆಂದು ಉಪಕುಲಪತಿಗಳು ತಿಳಿಸಿದ್ದಾರೆ
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆಯಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಭಾಗಿಯಾಗಲಿರುವ ಸಾಧ್ಯತೆಯಿದೆ ಎಂದು ವಿಶ್ವವಿದ್ಯಾಲಯದ ಉಪಕುಲಪತಿ ತಾರಿಖ್ ಮನ್ಸೂರ್ ಹೇಳಿದ್ದಾರೆ. ಆಚರಣೆಯ ದಿನಾಂಕವನ್ನು ಇಷ್ಟರಲ್ಲೇ ನಿಗದಿಪಡಿಸಲಾಗುವುದೆಂದು ಅವರು ಎಎಮ್ಯು ಸಮುದಾಯಕ್ಕೆ ಬರೆದಿರುವ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.
1920, ಡಿಸೆಂಬರ್ 1ರಂದು ಆಗಿನ ಬ್ರಿಟಿಷ್ ಸರ್ಕಾರ ಎಎಮ್ಯು ಸ್ಥಾಪನೆ ಬಗ್ಗೆ ಗೆಜೆಟ್ ಅಧಿಸೂಚನೆ ಹೊರಡಿಸಿತ್ತೆಂದು ಮನ್ಸೂರ್ ಪತ್ರದಲ್ಲಿ ತಿಳಿಸಿದ್ದಾರೆ. ಅಸಲಿಗೆ, ಶತಮಾನೋತ್ಸವದ ಅಂಗವಾಗಿ ಒಂದು ತಿಂಗಳು ಅವಧಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಆದರೆ ಕೊವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಯಿತೆಂದು ಅವರು ಹೇಳಿದ್ದಾರೆ.
ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತಾಡಿದ ವಿಶ್ವವಿದ್ಯಾಲಯದ ಬಾತ್ಮೀದಾರ ರಾಹತ್ ಆಬ್ರಾರ್, ಎಎಮ್ಯುನ 100 ವರ್ಷಗಳ ಇತಿಹಾಸ ಚಿತ್ರಿತಗೊಂಡಿರುವ ಕಾಫಿ ಟೇಬಲ್ ಪುಸ್ತಕವೊಂದರ ಆನ್ನೈನ್ ಬಿಡುಗಡೆ ಆಚರಣೆಯ ಭಾಗವಾಗಿದೆ ಎಂದು ಹೇಳಿದರು.