ಚಿನ್ನ ಖರೀದಿ ಮಾಡೋರಿಗೆ ಗುಡ್ ನ್ಯೂಸ್; ಐತಿಹಾಸಿಕ ಕುಸಿತ ಕಂಡ ಆಭರಣ ಬೆಲೆ
ಸೋಮವಾರ ಆಭರಣ ಚಿನ್ನ 10 ಗ್ರಾಂಗೆ 142 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ದರ 47,483 ರೂಪಾಯಿ ಆಗಿದೆ. ಇನ್ನು ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಇಳಿಕೆ ಹಾದಿ ಹಿಡಿದಿದೆ.
ಬೆಂಗಳೂರು: ಕೊರೋನಾ ವೈರಸ್ ದೇಶಕ್ಕೆ ಕಾಲಿಟ್ಟಾಗಿನಿಂದಲೂ ಚಿನ್ನ ದರ ಏರಿಕೆ ಹಾದಿ ಹಿಡಿದಿತ್ತು. ಈಗ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿರುವ ಜೊತೆ ಜೊತೆಗೇ ಚಿನ್ನದ ಬೆಲೆ ಕೂಡ ಕಡಿಮೆ ಆಗುತ್ತಿದೆ. ಇದು, ಆಭರಣ ಪ್ರಿಯರಿಗೆ ಖುಷಿ ನೀಡಿದೆ.
ಕೊರೋನಾ ವೈರಸ್ ದೇಶಕ್ಕೆ ಕಾಲಿಡುವುದಕ್ಕೂ ಮೊದಲು ಚಿನ್ನದ ದರ 10 ಗ್ರಾಂಗೆ 35-40 ಸಾವಿರದ ಆಸುಪಾಸಿನಲ್ಲಿತ್ತು. ಆದರೆ, ಕೊರೋನಾ ವೈರಸ್ ಹಾವಳಿ ದೇಶದಲ್ಲಿ ಹೆಚ್ಚುತ್ತಿದ್ದಂತೆ ಚಿನ್ನದ ದರ ಕೂಡ ಗಗನಕ್ಕೇರಿತ್ತು. ಆಗಸ್ಟ್ ತಿಂಗಳಲ್ಲಿ ಶುದ್ಧ ಚಿನ್ನ 10 ಗ್ರಾಂಗೆ 57 ಸಾವಿರ ರೂಪಾಯಿ ಆಗಿತ್ತು. ನಂತರ ನಿಧಾನವಾಗಿ ಆಭರಣದ ಬೆಲೆ ಕುಸಿತ ಕಾಣುತ್ತಿದೆ. ಈಗ ದೆಹಲಿಯಲ್ಲಿ ಶುದ್ಧ ಚಿನ್ನದ ಬೆಲೆ 50 ಸಾವಿರದ ಆಸುಪಾಸಿನಲ್ಲಿದೆ. ಕಳೆದ ಮೂರು ವಾರಗಳಲ್ಲಿ ಆಭರಣದ ದರ ಕುಸಿತ ಕಂಡಿದ್ದು ಬರೋಬ್ಬರಿ 4000 ರೂಪಾಯಿ ಅನ್ನೋದು ವಿಶೇಷ.
ಸೋಮವಾರ ಆಭರಣ ಚಿನ್ನ 10 ಗ್ರಾಂಗೆ 142 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ದರ 47,483 ರೂಪಾಯಿ ಆಗಿದೆ. ಇನ್ನು ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಇಳಿಕೆ ಹಾದಿ ಹಿಡಿದಿದೆ. ಆಗಸ್ಟ್ ತಿಂಗಳಲ್ಲಿ ಬೆಳ್ಳಿ ದರ ಒಂದು ಕೆಜಿಗೆ 70 ಸಾವಿರ ರೂಪಾಯಿ ಗಡಿ ತಲುಪಿತ್ತು. ಈ ದರ ಈಗ 57,808 ರೂಪಾಯಿ ಆಗಿದೆ.
ಎರಡು ವರ್ಷಗಳ ಹಿಂದೆಷ್ಟಿತ್ತು?
2018 ನವೆಂಬರ್ ತಿಂಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಕೇವಲ 30 ಸಾವಿರ ರೂಪಾಯಿ ಇತ್ತು. ನಂತರದ ದಿನಗಳಲ್ಲಿ ನಿಧಾವಾಗಿ ಚಿನ್ನದ ಬೆಲೆ ಏರಿಕೆ ಕಂಡಿತ್ತಾದರೂ, 35 ಸಾವಿರದ ಆಸುಪಾಸಿನಲ್ಲೇ ಇತ್ತು. ಕೊರೋನಾ ವೈರಸ್ ಕಾಲಿಟ್ಟ ನಂತರದಲ್ಲಿ ಚಿನ್ನದ ದರ ಮಿತಿ ಮೀರಿ ಏರಿಕೆ ಕಂಡಿತ್ತು.
ದೀಪಾವಳಿಗೆ ಸಿಕ್ಕಿತ್ತು ಗುಡ್ನ್ಯೂಸ್
ಭಾರತದಲ್ಲಿ ಹಬ್ಬದ ಸಮಯದಲ್ಲಿ ಚಿನ್ನ ಖರೀದಿ ಜೋರಾಗಿರುತ್ತದೆ. ಇದೇ ಕಾರಣಕ್ಕೆ ಬೇಡಿಕೆ ಹೆಚ್ಚಾಗಿ, ಆಭರಣದ ದರ ಕೂಡ ಏರಿಕೆ ಕಾಣುತ್ತದೆ. ಆದರೆ, ಈ ಬಾರಿ ದೀಪಾವಳಿಯಂದು ಗ್ರಾಹಕರಿಗೆ ಖುಷಿ ಸುದ್ದಿ ಸಿಕ್ಕಿತ್ತು. ದೀಪಾವಳಿ ಹಬ್ಬದ ಸಯಮದಲ್ಲೂ ಚಿನ್ನದ ದರ ಇಳಿಕೆ ಕಂಡಿತ್ತು.
ಚಿನ್ನದ ದರ ನಿರ್ಧಾರವಾಗುವುದು ಹೇಗೆ?
ಸಾಕಷ್ಟು ಅಂಶಗಳು ಚಿನ್ನದ ಬೆಲೆಯನ್ನು ನಿರ್ಧಾರ ಮಾಡುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಚಿನ್ನದ ಮಾರುಕಟ್ಟೆ, ವ್ಯಾಪಾರ ಯುದ್ಧ, ಡಾಲರ್ ಮೌಲ್ಯ ಸೇರಿ ಸಾಕಷ್ಟು ವಿಚಾರಗಳು ಚಿನ್ನದ ಬೆಲೆಯ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಕೊರೋನಾ ವೈರಸ್ ಬಂದ ಸಂದರ್ಭದಲ್ಲಿ ಜನರಿಗೆ ಹೂಡಿಕೆ ಮಾಡಲು ಯಾವುದೇ ಕ್ಷೇತ್ರಗಳು ಸಿಕ್ಕಿರಲಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗಿದ್ದರು. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.
ಇದನ್ನೂ ಓದಿ: KR Market ನೈಟ್ ಬೀಟ್ ಪೊಲೀಸರಿಗೆ ಸಿಕ್ತು ರಾಶಿ ರಾಶಿ ಚಿನ್ನ, ಎಲ್ಲಿ.. ಎಲ್ಲಿ? ನೀವೂ ನೋಡಿ